ಶುಕ್ರವಾರ, ಅಕ್ಟೋಬರ್ 21, 2011

ಈ ನಿನ್ನ ಹಠವೇಕೆ..?

ಶ್ವಾಸವ ಮರೆತು ಮಡ್ಡಿಯಾದ ಜಡ ಬಂಡೆಯಿದು 
ಕುಟ್ಟಿ ಕೆಡುವಿ ಕೆತ್ತಿ ರೂಪಿಸುವ ಹಠವೇಕೆ.
ಹೇ ಸರಳ ಸುಂದರ ತಂಗಾಳಿ
ಸಾಧ್ಯವೇ ನಿನಗಿದು? 
ಸುಮ್ಮನೆ ಇದ್ದುಬಿಡು ; ಆಗುವ ಬದಲು ಹೈರಾಣ.

ಇಂದ್ರಿಯಗಳ ಕೊಂದು 
ಕುರುಡ ಜಡ ಮೌನಿಯಾಗಿ 
ಏಕಾಂತ ಧ್ಯಾನಗಳಲ್ಲೇ ಮರೆಯಾಗಲಿರುವೆ.
ಎನಗೇಕೆ ಕಿವಿ-ಮೂಗು-ಕಣ್ ಮನಗಳ 
ಮೂಡಿಸಿ ; ಕೂಡಿಸಿ
ಭಾವರೂಪ ನೀಡ ಹೊರಟಿರುವೆ.


ನೀಡುವುದಾದರೆ ನೀಡು 
ನೋವಿಲ್ಲದ ಮನವ 
ನೆನಹುಗಳಿಲ್ಲದ ಕಂಗಳ
ಮಾಧುರ್ಯದ ಅರಿವಿಲ್ಲದ ಕರ್ಣಗಳ.
ಮಡಿದ ಹೃದಯಾಂತಕರಣಗಳಿಗೆ 
ಪುನರ್ ಜನ್ಮವೀಯಲೇ ಬೇಕಿದ್ದರೆ ಬಾ
ಸೇರು ಈ ತನುಮನಕೆ ಶುದ್ದ ಶ್ವಾಸವಾಗಿ.

-ಶರತ್‌ ಚಕ್ರವರ್ತಿ.




1 ಕಾಮೆಂಟ್‌: