ಸೋಮವಾರ, ಡಿಸೆಂಬರ್ 10, 2012

ಹಡೆದವಳು

ಅಬ್ಬರಿಸಿ ಗೀಳಿಡುವ ಕಡಲಲಿ 
ಹುಟ್ಟಿಲ್ಲದ ದೋಣಿಗೆ ಅಂಬಿಗಳು
ಅಂಬೆಗಾಲಿಗೆ ನೆಲ ಗೀರದಂತೆ
ಅಂಗಳವ ಕಾದಳು
ರಕ್ತಬಸಿದು ಅಮೃತ ಎರೆದಳು 
ಗುಳಿ ಕೆನ್ನೆ ಕಂಡು
ಕಣ್ಣೀರ ಮರೆತವಳು
ಹಡೆದವಳು
; ಹೊತ್ತು ನಡೆದ ತೇರವಳು.

ಬರಬಂದು ಬಿರುಬಿಟ್ಟ ನೆಲದಲಿ 
ಚೇತನ ತುಂಬಿದ ಮಳೆಯವಳು
ಮೂಲೆ ಮೊಡಕುಗಳ ನೀವಿ 
ಅಂದಕೊಟ್ಟಳು
ಹೊತ್ತಿನ ಕೂಳು ಅರಿಕೆ
ಆದಿತೆಂದು ವ್ರತವೆಂದಳು
ದೃಷ್ಟರ ದೃಷ್ಟಿಗೆ ಬೆಂಕಿಯಿಟ್ಟು
ಲಟಿಕೆ ಮುರಿದವಳು
ನೆಲೆ ಅವಳು 
;ನನ್ನ ತಲೆ ಮೇಲಣ ಸೂರವಳು.

ಕೇಳಿದೆಲ್ಲವ ನೀಡುತಾ
ಮಾಡಿದೆಲ್ಲವ ಸಹನೆಯಲಿ ಸಹಿಸುವ 
ಧರೆಯವಳು
ನಗುವ ನನ್ನ ಮುಖವಾಡವ ಕಂಡು 
ನೆಮ್ಮದಿಯ ನಿಟ್ಟುಸಿರಾದವಳು
ನಾ ಸೋತುನಿಂತ ಪಂದ್ಯವೇ ತಪ್ಪೆಂದು 
ಹೀಗಳೆದವಳು
ಉತ್ಸಾಹದಲ್ಲಿ ನಾ ಕೆಮ್ಮಿದನ್ನೂ
ಚೆಂದದ ಕವಿತೆ ಎಂದವಳು
ಮರೆಯಲೇ ಹನಿಗಣ್ಣ ತೀಡಿ
ನಗುವವಳು 
ತನ್ನ ಬೊಗಸೆಯಲೇ ಈ ಬದುಕ ತುಂಬಿಕೊಟ್ಟ 
ತಾಯವಳು ; ನನ್ನ ತಾಯವಳು.



-ಶರತ್ ಚಕ್ರವರ್ತಿ.

ಯುಗಾದಿ

ಹೂದೋಟ ; ನೂರಾರು ಹೂ ಗಿಡಗಳ ನಡುವೆ
ಬಣ್ಣ-ಆಕಾರ ಕನಿಷ್ಟ ಸುಗಂಧವೂ ಇಲ್ಲದ
ಹೂವು ಅದು ; ಹೆಸರಿಗೆ ಮಾತ್ರ
ಚಂದದ ಹಸಿರು ಬಳೆಯ ಕೈಗಳು ಮುರಿದವು
ಓರಗೆ ಹೂಗಳ ಕುತ್ತಿಗೆಯ ; ಕಟ್ಟಿದರು ಮಾಲೆಯ
ಅವಲಕ್ಷಣವೇ ಮೈತಳೆದ ಹೂ
ತಾಕಲಿಲ್ಲ ಯಾರ ಕಣ್ಣಿಗು ; ಯಾರ ಕೈಗು
ಉಸ್ಸೆಂದು ಉಸಿರು ಬಿಟ್ಟಿತು
ನಿರಾಳ ; ಮರುಕ್ಷಣ ತಲ್ಲಣ
ನನ್ನೇಕೆ ಮುರಿಯಲಿಲ್ಲ ; ಕಟ್ಟಲಿಲ್ಲ.

ಓರಗೆಯವರೊಬ್ಬರೂ ಉಳಿದಿಲ್ಲ
ಅರಳುಗಣ್ಣುಗಳ ಅರಳಿಸುತ್ತಿರೋ ಹಸುಗೂಸುಗಳನ್ನೂ
ಬಿಡಲಿಲ್ಲ ; ನನ್ನೇಕೆ ಮುಟ್ಟಲಿಲ್ಲ
ಸುತ್ತ ಹಾಡಿ ನಗುತ್ತಿದ್ದ ಗಂಧವೆಲ್ಲಾ ಮಾಲೆಯಾಗಿ
ಸೇರಿದವು ದೇವರ ಗುಡಿಗೊ
ಮತ್ಯಾರದ ಮುಡಿಗೊ ; ಸತ್ತವರೆಡೆಗೊ
ಇಲ್ಲಿ ಮತ್ತದೇ ಪ್ರಶ್ನೆ ; ನನ್ನೇಕೆ ಮುಟ್ಟಲಿಲ್ಲ

ಕುತ್ತಿಗೆ ಮುರಿಸಿಕೊಂಡು ಮಾಲೆಯಾಗಿ ಮೆರೆದು
ಕಸವಾಗಿ ಮುದುಡಿ ಕೊಳೆತು ಗಂಧ ಕಳೆದು
ದುರ್ಗಂಧವೂ ಮುಗಿಯಿತು ; ನನ್ನೇಕೆ ಮುಟ್ಟಲಿಲ್ಲ
ಪಾಲ್ಗುಣನು ಬಂದಾಗ ತಲೆಕೊಡವಿ ನಿಂತ
ಮರಗಳೆಲ್ಲ ಬೋಳು ; ಉದುರಿದೆ ನಿರ್ಗಂಧ
ಹಪಹಪಿಸಿದೆ ; ಪರಿಪರಿ ಬೇಡಿದೆ
ದಾರಿಹೋಕನೇ ಇನ್ನಾದರೂ ತುಳಿದು ಹೋಗು
ದೊರಕಲಿ ಜೀವನ್ಮುಕ್ತಿ
ಮೂಡಲ ಗಾಳಿ ಬೀಸಿದೆ
ಮತ್ತೆಲ್ಲೋ ಹಾರಿದೆ ; ಇನ್ನೂ ಯಾರು ತುಳಿದಿಲ್ಲ.

ಪಾಳಿ ನೆನೆದು ದಢಬಡಿಸಿ ಬಂದ ಚೈತ್ರನಿಗೆ
ಮೈಯೆಲ್ಲಾ ಹಸುರು ; ಇಬ್ಬನಿಯ ಬೆವರಬಿಂದು
ಗೂಡುಬಿಟ್ಟು ದಾರಿ ಮರೆತಿದ್ದ ಬಳಗವೆಲ್ಲಾ
ಹಿಂದಿರುಗಿ ಚಿಯ್-ಚುಯ್ ಗುಡುತ್ತಿವೆ
ಬರಬೇಗೆ ಕಳೆದು ಚಿಗುರೆಲೆಗೂ ಸ್ವಾಗತ
ಮತ್ತದೇ ಹೂದೋಟ ; ಮತ್ತವೇ ಹೂ ಗಿಡಗಳ ನಡುವೆ…
ಹುಡುಕಲಾರದೇ ಕೈಚೆಲ್ಲಿದ್ದೇನೆ ; ಅರ್ಥದ ವ್ಯರ್ಥವನ್ನರಿತು.


-ಶರತ್ ಚಕ್ರವರ್ತಿ.

ಶುಕ್ರವಾರ, ಡಿಸೆಂಬರ್ 7, 2012

ತ್ರಿಶಂಕು

ಮೇಘನು ಒಮ್ಮೊಮ್ಮೆ ನಗುತ್ತಾನೆ ; ಮಳೆ ಸುರಿಸಿ
ಕೆಲವೊಮ್ಮೆ ಬಿಕ್ಕಳಿಸುತ್ತಾನೆ
ಮಳೆ ಸುರಿಸುತ್ತಲೆ
ಮತ್ತೂ ಒಮ್ಮೆ ಮಂಕಾಗುತ್ತಾನೆ
ಮರುಳನಾಗುತ್ತಾನೆ
ತಲೆ ಕೆದರಿ ಹುಚ್ಚನಾಗುತ್ತಾನೆ

ಮರುಭೂಮಿಯಲಿ ಅತ್ತು
ಮಲ್ಲಿಗೆ ನಗು ಅರಳಿಸುತ್ತಾನೆ
ದಾರಿಗಳಿಲ್ಲದೆಡೆ ತೂರಿಕೊಳ್ಳುತ್ತಾನೆ
ದಿಗಂಬರನಾಗುತ್ತಾನೆ
ಒಮ್ಮೆ ಬೀಗುತ್ತಾ ಒಮ್ಮೆ ಭಾಗುತ್ತಾ
ಮತ್ತೊಮ್ಮೆ ಬೇಗೆಯಲಿ ಬಳಲುತ್ತಾನೆ

ನೆನೆ-ನೆನೆದು ತಣಿಯುತ್ತಾನೆ
ತೆರೆದುಕೊಂಡು ಮುಕ್ತನಾಗುತ್ತಾನೆ
ಅರಳದೇ ನರಳಿ ಮರಳುತ್ತಾನೆ
ಕಿಚ್ಚಾಗುತ್ತಾನೆ-ಪೆಚ್ಚಾಗುತ್ತಾನೆ
ಸ್ವಚ್ಚನಾಗಲು ಹೋಗಿ ಸ್ವೇಚ್ಚನಾಗುತ್ತಾನೆ
ಅತ್ತ ಅರಳದೇ ಇತ್ತ ಉರುಳದೆ
ನಡುವಲ್ಲೇ ನಡುವಾಗಿ ನೋಯುತ್ತಾನೆ

ದಣಿಯುತ್ತಾನೆ ತೀರದಲಿ ಚಿಪ್ಪಾಗುತ್ತಾನೆ
ಕೆರಳೋ ಅಲೆಗಳಲಿ ಕುಣಿಯುತ್ತಾನೆ
ಬೆಂಕಿ ಕೆಂಡ-ಕೊಂಡಗಳಲಿ ಉರಿಯುತ್ತಾನೆ
ಅಸ್ಥಿ ಅಸ್ಥಿತ್ವಗಳ ಸುಟ್ಟುಕೊಂಡರೂ
ಕೊನೆಯಾಗದೇ ಉಳಿಯುತ್ತಾನೆ.

-ಶರತ್ ಚಕ್ರವರ್ತಿ.

15-04-2012

ಬುಧವಾರ, ಡಿಸೆಂಬರ್ 5, 2012

ಕತ್ತಲು

ಇಲ್ಲೆಲ್ಲಾ ಕತ್ತಲುಮಳೆ ನಿಂತು ಮಣ್ಗವಲು
ಚಿಟ್ರಿಡಿಸೋ ಚೀರುಳಗಳ ಗುನುಗು

ಅಲ್ಲಲ್ಲಿ ಇಣುಕಿದೆ
ಬೆಳಕಿನುಳಗಳು ಸುತ್ತಲು
ಕಾಣದಿದೆ ಕತ್ತಲಲಿ
ಬರಿ ಮೈಯ್ಯ ಬೆತ್ತಲು
ಬೆಳಕಿನೂರ ದಾರಿ ಕಳೆದು
ಅತ್ತ ಇತ್ತ ಸುತ್ತ
ಎತ್ತೆತ್ತಲೂ ಕತ್ತಲು

ಕತ್ತಲ ಕಲಕಲಕಿ
ಮೂಡಿದೆ ಕತ್ತಲಾಕೃತಿ
ತೆರೆಮರೆಗಳು ಬೇಕಿಲ್ಲ
ಬೆಳಕಿನ ಬಣ್ಣಗಳರಿವಿಲ್ಲ
ಸರಳಸುಂದರವೀ ಕತ್ತಲು
ಕತ್ತಲ ದಾರಿ ಕತ್ತಲ ಪಯಣ
ಕತ್ತಲಿನೂರ ದೊರೆಯೇ ಕತ್ತಲು
ಸಭ್ಯ ಸೊಬಗಿನ ನವ್ಯ ಬಗೆಗಿನ
ಸೊಗಡೇ ಕತ್ತಲು
ದಿವ್ಯ ಜ್ಞಾನದ ಹೊಳಹೇ ಕತ್ತಲು

ಅಂಧರನರಿತು ಮರುಗಿ ಅಂಧಾಗಿದೆ
ಮೂಗನೆದೆಯ ರಾಗಗತ್ತಲು
ಕಿವುಡನಾಳದ ಮೌನಗತ್ತಲು
ನನ್ನೆದೆಯ ಮರುಳಗತ್ತಲು
ಕತ್ತಲಿಗೆ ಕತ್ತಲೇ ಸುತ್ತಲು
ಕತ್ತಲಿಗೆ ಕತ್ತಲೇ ಎತ್ತೆತಲು

-ಶರತ್ ಚಕ್ರವರ್ತಿ.
20-06-12

ಮಂಗಳವಾರ, ಡಿಸೆಂಬರ್ 4, 2012

ಕವಿತೆಯೆಂದರೆ..

ಕವಿತೆಯೆಂದರೆ ಮಾತು; ಚಂದದ ಮಾತು
ಮಾತಿಗಿಂತ ಮೌನ ಚಂದ
ಹಾಗಾದರೇ ಮೌನವೊಂದು ಕವಿತೆಯೇ!?

ಸ್ವರ ಕರಗಿ ಶೃತಿ ಮರೆತು

ಲಯ ಕಾಣದೇ ಹರಿದರೂ
ಮೌನವು ಚಂದವೇ
ಎಲ್ಲಿಯೂ ಉಕ್ಕದೇ
ಕೆಲವೆಡೆಯಲ್ಲೂ ಬಿಕ್ಕದೇ
ಕ್ಷಿತಿಜದ ಹೊಳಹು ಹೊಳೆಯದ
ಮೌನವೂ ಕೂಡ ಚಂದವೇ
; ಚಂದದ ಕವಿತೆಯೇ!?

ಮುತ್ತಾಗಿಸೋ ಮಾತು ಹರಿದು

ಕೂಡಿ ಕವಿತೆಯಾಗುವ ಸಲುವೆ
ಮೌನದ ಕುತ್ತಿಗೆ ಹಿಸುಕಿರೇ
ಉದುರಿವೆ ಮಾತುಗಳು
ಮುತ್ತುಗಳು; ಚಂದದ ಕವಿತೆಗಳು

ಹರಡಿ ತಿವಿದು ಹುಡುಕದಿರಿ

ಶೃತಿ - ಲಯ - ತಾಳ
ಬೆತ್ತಲ ಸಿರಿಯೇ ಅಂದ
ಸಿಂಗಾರದ ಸೊಬಗಿಗಿಂತ.


-ಶರತ್ ಚಕ್ರವರ್ತಿ.
16-06-12

ಗುರುವಾರ, ನವೆಂಬರ್ 29, 2012

ನಿನ್ನೆಸರು.

ಕೆಲಸವಿಲ್ಲದೇ ಖಾಲಿ ಕುಳಿತಾಗ
ಕೈಗೆ ಸಿಕ್ಕ ಪೆನ್ನು
ನಿನ್ನೆಸರ ಬರೆಯಲೊರಟು
ಕೈಬೆದರಿ, ಅಕ್ಷರಗಳು
ಒತ್ತಾಕ್ಷರಗಳ ನುಂಗಿಯೂ
ನುಂಗಲಾರದೇ ಗಂಟಲುಕಟ್ಟಿ
ಉಸಿರುಸಿಕ್ಕಿ ಹೊರಲಾಡಿ
ಬೆವೆತರೂ ಹೊರ ಬರದೆ
ಒಡಲೊಳಗೆ ಉಳಿಯಿತು
ನಿನ್ನೆಸರು..!!

ಏನಿದೆ ನಿನ್ನೆಸರಲಿ..?
ನೆನೆದೊಡನೆ ದಿಗಿಲಾಗಿ
ಎದೆಗೂಡಿಗೆ ಬೆಂಕಿಬಿದ್ದು
ನನ್ನತನವೆಲ್ಲಾ ಸುಟ್ಟು
ಕರಕಲಾಗಿ
ಕಿವಿಗಳು ಬಿಸಿಯಾಗಿ
ರೋಮಗಳು ಮುಳ್ಳಾಗಿ
ಕಣ್ಗಳ ತೇವವಾಗಿಸುವ
ಹೆಚ್ಚಲ್ಲದ ನಾಲ್ಕು ಗಣದ
ಮೂರು ಅಕ್ಷರಗಳು.

-ಶರತ್ ಚಕ್ರವರ್ತಿ.

ಬುಧವಾರ, ನವೆಂಬರ್ 28, 2012

ಸೂತಕ.

ಭಾವೋನ್ಮಾದದ ಬಸಿರುಕಟ್ಟಿ
ಪ್ರೇಮಕಾವ್ಯ ಬರೆವಾಗ
ದಟ್ಟಡವಿಯಲಿ
ನಟ್ಟನಡುರಾತ್ರಿ ಕೈಕೊಟ್ಟು
ದಿಕ್ಕೆಟ್ಟು ನಿಂತ ರೈಲಿನಂತೆ
ಮುಂದರಿಯದೆ ನಿಂತಿದೆ
ಪೆನ್ನು ; ಷಾಯಿ ಮುಗಿದು.

ಮಸಿಯಿಡಿದ ಗೌ..ಗತ್ತಲು
ಮೈಬಿಚ್ಚಿದ ಬಿಳಿಹಾಳೆ
ಪದಗಳಿಲ್ಲದ ಪ್ರೇಮಕಾವ್ಯ
ಶಕುನಗಳ ಅಪಶಕುನದಲಿ
ಮನವಿಡಿ ಸೂತಕದ
ಛಾಯೆ ; ಇದು ಒಲವ ಸಾವೇ..?

-ಶರತ್ ಚಕ್ರವರ್ತಿ.

ಮಂಗಳವಾರ, ನವೆಂಬರ್ 27, 2012

ಆರ್ತನಾದ

ನಾಲಿಗೆಯ ನರಸತ್ತುರುಚಿಸತ್ವದ ಸತ್ ಸ್ವರಗಳ
ಸ್ವರ ಹರಿದು ಸರಿಗಮಗಳು ಪರಿತಪಿಸಿ
ಸ್ವರಸಂಗಮಗಳು ಮುರುಟಿ 
ಮರುಗುತ್ತಿವೆ ; ಕೊರಗುತ್ತಿವೆ.
ಸವೆದ ತಂಬೂರಿಯ
ಒಡೆದ ದನಿ
ಆರ್ತನಾದವ ನುಡಿದು
ಅಪಶಕುನಕೆ ಶಕುನಗಳ ಕೂಡಿ
ಮಿಡಿಯದೇ ನುಡಿದಿದೆ ಮೌನವೀಣೆ
ಮುರಿದು ಬಿದ್ದಿದೆ ಹೃದಯಕೋಣೆ.

-ಶರತ್ ಚಕ್ರವರ್ತಿ.

ಸೋಮವಾರ, ಜೂನ್ 25, 2012

ಅಂಧಕಾರ

ನಿಶ್ಚಲ ಅಂಧಕಾರವ ಬೆಳಗಿದೆ ಕತ್ತಲಜ್ಯೋತಿ
ಮನ-ಮನೆಯ ತುಂಬೆಲ್ಲಾ ಆವಿರ್ಭವಿಸಿದೆ
ದಿಗ್ಮೂಡತೆ ಕಿಟಕಿ ಗೋಡೆಗಳ ಸದ್ದಿಲ್ಲದೆ ತಿಂದು
ಹೊಟ್ಟೆಯುಬ್ಬಿಸಿ ಮಲಗಿದೆ ಕರಿಮಸಿಗತ್ತಲೆ
ಇಲ್ಲೆಲ್ಲವೂ ನಿಶ್ಚಲ..


ಗಾಳಿಯಾಡಿದೆ ನಿಯ್ಯೋ ಮರ್ರೋ ಅರ್ತನಾದ
ಅಲ್ಲಲ್ಲಿ ಬಾವಲಿಗಳು ಬಡಿದಂತೆ ರೆಕ್ಕೆಗಳ
ತೆಂಗಿನ ಗರಿಗಳ ಸದ್ದು
ಆಚೆಗೋಡೆಯಿದ್ದ ಪಕ್ಕದಿಂದೊಂದು ಹೊರಟ
ನಿಟ್ಟುಸಿರ ರವಕೆ ರವೆಯಷ್ಟು ಅಲುಗಿಲ್ಲ
ಕಿವಿಗಡಚಿಕ್ಕೋ ಮೌನ


ಸ್ಪಷ್ಟ ಆಕಾರವಿಲ್ಲ ಆಲೋಚನೆಯಿಲ್ಲ 
ಇದ್ದರೂ, ಕತ್ತಲೆಗದರ ಅರಿವಿಲ್ಲ
ಅರಿವನ್ನೇ ಅರಿದು ನುಂಗಿದ ಅಂಧಕಾರ
ಹಗಲುವೇಷದ ಚಂಚಲಬಾಹುಗಳ ಸುಟ್ಟು
ಸುಡುತ್ತಲೇ ಬೆಳಗಿದೇ ಕತ್ತಲಜ್ಯೋತಿ.


-ಶರತ್ ಚಕ್ರವರ್ತಿ.

ಕಡೆಮುಳ್ಳು ಮುರಿದು

ಗುಂಡಿ ಗೊಸರುಗಳ ಮುಚ್ಚಿ ದಿರಿಸು ದಿಣ್ಣೆಗಳ ಸವೆಸಿ 
ಸಮನೆಲ ಸಮಲಯಗಳಲಿ 
ನೀ ಕಟ್ಟಿದ ಕೆರೆ ಏರಿ; ಪ್ರೇಮದಾರಿ
ಈಗ ಕಾಮಗಾರಿ ನಿಂತ ಸೇತುವೆ ದಾರಿ.

ಘಮ ಘಮಿಸೊ ಗೋಧೂಳಿಯ 
ಸೂರ್ಯಾಸ್ತದಲಿ ಕಿಂಕಿಣಿ ನಾದವಿಲ್ಲ 
ಪ್ರೇಮದಾರಿಯಲಿ ಪ್ರೇಮವಿರದೇ 
ಕುರುಚಲು ಪೊದೆ ಬೆಳೆದು 
ಹುತ್ತಗಳು ತಲೆಯೆತ್ತಿ ಹಾವುಗಳ್ ಹರಿದು 
ವಟಗುಟ್ಟಿದೆ ಪ್ರಾಣಭಯದಿ ಎದೆಗೂಡಿನ ಕಪ್ಪೆ

ಮೈ ಮೂತಿಗೆ ಕೆಸರು ಮೆತ್ತಿಕೊಂಡು 
ಮೈಲಿಗಲ್ಲು ಗೋರಿಗಲ್ಲಾಗಿ
ನಡುರಾತ್ರಿಯ ಕನಸುಗಳ ಸ್ಖಲಿಸುತ್ತಿವೆ 
ಚೇತನ ಎರೆವ ಗರ್ಭಕ್ಕಾಗಿ ಹಾತೊರೆದು
ನಿತ್ಯ ಸಾಯುತ್ತಲೇ ಇವೆ


ಆರಂಭದರಿವಿಲ್ಲದೇ ಬಂದು
ಮತ್ತೊಂದಡಿ ಮುಂದಿಡಲಾರದೇ ಸೋತು ಕುಳಿತಿದೆ
ನಕ್ಕು ಮುಂದರಿಯಲು ಮುಖವಾಡವಿಲ್ಲವದಕೆ
ಪಾಳು ಎಂದಾರೋ 
ಎಂಬ ಅಳುಕೊಂದೆ ಎದೆತುಂಬ


ಕಾಯುತ್ತಿದೆ ನಿನ್ನ ಪಾದ ಸ್ಪರ್ಶಕೆ 
ಮಣ್ಣೆಂಟೆ ಕೂಡ ಹುಡಿಯಾಗಲು
ಕಾದಿದೇ ನೀನಿರದೇ ಕಾಲವೂ ಕೂಡ 
ನಿಂತಲ್ಲೇ ನಿಂತಿದೆ ಕಡೆಮುಳ್ಳು ಮುರಿದು
ಕಾಲವಶಕೆ ಸನ್ನಧನಾಗಿ.


-ಶರತ್ ಚಕ್ರವರ್ತಿ.

ಅಹಲ್ಯೆಯಲ್ಲದ ನನ್ನ ಮನ

ಕೋಟಿ ಸೂರ್ಯೋದಯ ಚಂದ್ರೋದಯಗಳ ಕಂಡರೂ
ಬಿಡದೇ ಬಿಸಿಲು ಮಳೆ ಚಳಿಗಳಲಿ ಮಿಂದರೂ
ಕೋಟಿ ಋತು ವಸಂತಗಳು ಸಂಧರೂ
ಒಂಟಿಯೇ ಈ ಬಂಡೆಗಲ್ಲು


ಚಿಟಿಚಿಟಿ ಮಳೆಹನಿಗಳ ಸಂಗೀತ 
ಉಲಿದು ನುಲಿದು ನಲಿದು ಹಾಡುವ ಗುಬ್ಬಿ
ಗೊರವಗಳ ಒಡನಾಟ 
ಗುಂಯ್ ಗುಡುವ ಗೊಂಡಾರಣ್ಯದ ನಟ್ಟನಡುವೆ 
ಸಾವಿರ ಬಂಡೆಗಳ ಗುಡ್ಡದ ಗುಡ್ಡೆಯಲ್ಲಿದ್ದರೂ 
ಒಂಟಿಯೇ.


ಗುಡುಗಿ ಸಿಡಿಲು ಸಿಡಿದರೂ ಪ್ರಾಣಭಯವಿಲ್ಲ 
ಜಡಿ ಮಳೆಬಡಿದರೂ ಒಂದಿನಿತು ಅಲುಗಿಲ್ಲ 
ಗಾಳಿ ಹೊತ್ತು ತಂದ ಕಾಡುಮಲ್ಲೆ ಕಂಪಿನ ಸಂಘವೂ 
ಬೇಕಿಲ್ಲ ಯಾರ ಸಂಘವು.


ಹೆಪ್ಪಾದ ಜಡವಿದು ಯಾರ ಅಳುಕಿಲ್ಲ ಹಂಗಿಲ್ಲ
ಮಾತಿಲ್ಲ ಉಸಿರ ಸದ್ದಿಲ್ಲ
ಬಿಸಿಲು ಬೇಗೆಗಳ ಗೋಜಿಲ್ಲ 
ಒಡಲ ಒಡೆದು ನೂರು ಚೂರು ಮಾಡುವರೆಂಬ
ಅರಿವೂ ಇಲ್ಲ.


ಇದೆ...!

ಜಡವಿದ್ದರೂ ಆಂತರ್ಯ ಕಿವುಚೋ ನೋವಿದೆ

ಒಳಗೆ ಕುಳಿತು ಕಾದು ಕುದಿದ ಬಿಸಿಯುಸಿರಿದೆ
ಝರಿ ತೊರೆಯ ಮೀರಿಸೋ ಕಣ್ಣೀರಿದೆ
ಮೌನದ ಕಣ್ಕಟ್ಟೆಯೊಡೆದು ಹೊರಬರಲು ಕಾದಿದೆ

ಒಂಟಿತನವ ಪಾದದಿ ಮೆಟ್ಟಿ ಕೊಲುವ ನವಿರು ಸ್ಪರ್ಶಕೆ 
ಕಾದಿದೆ ನವ ಚೈತನ್ಯಕೆ ಅಹಲ್ಯೆಯಂತೆ,
ಅಹಲ್ಯೆಯಲ್ಲದ ನನ್ನ ಮನ.

-ಶರತ್ ಚಕ್ರವರ್ತಿ.

ನಿರಂತರ

ಒತ್ತರಿಸೋ ಗಾಳಿಗೆ ತಲೆಕೊಟ್ಟು ತೂರಾಡಿದೆ 
ಮನಸ್ಸು ಬಸ್ಸಿನ ಬಾಗಿಲಲಿ ನಿಂತ ಕಂಡಕ್ಟರ್`ನಂತೆ
ಜೀವವಿಮೆಯಿಲ್ಲ ಜೀವ ಭಯ ಮೊದಲಿಲ್ಲ 
ಒಳಗೆ ಗಿಜಿಗುಡುವ ಗದ್ದಲ
ಇಕ್ಕಟ್ಟಿನಲ್ಲೇ ಸುಖವೆಂದೋ
ಒಬ್ಬನ ತೋಳು ಮತ್ತೊಬ್ಬ ತಬ್ಬಿ 
ಮತ್ತೊಬ್ಬನ ಉಸಿರು ಮಗದೊಬ್ಬ ಕುಡಿದು 
ಉಸಿರುಗಟ್ಟಿ ನಿಂತಿವೆ ಆಲೋಚನೆಗಳು


ನಿಲ್ದಾಣಗಳೆಷ್ಟೋ ಸಂಧರೂ
ಹತ್ತುವವರತ್ತಿ ಇಳಿಯುವವರು ಇಳಿದರೂ 
ಇಳಿದಿಲ್ಲ ಬಸ್ಸಿನ ರಶ್ಶು 
ಕಾಲಬುಡದಲಿ ಬಿದಿರ ಬುಟ್ಟಿಗಳು 
ಬಸ್ ಛಾವಣಿ ತುಂಬೆಲ್ಲಾ ತುಂಬಿದ ಮೂಟೆಗಳು
ಆಕಳಿಸಿ ತೂಕಡಿಸುವವರ ನಿದ್ದೆಗೆಡಿಸೊ
ಕೊಕ್ ಕೊಕ್ಕೋ ಕೋಳಿಗಳು ರೆಕ್ಕೆ ಬಡಿದು ನಿಂತಿವೆ 
ಗೊಂದಲಗಳು ಸಾವಿರಿದ್ದರೂ ನಡದೆ ಇದೆ 
ರಸ್ತೆ ಸವೆಸುವ ಗಾಲಿಯ-ಗಾಲಿ ಸವೆಸೋ ರಸ್ತೆಯ
ಬದುಕು ಸಾವಿನ ತಿಕ್ಕಾಟಗಳು.


-ಶರತ್ ಚಕ್ರವರ್ತಿ.

ಕನಸೇ ಸಾಕೆನಗೆ.

ನಿನ್ನ ಮಧುರ ಕನಸ ಕೊಂದು ಮತ್ತೊಂದು ಬೆಳಗು ಮೂಡಿದೆ
ಮೈಮುರಿದು ಆಕಳಿಸಿದ ಹೊದಿಕೆ ಮುದುಡಿ
ಮಲಗಿದ ಕರಿಬೆಕ್ಕ ತಬ್ಬಿಹಿಡಿದು
ಗಲ್ಲಿ ನುಸುಳಿ ಮತ್ತೆಲ್ಲೋ ಚರಂಡಿ ಹಾರಿ ಕೇಕೆ ಹಾಕಿದ್ದ ಮನಸ್ಸು
ಕೊರಳಿಗೆ ಚೈನು ಧರಿಸಿ ಕುಳಿತಿದೆ
ಮಗುಮ್ಮಾಗಿ..

ಕೈಕಾಲುಗಳ ಕಳಚಿ ಪೆಟ್ಟಿಗೆಯೊಳಗೆ ಭದ್ರಗೊಳಿಸಿ
ನಿರ್ವಾತ ಕನಸುಗಳಲಿ ತೆವಳುವಾಗ
ಕಳೆದ ಚಾವಿಯ ತಡ-ಬಡ ತಡವುತ್ತಿರೇ
ಎದೆಬಡಿತವಷ್ಟೇ ಉಳಿದಿದೆ ಜೇಬಿನಲ್ಲಿ


ಬತ್ತಿದ ಕೆರೆಯಲಿ ಸತ್ತಮೀನುಗಳ ಹೆಕ್ಕುತ್ತಾ ಚಾಚಿದ ಕೊಕ್ಕು
ಅಲ್ಲೊಂದಿಷ್ಟು ಹರಿದು ಗಾಳಿಗೆ ತೂರಿಕೊಂಡು
ಚೆಲ್ಲಾಡಿದ ಬಯಕೆಗಳು
ಸ್ಮೃತಿಪಟಲವ ದತ್ತುಪಡೆದ ನೆನಪಿನಲ್ಲಿ
ಹುರಿದು ಹದಮಾಡಿದ ಖಡಕ್-ಖಾರದ
ಸಂಭಾಷಣೆಗಳು, ಹೀಗೆಯೇ ಬುಸುಗುಡುತ್ತಾ ಕುಳಿತ
ನಡುಮಧ್ಯಾಹ್ನ ಉರಿದಿದೆ


ಬಾಣಂತಿ ಕೋಣೆಯ ದೀಪದಂತೆ
ಸುಡುವ ಚಿತಾಗಾರದ ಬೆಂಕಿಯಂತೆ


ಹುಟ್ಟುವ ಹೊಸ ಆಲೋಚನೆಗೆ ಹಾರೈಕೆಯೂ ಇಲ್ಲೆ
ಸತ್ತ ಬಯಕೆಗಳಿಗೆ ಸಂಸ್ಕಾರವೂ ಇಲ್ಲೆ
ಹಗಲೆಲ್ಲಾ ಅಲೆದಾಡಿ ಗುದ್ದಾಡಿದ ಮೇಲೆ
ಸಂಜೆಗೆ ಮೋಡಗಳದ್ದೇ ಗೆಲುವು
ಸೂರ್ಯ ಮೆಲ್ಲಗೆ ತುಳಿದುಕೊಂಡು ತಣಿಯುವನು
ಗೆದ್ದರೂ ಸಾಯುವ ಭಾಗ್ಯ ಮೋಡಗಳದ್ದು; ಒಮ್ಮೊಮ್ಮೆ ಮಾತ್ರ


ಎಲ್ಲಾ ಮುಗಿಯಿತೆನ್ನುವಲ್ಲಿಗೆ ನಗುನಗುತ ಬರುವನು ಚಂದಿರ
ತಾರೆಗಳ ಶಾಲೆಯ ಮಾಸ್ತರ ಅವನು
ಅವನೊಡಗೂಡಿ ಮತ್ತೆ ಕ್ರಿಯೆಗೆ ತೊಡಗಿಕೊಳ್ಳುವವು
ನಿನ್ನದೇ ಮಧುರ ಕನಸುಗಳು
ಬೆತ್ತಲಿಗೆ ಕತ್ತಲ ಹೊದಿಸಿ ಮಲಗಿರುವೆ
ಮತ್ತೇಂದು ಬೆಳಕಾಗದಿರಲೆಂದು.

-ಶರತ್ ಚಕ್ರವರ್ತಿ.

ಶುಕ್ರವಾರ, ಜೂನ್ 1, 2012

ವಿಮುಖ



    ಚಳಿಗಾಲ. ಬೆಳಗಿನ ಇಬ್ಬನಿ ಹೂ ಎಲೆಗಳನ್ನು ಅಪ್ಪಿ ಮುದ್ದಿಸುತ್ತಿದೆ. ಇತ್ತ ಜೇಡವೊಂದು ತನ್ನ ಬಲೆಯನ್ನು ಸರಿಪಡಿಸುತ್ತಾ, ಗಾಳಿಗೆ ಅಲುಗಾಡುತ್ತಾ ಉಯ್ಯಾಲೆಯಾಡುತ್ತಿದೆ. ಆ ಜೇಡರಬಲೆಯನ್ನು ಸಹ ಇಬ್ಬನಿ ಮುತ್ತಿ ಮುತ್ತಿನ ಮಣಿಗಳಂತೆ ಹೊಳೆಯುತ್ತಿವೆ. ಈ ರಮ್ಯ ಸಮಯವನ್ನು ಬಿಳಿಹಾಳೆಯ ಮೇಲೆ ಇಳಿಸುತ್ತಾ ತನ್ನ ಕಲಾಚತುರತೆಯನ್ನು ತಾನೇ ಸವಿಯುತ್ತಾ ಆ ಬಣ್ಣಗಳಲ್ಲೇ ಮುಳುಗಿದ್ದಾನೆ ವಿಕಾಸ್.

"ವಿಕಾಸ ಯಾರೋ ಬಂದವ್ರೆ, ನೋಡಪ್ಪ"ಅಮ್ಮನ ಧ್ವನಿ ಕೇಳುತ್ತಲೇ ಮಾಡುತ್ತಿದ್ದ ಕಸುಬನ್ನು ಅರ್ಧಕ್ಕೆ ನಿಲ್ಲಿಸಿ ಹಿತ್ತಲಿಂದ ನಡೆದನು.

    ಬಂದಿದ್ದವನು ವಿಶ್ವನಾಥ. ವಿಕಾಸನ ಗೆಳೆಯ, ಜೊತೆಗೆ ಓದಿದವ. ಎಂ.ಕಾಂ ಮುಗಿಸಿ ಬೆಂಗ್ಳೂರಿನ ಕಾಲೇಜೊಂದರಲ್ಲಿ ಅಥಿತಿ ಉಪನ್ಯಾಸಕನಾಗಿದ್ದ. ಗೆಳೆಯರ ಭೇಟಿ ಕಾಫಿ ತಿಂಡಿ ಒಂದಿಷ್ಟು ಹರಟೆಗಳೊಂದಿಗೆ ನಡೆದು ವಿಕಾಸನ ಚಿತ್ರಗಳ ಕಡೆಗೆ ಬಂದಿತ್ತು. "ನಿನ್ನೆಲ್ಲಾ ಪೇಂಟಿಂಗ್ಸ್ ನು ಬೈಂಡಿಂಗ್ ಮಾಡ್ಸಿ ಇಟ್ಟಿರು, ನೆಕ್ಟ್ಸ್ ಟೈಮ್ ಬೆಂಗ್ಳೂರ್ ಚಿತ್ರಕಲಾ ಪರಷತ್ ಅಲ್ಲಿ ಎಕ್ಸಿಬಿಷನಿಗೆ ತಗೊಂಡೋಗನ. ಟೋಟಲ್ ಎಷ್ಟ್ ಪೇಂಟಿಂಗ್ಸ್ ಆಗಿದವೆ." ಎಂದು ಗೋಡೆಗಳ ಮೇಲಿದ್ದ ಒಂದು ಚಿತ್ರಪಟವನ್ನ ನೋಡುತ್ತಾ ಹೇಳಿದ ವಿಶ್ವ.

"ಎಕ್ಸಿಬಿಷನಿಗೆ ತಗೊಂಡೋಗೊ ಅಂತದ್ದು ಯಾವ್ದು ಮಾಡಿಲ್ಲ. ಒಂದೆರಡು ಬಿಟ್ರೆ ಬಾಕಿ ಎಲ್ಲ ಪೆನ್ಸಿಲ್ ಸ್ಕೆಚ್ಗಳು ಅಷ್ಟೇ".

"ಇನ್ನೂ ಟೈಮ್ ಐತಲಾ ನೀನ್ ಮಾಡು ಅಟ್ ಲೀಸ್ಟ್ ಒಂದೈವತ್ತಾದ್ರು ಮಾಡಿಟ್ಟಿರು"

"ಸರಿ ನೋಡ್ತಿನಿ" ಕುಶಲೋಪರಿಗಳು ಮುಗಿದಿದ್ದವು. ವಿಶ್ವ ಹೊರಟು ಹೋದ. ವಿಶ್ವನ ಮಾತುಗಳು ವಿಕಾಸನಲ್ಲಿ ಚೈತನ್ಯ ಮೂಡಿಸಿದರೂ ಒಂದು ರೀತಿಯಲ್ಲಿ ಚಿಂತೆಗೀಡು ಮಾಡಿದವು. ವಿಕಾಸ ಒಬ್ಬ ಕಡುಬಡವ. ತಂದೆ ಇದ್ದದ್ದೆಲ್ಲವ ಕಳೆದು ಸೋತು ಮೂಲೆಹಿಡಿದಿದ್ದನು. ತಮ್ಮನೊಬ್ಬ ಇನ್ನು ಓದುತ್ತಿದ್ದ. ಎರಡು ಎಮ್ಮೆಗಳನ್ನು ಕಟ್ಟಿಕೊಂಡು ಅವನ ತಾಯಿ ಹೇಗೋ ಸಂಸಾರ ತೂಗಿಸಿದ್ದಳು. ಇವನ ಬಿ.ಎ ಉಪಯೋಗಕ್ಕೆ ಬಾರದ್ದಾಗಿತ್ತು. ಊಟಕ್ಕೆ ಪಾಡು ಪಡುವಾಗ ಇನ್ನೆಲ್ಲಿಯ ಎಕ್ಸಿಬಿಷನ್. ಚಿತ್ರಬಿಡಿಸಲು ಬೇಕಾಗುವ ವಿವಿಧ ನಮೂನೆ ಪೆನ್ಸಿಲ್, ಐವರಿ ಶೀಟ್ಗಳು, ಪೋಸ್ಟರ್ ಬಣ್ಣ ಬ್ರಷ್ಷುಗಳನ್ನು ಕೊಳ್ಳಲು ಏನಿಲ್ಲವೆಂದರೂ ಸಾವಿರಾರು ರೂಗಳು ಬೇಕಿತ್ತು. ಅದರಲ್ಲಿ ಐವತ್ತು ಪೇಂಟಿಂಗ್ಸ್ ಎಂದರೇ ಅವನಿಗೆ ಹಲವಾರು ಸಾವಿರಗಳನ್ನೇ ಖರ್ಚು ಮಾಡಬೇಕಾಗಿತ್ತು. ತರುವುದು ಎಲ್ಲಿಂದ? ಆದಾಯ ಶೂನ್ಯ. ಕೆಲವು ಸ್ನೇಹಿತರು ಬಣ್ಣ ಕೆಲವು ಬ್ರಷ್ ಗಳನ್ನು ಗೀಫ್ಟ್ ಎಂದು ನೀಡಿ, ಅವನ ಕೆಲವು ಪೇಂಟಿಂಗ್ಸನ್ನು ಅದೇ ಗಿಫ್ಟ್ ಹೆಸರಿನಲ್ಲಿ ತೆಗೆದುಕೊಂಡು ಹೋಗಿದ್ದರು. ಅವನ ಬಡತನ ಅವನನ್ನು ಹತಾಶನನ್ನಾಗಿಸಿತ್ತು.

    ಆದರೂ ಅವನೊಬ್ಬ ಅದ್ಬುತ ಚಿತ್ರಕಲೆಗಾರ. ಎದುರಿದ್ದ ದೃಶ್ಯಕ್ಕೆ ಜೀವತುಂಬಿ, ಭಾವವುಳ್ಳ ಹನಿಗವನಗಳೊಂದಿಗೆ ಅದ್ಬುತ ದೃಷ್ಯಕಾವ್ಯವನ್ನೇ ಹುಟ್ಟುಹಾಕುವಂತ ನಿಪುಣನಾಗಿದ್ದ. ಮುಂದೊಂದು ದಿನ ದೊಡ್ಡ ಕಲಾವಿದನಾಗಿ ನಾಡಿಗೆ ಹೆಸರಾಗಬೇಕೆಂಬುದು ಅವನ ಆಶಯ; ಗುರಿ ಕೂಡ.

    ಯಾವುದಾದರೂ ಸಣ್ಣ ಕೆಲಸಕ್ಕೆ ಸೇರಿ, ಜೊತೆ ಜೊತೆಗೆ ಚಿತ್ರಕಲೆಯ ಸಾಧನೆಗೆ ಶ್ರಮಿಸಬೇಕೆಂದು ತೀರ್ಮಾನಿಸಿದ್ದ. ಹಲವಾರು ಸರ್ಕಾರಿ ಖಾಸಗಿ ಕೆಲಸಗಳಿಗೆ ಅರ್ಜಿ ಎಸೆದು ಸಾಕಾಗಿ ಕುಳಿತಿರುವಾಗ ಅವನಿಗೆ ಸಿಕ್ಕಿದ್ದೆ ಲೋಕೋಪಯೋಗಿ ಇಲಾಖೆಯಲ್ಲಿ ಜವಾನನ ಕೆಲಸ. ಸರ್ಕಾರಿ ಸಂಬಳ ಹೆಚ್ಚಲ್ಲದಿದ್ದರೂ ಕಡಿಮೆಯೆನ್ನುವಂತೆಯೂ ಇರಲಿಲ್ಲ. ಇದನ್ನೇನು ಕೊನೆಯವರೆಗೂ ಮಾಡಬೇಕೆ ಎಂದುಕೊಂಡು ಹೊರಡಲು ತಯಾರಾದ.ಅವನ ಗ್ರಹಾಚಾರಕ್ಕೊ ಏನೋ ಕೆಲ್ಸ ಸಿಕ್ಕಿದ್ದು ದೂರದ ಮಂಗಳೂರಿನಲ್ಲಿ. ಹಲವು ಆಪ್ತರ ಭರವಸೆಗಳೊಂದಿಗೆ ಹಾಸನದಿಂದ ಮಂಗಳೂರು ಬಸ್ಸು ಹತ್ತಿದ. ಅವನ ಒಂದು ತಿಂಗಳ ಖರ್ಚಿಗಾಗಿ ಮನೆಯಲ್ಲಿದ್ದ ಒಂದು ಎಮ್ಮೆಯನ್ನು ಮಾರಿ ಅವನ ತಾಯಿ ಕಣ್ಣಿರಿನ ನಡುವೆ ನಗುತ್ತಾ ಕಳುಹಿಸಿಕೊಟ್ಟರು.

    ಮಂಗಳೂರು ಮಹಾನಗರದ ದುಭಾರಿ ಜೀವನ, ಅಸಾಧಾರಣ ಶೆಖೆ ಅವನನ್ನು ತತ್ತರಿಸುವಂತೆ ಮಾಡಿದವು. ಸ್ನೇಹಿತನ ದೂರದ ಸಂಬಂಧಿಯೊಬ್ಬನ ರೂಮಿನಲ್ಲೇ ಇವನಿಗೆ ಜಾಗ ದೊರೆಯಿತು. ಅವನು ಕೂಡ ಒಬ್ಬಂಟಿಯಾದ್ದರಿಂದ ಹೊಂದಿಕೆಯಾಗುವಂತೆ ಕಂಡನು. ಮೊದಮೊದಲು ಕೆಲಸ ಆರಾಮು ಎನಿಸಿದರೂ ನಂತರದ ದಿನಗಳಲ್ಲಿ ಅಧಿಕಾರಿಗಳೇ ಕಿರಿಕಿರಿ ಎನಿಸತೊಡಗಿದರು. "ಓಯ್ ವಿಕಾಸು ಇಲ್ಲಿ ಬಾ, ಎಂತದು ನೀನು ಕೆಲಸ ಮಾಡುವುದು. ಇಲ್ಲಿ ಕಾಣು ಬಲೆ ಹೇಗೆ ಬೀಳ್ತವುಂಟು" ಎಂದು ಗುಮಾಸ್ತನ ಆರ್ಭಟ, ಬೊಜ್ಜ, ಸಾವು ಬೈಗಳಗಳ ಮಧ್ಯೆ ಜೀವನ ರೋಸಿಹೋಗುತ್ತಿತ್ತು. ಸೌಂದರ್ಯವೆಂದು ಭಾವುಕನಾಗಿ ಮೈಮರೆತು ನೋಡುತ್ತಿದ್ದ ಜೇಡರಬಲೆಗಳ ಮೇಲೆ ಕಿಡಿಕಿಡಿಯಾಗುವಂತಾಯಿತು.

   ತಿಂಗಳು ತುಂಬುತ್ತಾ ಬಂದಿತ್ತು. ಎಮ್ಮೆ ಮಾರಿದ ಹಣವು ಮುಗಿದು ಜೇಬಿನಲ್ಲಿ ಹತ್ತು ರೂಪಾಯಿ ಮಾತ್ರ ಉಳಿದಿತ್ತು. ಸ್ನೇಹಿತನ ರೂಮಿನಲ್ಲೇ ರಾತ್ರಿ ಊಟ ಆಗುತ್ತಿದ್ದರಿಂದ ಹೇಗೋ ಜೀವ ಉಳಿದಿತ್ತೆನ್ನಬಹುದು. ಇನ್ನುಳಿದಂತೆ ಬೆಳಿಗ್ಗೆ ಮಧ್ಯಾಹ್ನಗಳು ಉಪವಾಸ ವ್ರತಗಳಾದವು. ಹಸಿದು ಹಸಿದು ಸಿಕ್ಕದೆಲ್ಲಾ ತಿನ್ನುವಂತಾಯಿತು ಅವನ ಪಾಡು. ಕೆಲವು ದಿನಗಳಲ್ಲಿ ರೂಮಿನ ಸ್ನೇಹಿತ ಕೂಡ ಬರಿಗೈಯ್ಯವನನ್ನು ಕಡೆಗಾಣಿಸಲಾರಂಭಿಸಿದ.

   ಬ್ಯಾಂಕ್ ಅಕೌಂಟ್, ಎನ್.ಪಿ.ಸಿ ಇತ್ಯಾದಿ ರಗಳೆಗಳಿಂದ ಮೊದಲ ತಿಂಗಳ ಸಂಬಳವೂ ತಡವೇ. ಎರಡು ಮೂರು ತಿಂಗಳ ನಂತರ ಬಂದರೂ ಬಂದೀತು, ಎಂದಾಗ ವಿಕಾಸ ದಿಕ್ಕೆಟ್ಟು ಕುಳಿತನು. ಸಾಲಮಾಡಿಕೊಂಡಾದ್ರು ಹಾಸನ ಬಸ್ಸು ಹತ್ತಬೇಕೆನಿಸುತ್ತಿತ್ತು. ಹೀಗಿರುವಾಗ ಒಮ್ಮೆ ಕಾಂಟ್ರಕ್ಟ್ ಇಂಜಿನಿಯರ್ ಸೋಮನಾಥ ಶೆಟ್ಟಿಯವರು ಕಂಟ್ರಾಕ್ಟ್ ಬಿಲ್ ಸಂಬಂಧಿ  ಫೈಲ್ ನೀಡಿ ತುರ್ತಾಗಿ ಸರ್ಕಾರಿ ಅಭಿಯಂತರ ಸೈನ್ ಮಾಡಿಸಿ ತರಲು ಕೋರಿದರು. ಕೆಲಸ ಮುಗಿದ ಕೂಡಲೇ ನೂರು ರೂಪಾಯಿಯ ಬಣ್ಣದ ನೋಟನ್ನು ಚಾಚಿದರು. "ಅಯ್ಯೊ ಬ್ಯಾಡ ಸರ್ ಬ್ಯಾಡ" ಎಂದರೂ "ಹೇ ಅಡ್ಡಿಯಿಲ್ಲ ಇಟ್ಟಗೋ ಮಾರಾಯ, ಬಿರಿಯಾನಿ ತಿನ್ನು " ಎಂದು ಅವನ ಜೇಬಿಗೆ ತುರುಕಿ ಗಲ್ಲ ತಟ್ಟಿದರು. ಹಸಿದು ತತ್ತರಿಸಿದ್ದವನು ಬಿರಿಯಾನಿ ಹೆಸರು ಕೇಳಿ ಮಾತುಬರದೇ ಸ್ಥಬ್ದನಾದ. ಅವನ ಹಸಿವು ಅವನ ಬಾಯಿ ಕಟ್ಟಿಹಾಕಿತು.

   ಮಧ್ಯಾಹ್ನದ ಬಿಡುವಲ್ಲೇ ಹೋಗಿ ಹೊಟ್ಟೆ ತುಂಬ ಬಿರಿಯಾನಿ ತಿಂದು ಬೀಡ ಹಾಕುವ ನಿರ್ಧಾರ ಮಾಡಿದನು. ಬಿಡುವಾಯ್ತು. ಹೊರಟ, ಹೋಟೇಲ್ ಹತ್ತಿರವಾಗುತ್ತಿರವಂತೆ ಅವನ ಮನಸ್ಸು ಬಿರಿಯಾನಿಯ ರುಚಿಯಿಂದ "ನಾಳೆ?" ಎಂಬ ಪ್ರಶ್ನೆಯ ಕಡೆಗೆ ಸಾಗುತ್ತಿತ್ತು. ಸೀದಾ ಹೋದವನೆ ಸಣ್ಣ ಕ್ಯಾಂಟೀನಲ್ಲಿ ಒಂದೇ ಒಂದು ಖಾಲಿ ದೋಸೆ ತಿಂದು ಮಿಕ್ಕ ಹಣವನ್ನ ತನ್ನ ನಾಳೆಯ ಖರ್ಚನ್ನು ನೆನೆದು ಜೇಬಿಗಿಳಿಸಿದ. ಹೊಟ್ಟೆ ಸ್ವಲ್ಪ ಮಟ್ಟಿಗೆ ತುಂಬಿತಾದರೂ ಮನಸ್ಸು ಮಾತ್ರ ಪೂರ್ತಿ ತುಂಬಿ ಸಂತುಷ್ಟಗೊಂಡು ಸೋಮನಾಥಶೆಟ್ಟಿಗೆ ವಂದಿಸುತ್ತಿತ್ತು. ಆದಿನ ಕಳೆದು ಮರುದಿನ ಬಂತು. ಇಂದು ಕೂಡ ನೆನ್ನೆಯಂತೆ ಆದರೇ.....! ಎಂದುಕೊಳ್ಳುತ್ತಾ ಕೆಲಸದಲ್ಲಿ ತೊಡಗಿದನು. ಆದರೆ ಹಿಂದಿನ ದಿನ ಮತ್ತೇ ಮರುಕಳುಹಿಸಿತು. ಕಾರ್ಯಪಾಲಕ ಅಭಿಯಂತರರ ಕೊಠಡಿಯಿಂದ ಹೊರಬಂದ ವ್ಯಕ್ತಿಯೊಬ್ಬ ಇವನನ್ನು ಕರೆದು ಕೈಗೊಂದು ಕವರ್ ಕೊಟ್ಟು, "ಇದನ್ನು ನಿಮ್ ಸಾಹೇಬರಿಗೆ ತಲುಪಿಸು, ಇದು ನಿನಗೆ" ಎಂದು ವಿಕಾಸನ ಜೇಬಿಗೆ ಐವತ್ತು ಗಿಡಿದು ಹೊರನಡೆದ. ಕವರ್ ಒಳಗಿದ್ದಿದ್ದು ಹಣವೇ. ಸಾಹೇಬನ ಪಾಲು. ವಿಕಾಸನ ತಲೆತಿರುಗತೊಡಗಿ ವಿಚಾರಗಳ ತಾಕಲಾಟಕ್ಕೆ ಶುರುಹಚ್ಚಿಕೊಂಡಿತು.

   ಇದು ಪ್ರತಿದಿನ ಸಲೀಸಾಗಿ ನಡೆಯತೊಡಗಿತು. ಸಾಹೇಬನಿಗೆ ಬರಬೇಕಾದ್ದರ ಜೊತೆಗೆ ಇವನ ಪಾಲು ಇವನಿಗೆ ಆಯಾಸವಿಲ್ಲದೇ ದೊರಕುತ್ತಿತ್ತು. ಪುರುಸೊತ್ತಾದಾಗಲೆಲ್ಲ ತನ್ನ ಬಳಿ ಎಷ್ಟು ದುಡ್ಡಿದೆ? ಎಷ್ಟು ಖರ್ಚಾಯ್ತು? ತೂ.. ಅಷ್ಟೇಕೆ ಖರ್ಚು ಮಾಡಿದೆ? ಇವತ್ತು ಯಾರು? ಎಷ್ಟು? ಎಂಬ ಆಲೋಚನೆಯಲ್ಲಿಯೇ ಮುಳುಗಿದನು. ಆವರಾಗಿಯೇ ಕೊಟ್ಟಾಗ ತೆಗೆದುಕೊಂಡು ಸುಮ್ಮನಾಗುತ್ತಿದ್ದವನು ದಿನ ಕಳೆದಂತೆ ಕಛೇರಿಗೆ ಬರುವ ಪರಿಚಿತ -ಅಪರಿಚಿತರೆಲ್ಲರನ್ನು ತಾನಾಗಿಯೇ ಮಾತಾಡಿಸಿ ಅವರ ಸಮಸ್ಯೆ ತಿಳಿದು "ಕೆಲ್ಸ ಮಾಡ್ಸಿಕೊಡ್ತಿನಿ, ನನ್ ಕಡೆನೂ ನೋಡ್ಕೊಬೇಕು" ಎಂದು ಸೂಚನೆ ನೀಡುತ್ತಾ ಕೈಚಾಚತೊಡಗಿದನು. ಪ್ರತಿದಿನ ಏನಿಲ್ಲವೆಂದರೂ 250 - 300 ರೂಪಾಯಿಗಳು ಅವನದಾಗುತ್ತಿತ್ತು.

   ಇತ್ತ ಆದಾಯ ಕಂಡರೂ ಅವನಲ್ಲಿಯ ಜಿಪುಣ ಜಾಗೃತನಾಗತೊಡಗಿದನು. ಆದರೆ ಮೊದಲಿನಿಂದಲೂ ಅವನೆನು ಅಂತ ಜಿಪುಣನಾಗಿರಲಿಲ್ಲ. ಇತ್ತೀಚೆಗೆ ಹತ್ತು ರೂಪಾಯಿ ಖರ್ಚು ಮಾಡಲು ಅವನು ಹತ್ತು ಸಲವೇ ಯೋಚಿಸುತ್ತಿದ್ದ. ಅವನ ಬುದ್ದಿಯೆಲ್ಲಾ ದುಡ್ಡನ್ನು ಕಲೆಹಾಕಿ ದೊಡ್ಡ ಮೊತ್ತ ಮಾಡುವುದನ್ನಷ್ಟೇ ಯೋಚಿಸುತ್ತಿತ್ತು. ತಿಂಗಳ ಸಂಬಳವೇ ಬೇಡವೆನಿಸುವಷ್ಟು ಹಣ ಅವನಲ್ಲಿ   ಶೇಖರಣೆಯಾಗಿತ್ತು. ಜೊತೆಗೆ ಎರಡು ತಿಂಗಳ ಸಂಬಳದ ಹಣವೂ ಸೇರಿ ಎರಡು ತಿಂಗಳಲ್ಲೇ ಹತ್ತಾರು ಸಾವಿರಗಳು ಅವನಲ್ಲಿ ಸೇರಿತ್ತು. ಚಪ್ಪಲಿ ಹರಿದರೂ ಹೊಲಿಗೆ ಹಾಕಿಸಿ ನಡೆದನೇ ಹೊರತು ಹೊಸದನ್ನು ಕೊಳ್ಳುವ ಧೈರ್ಯ ಮಾಡಲಿಲ್ಲ.

   ಆದರೇ ಅವನ ಗುರಿಯ ಕನಸು ಮಾತ್ರ ಆಗಾಗ ಬಿಚ್ಚಿಕೊಂಡು ಆಲೋಚನೆಗಳಲ್ಲಿ ರೂಪತಾಳುತ್ತಿತ್ತು. ದಿನನಿತ್ಯದಲ್ಲಿ ಕಂಡಂತಹ ಕೆಲವು ಭಾವುಕ ಸನ್ನಿವೇಶಗಳು, ಸಮುದ್ರ ದಡದ ಪ್ರೇಮಿಗಳು, ಸುಕ್ಕುಹಿಡಿದ ಅಜ್ಜಿಯ ನಗು, ಮಂಗಳೂರಿನ ಸುಂದರ ಸೂರ್ಯಾಸ್ತಗಳು ಚಿತ್ರಿಸುವಂತೆ ಆಗಾಗ್ಗೆ ಕೈಬೀಸುತ್ತಿದ್ದವು. ಸದ್ಯದಲ್ಲೆ ಇವನೆಲ್ಲಾ ಪಟದೊಳಕ್ಕೆ ಕಟ್ಟಿಕೂರಿಸಬೇಕು ಅಂದುಕೊಳ್ಳುತ್ತಿದ್ದನು. ಮತ್ತೊಂದು ಕಡೆ ಖಾಲಿ ಹಾಳೆ ಸಿಕ್ಕಿದ ಕಡೆಯೆಲ್ಲಾ ಲೆಕ್ಕಮಾಡುತ್ತಾ ಕೂರತೊಡಗಿದ. ಜೇಬಿನಲ್ಲೆಷ್ಟು, ಬ್ಯಾಂಕಿನಲ್ಲೆಷ್ಟು, ಮುಂದಿನ ವಾರದೊಳಗೆ ಎಷ್ಟಾಗಬುಹುದು ಇವುಗಳೇ ಆ ಲೆಕ್ಕಾಚಾರಗಳಾಗಿದ್ದವು. ವಿಕಾಸ್ ದಿನ ದಿನಕ್ಕೆ ವಿ-ಕಾಸುವೇ ಆಗಿ ಹೋದನು.
   ಅದೊಂದು ದಿನ, ತಿಂಡಿ ತಿನ್ನದೇ ಅರ್ಧ ಟೀ ಕುಡಿದು ನಗರದ ಬೀದಿಗಳಲ್ಲಿ ಜೇಬಿಗೆ ಕೈಹಾಕಿ ನಡೆಯುತ್ತಿರುವಾಗ ಚಿತ್ರಕಲಾ ಸಾಮಾಗ್ರಿಗಳು ದೊರೆಯುತ್ತವೆ, ಎಂಬ ಮಾಹಿತಿಯಿದ್ದ ಜಾಹೀರಾತುವೊಂದನ್ನು ಕಂಡು ಆ ಅಂಗಡಿ ಬಳಿ ಹೋದನು. ತರತರಹದ ಪೆನ್ಸೀಲುಗಳು, ಬ್ರಶ್, ಬಣ್ಣದ ಡಬ್ಬಿಗಳು, ತೆಳು-ಗಟ್ಟಿ ಹಾಳೆಗಳನ್ನು ಕೇಳಿ ತೆಗೆಸಿದ. ಕಣ್ಣಮುಂದೆ ಎಲ್ಲಾ ಸಾಮಾಗ್ರಿಗಳನ್ನು ಒಟ್ಟಾಗಿ ಕಂಡು ಅವನು ಮನಸ್ಸು ಉಲ್ಲಾಸಕೊಂಡಿತು. ಅವುಗಳ ಬೆಲೆಯನ್ನು ಕೇಳಿ ಲೆಕ್ಕಮಾಡಹೊರಟನು. ಮನಸ್ಸೆಲ್ಲೋ ಒಂದು ಕಡೆ ಮುಷ್ಕರ ಸಾರಿ ಕೆಳಮುಖನಾಗಿ ಜಗ್ಗತೊಡಗಿತು. ಇಬ್ಬದಿಗೆ ಸಿಲುಕಿದವನು ಒಂದು ಕ್ಷಣ ಯೋಚಿಸಿ ಗಂಟಲು ಸರಿಮಾಡಿಕೊಂಡು "ಬೇಡ ಸಾರ್, ಸಾರಿ" ಎಂದು ಮುಂದೆ ಅಡಿಯಿಟ್ಟನು.


  ಮುಂದೇಂದು ವಿಕಾಸನ ಕೈ ಬಣ್ಣದ ಕಲೆಯಾಗಲಿಲ್ಲ, ಶುದ್ದವಾಗಿಯೂ ಉಳಿಯಲಿಲ್ಲ. ಅದೆಷ್ಟೋ ಚಿತ್ರಗಳು ಸ್ಥಭ್ದವಾಗದೆ ಹಾಗೆಯೇ ಹರಿದು ಹೋದವು, ಮತ್ತಷ್ಟು ಕಲ್ಪನೆಯಲ್ಲೇ ಕೊಳೆತವು. ಆದರೆ ವಿಕಾಸ ಮಾತ್ರ ಒಬ್ಬ ಮಾದರಿ ಪುರುಷನಾಗಿ ನಮ್ಮ ನಿಮ್ಮೊಳಗೆ ಉಳಿದ.

*~*~*~*
(ದಿನಾಂಕ: 15-05-2012ರ "ಪ್ರಜಾಸಮರ" ಪಾಕ್ಷಿಕದಲ್ಲಿ ಪ್ರಕಟ)

                                                                                                     ಶರತ್ ಚಕ್ರವರ್ತಿ.                                                                                                           
                                                                                                          ಹಾಸನ.                                                                                       
  ದಿನಾಂಕ: 23/02/2012    





ವಿಮರ್ಶೆ: ಸುನಿಲ್ ಗೌಡ:


  •       ನನ್ನ ಪ್ರಿಯ ಮಿತ್ರ ಶರತ್ ಚಕ್ರವರ್ತಿ ಯವರ "ವಿಮುಖ" ಎಂಬ ಒಂದು ಉತ್ತಮ ಸಂದೇಶವಿರುವ ಸಣ್ಣ ಕಥೆಯನ್ನು ವಿಮರ್ಶಿಸಿಕೊಡಲು ನನಗೆ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು.
  • ಮತ್ತು ನನ್ನ ಮಟ್ಟಿಗೆ ಈ ಕಥೆ ಶರತ್ ಬರೆದಿರುವ ವಿಧವಿಧವಾದ ಸಣ್ಣ ಕಥೆಗಳಲ್ಲಿ ಇದು ಕೂಡ ವಿಭಿನ್ನವಾಗಿಯೇ ಗುರುತಿಸಿಕೊಳ್ಳುತ್ತದೆ.ಒಬ್ಬ ಬಡ ಕಲಾವಿದ ಮತ್ತು ಕಲಾವಿದನಾಗಿಯೇ ಬೆಳೆಯಬೇಕೆಂಬ ಕನಸುಗಳನ್ನು ಕಟ್ಟಿ ಕೊಂಡವನು ಕೂಡ ಹೇಗೆ ಭ್ರಷ್ಟಾಚಾರದ ಸುಳಿಯಲ್ಲಿ ಸಿಕ್ಕು, ಒಬ್ಬ ಭ್ರಷ್ಟನಾಗಿ ರೂಪು ಗೊಳ್ಳುತ್ತಾನೆ ಎನ್ನುವುದು ತುಂಬಾ ಅರ್ಥವತ್ತಾಗಿ ಕಾಣಿಸುವಂತೇ ಹೆಚ್ಚು ಮಾತಿಲ್ಲದೇ ಕೆಲವೇ ಹಾಳೆಗಳಲ್ಲಿ ಹೇಳುವ ಲೇಖಕನ ಈ ಪ್ರಯೋಗ ತುಂಬಾ ಚೆನ್ನಾಗೆ ಮೂಡಿ ಬಂದಿದೆ.'ವಿಮುಖ' ಎಂಬ ಬದಲಾವಣೆಯ ಅರ್ಥ ಉಳ್ಳ ಶೀರ್ಷಿಕೆ ಮತ್ತು 'ವಿಕಾಸ' ಎಂಬುದು ಕೂಡ ರೂಪಾಂತರ ಅಥವಾ ಬದಲಾವಣೆ ಎಂಬ ಅರ್ಥ ಬರುವ ನಾಯಕನ ಹೆಸರು ಕೂಡ ಕಥೆ ತುಂಬಾ ಹೊಂದಾಣಿಕೆ ಇರುವಂತೆ ನೋಡಿಕೊಂಡಿರುವುದು ನಿಜಕ್ಕೂ ಲೇಖಕನ ಕಥೆ ಮತ್ತು ಪಾತ್ರ ಸೃಷ್ಟಿಸುವ ಪ್ರಬುದ್ಧತೆಯನ್ನು ತೋರಿಸುತ್ತದೆ.ಪ್ರಕೃತಿಯ ವರ್ಣನೆಯಲ್ಲಂತೂ ಲೇಖಕ ಸ್ವಲ್ಪ ವಿಭಿನ್ನವಾಗಿಯೇ ಚಿಂತಿಸಿರುವುದನ್ನು ಗಮನಿಸಬಹುದು ಉದಾ: "ಇತ್ತ ಜೇಡವೊಂದು ತನ್ನ ಬಲೆಯನ್ನು ಸರಿಪಡಿಸುತ್ತಾ, ಗಾಳಿಗೆ ಅಲುಗಾಡುತ್ತಾ ಉಯ್ಯಾಲೆಯಾಡುತ್ತೊದೆ. ಆ ಜೇಡರಬಲೆಯನ್ನು ಸಹ ಇಬ್ಬನಿ ಮುತ್ತಿ ಮತ್ತಿನ ಮಣಿಗಳಂತೆ ಹೊಳೆಯುತ್ತಿದೆ." ಜೇಡರ ಬಲೆಯ ಜೊತೆ ಮಂಜಿನ ಹನಿಗಳನ್ನು ವರ್ಣಿಸಿರುವುದು ತುಂಬಾ ಚೆಂದಾ ಕಾಣುತ್ತದೆ, ಮತ್ತು ಓದುಗನಿಗೂ ಆ ಮುಂಜಾನೆಯ ಚಿತ್ರ ಕಣ್ಮುಂದೆ ಬರದೇ ಇರಲಾರದು. ಮತ್ತು " ಸೌಂದರ್ಯವೆಂದು ಭಾವುಕನಾಗಿ ಮೈಮರೆತು ನೋಡುತ್ತಿದ್ದ ಜೇಡರಬಲೆಗಳ ಮೇಲೆ ಕಿಡಿಕಿಡಿಯಾಗುವಂತಾಯಿತು." ಎಂಬ ಸಾಲು ಕೂಡ ಮೇಲಿನ ವರ್ಣನೆಗೆ ಪುಷ್ಟಿ ಕೊಡುವ ಕೆಲಸವನ್ನೇ ಮಾಡುತ್ತದೆ.ಮತ್ತು ಯಾವುದೇ ಒಂದು ವಸ್ತು ತುಂಬಾ ಇಷ್ಟವಾಗಿದ್ದರೂ ಅದರಿಂದಲೇ ಕೆಲಸ ಕೆಡುವುದರಿಂದ ತುಂಬಾ ಕಿರಿಕಿರಿ ಆಗುವುದರಲ್ಲಿ ಸಂಶಯ ಇಲ್ಲ. ಉದಾ: ನಿಮ್ಮ ಮುದ್ದಾದ ಮಗು ನಿಮ್ಮ ಕೆಲಸಕ್ಕೆ ಅಡ್ಡಿ ಮಾಡಿ ನಿಮ್ಮ ಕೆಲಸದ ಫೈಲ್ ಮೇಲೆ ನೀರು ಚೆಲ್ಲಿತೆಂದರೇ ಕಿರಿಕಿರಿ ಆಗೇ ಆಗುತ್ತದೆ.ಎಮ್ಮೆ ಮಾರಿ ತಿಂಗಳ ಖರ್ಚಿಗೆ ಸರಿ ಮಾಡಿ ಕೆಲಸಕ್ಕೆ ಸೇರುವುದನ್ನು ಕೂಡ ಅಷ್ಟೆ ಚೆನ್ನಾಗಿ ಹೇಳಿರುವುದು ಮತ್ತು ಅದನ್ನೇ ಆಧಾರವಾಗಿಟ್ಟುಕೊಂಡು ಜೀವನ ಮಾಡುತ್ತಿದ್ದ ತಾಯಿ ದುಖಃ ತುಂಬಿದ ಕಣ್ಣುಗಳಲ್ಲೇ ನಗುತ್ತಾ ಕಳಿಸುವುದು ಓದುಗನ ಮನಕಲುಕವಂತೆ ಮಾಡುವಲ್ಲಿ ಲೇಖಕ ಯಶಸ್ವಿ ಆಗುತ್ತಾನೆ.ಬಿರಿಯಾನಿ ತಿನ್ನುವ ಬಯಕೆಯಲ್ಲಿ, ದೊಸೆ ತಿಂದು ಬರುವುದು, ಮಂಗಳೂರಿನ ಪ್ರಕೃತಿ ಪರಿಸರಗಳನ್ನು ನೋಡಿದಾಗ ಅವನ ಮನದಲ್ಲಿ ಹುಟ್ಟುವ ಭಾವನೆಳಂತು ತುಂಬಾ ಅದ್ಬುತವಾಗಿ ಬಂದಿದ್ದು, ಲೇಖಕನೇ ಅನುಭವಿಸಿ ಬರೆದಂತೆ ತೋಚುವುದು, ಮತ್ತು ಓದುಗನನ್ನು ಕೂಡ ಇಡಿದಿಡುವಂತ ಸಾಲುಗಳು.ಮತ್ತು ದುಡ್ಡು ಹೆಚ್ಚಿದಂತೆ ನಾಯಕ ಜಿಪುಣ ಬೆಳೆಯತೊಡಗುವುದು, ಹರಿದ ಚಪ್ಪಲಿಗೆ ಹೊಲಿಗೆ ಹಾಕಿಸಿ ನಡೆಯುವುದು, ದುಡ್ಡಿಗೆ ದುಡ್ಡು ಸೇರಿಸಿ ದೊಡ್ಡ ಮೊತ್ತವನ್ನು ಮಾಡುವದಷ್ಟೆ ಜೀವನ ಗುರಿ ಎಂಬಂತಾಗಿ ರೂಪುಗೊಳ್ಳುವುದು ಕೊನೆಗೆ ಅವನ ಗುರಿಯನ್ನು ಮರೆತು ಭ್ರಷ್ಟಾಚಾರವನ್ನೇ ಜೀವನವನ್ನಾಗಿ ಮಾಡಿಕೊಳ್ಳುವುದು ತುಂಬಾ ಅರ್ಥಗರ್ಭಿತವಾಗಿ ಹೇಳ ಹೊರಟಿರುವುದು ಜೊತೆಗೆ ಹಲವು ಸಂದೇಶಗಳನ್ನು ಸಾರುವಂತೆ ಕಥೆ ರಚನೆ ಮಾಡಿರುವುದು ಲೇಖಕನು ಕಥೆ ಹೇಳುವಲ್ಲಿ ಎಷ್ಟು ನಿಪುಣ ಎನ್ನುವುದನ್ನು ನೋಡಬಹುದು.ಇಷ್ಟಾಗಿಯೂ ಕೆಲವೇ ಕೆಲವು ನ್ಯೂನತೆಗಳಿಂದ ಓದಿದ ಎಲ್ಲರನ್ನೂ ಸೆಳೆಯುವಲ್ಲಿ ಸ್ವಲ್ಪ ಕಷ್ಟ ಸಾಧ್ಯವಾಗಿ ಕಾಣುತ್ತದೆ.ಕಲಾವಿದ ಕಲಾವಿದನಾಗೆ ಬೆಳೆಯಬೇಕೇನಿಲ್ಲ, ಎಲ್ಲರೂ ಮಾಡುವುದು ದುಡ್ಡು ಮತ್ತು ಹೊಟ್ಟೆಗಾಗಿಯೇ ಆದ್ದರಿಂದ ಬದಲಾವಣೆಯ ಅಗತ್ಯ ಕಂಡಿತ ಇದೆ ಎನ್ನುವ ಮನಸ್ಸಿನವರಿಗೆ ಈ ಕಥೆಯ ಸಾರ ಅಷ್ಟು ಸುಲಭವಾಗಿ ತಾಗಲಾರದು. ಹೆಣ ಹೊರುವವನಿಗೆ ಇಂದೆ ಆದರೇನು, ಮುಂದೆ ಆದರೇನು, ಕೆಲಸ ಮಾಡಿದರೇ ಜೀವನ ಅದಲ್ಲದೇ ಚಿತ್ರಕಲೆಯ ಮಹತ್ವ ತಿಳಿಯದ ಕೆಲವರಿಗೆ ಈ ಕಥೆಯ ವಿಸ್ತಾರ ಮತ್ತು ಆಳ ತಿಳಿಯದು.ಮಂಗಳೂರು ಮತ್ತು ಹಾಸನದ ಕೆಲ ಸಂಸ್ಕತಿಯನ್ನು ತೀರ ಕಥೆಯ ಒಳಹೊಕ್ಕು ನೋಡಿದಾಗ ಮಾತ್ರ ತಿಳಿಯ ಬಹುದು, ಕಥೆಯನ್ನು ಸಣ್ಣ ಕಥೆಯನ್ನಾಗೆ ಬರಿಯಬೇಕು, ಒಂದೇ ಗುಕ್ಕಿನಲ್ಲಿ ಓದಿ ಮುಗಿಸುವಂತೆ ಬರೆಯಬೇಕೆಂದು, ಮತ್ತು ಲೇಖಕನು ಒಂದೆ ಗುಕ್ಕಿನಲ್ಲಿ ಬರೆದು ಮುಂದಿಟ್ಟಿರುವಂತೆ ಭಾಸವಾಗುತ್ತದೆ.ಮತ್ತು ಸ್ಹೇಹಿತನ ಭೇಟಿ ಮತ್ತು ಮಂಗಳೂರಿನ ಆಗಮನ ಹಾಗು ಕೆಲವಾರು ಕಡೆ ಓದುಗನನ್ನು ಇಡಿದಿಡುವಲ್ಲಿ ದುರ್ಬಲಗೊಳ್ಳುತ್ತವೆ. ಮತ್ತು ಕಥೆಯ ನಿರೂಪಣೆಯನ್ನೂ ಸಾರಸಗಟಾಗಿ ಹೇಳದೇ, ರೂಪಕಗಳನ್ನು ಬಳಸಿದ್ದರೆ ತುಂಬಾ ಚೆಂದ ಇತ್ತೆಂದು ಹೇಳಬಹುದು. ಮತ್ತು ಕಥೆಯಲ್ಲಿ ಹಾಸ್ಯವೂ ಸ್ವಲ್ಪ ಹಾಸುಹೊಕ್ಕಾಗುವಂತೆ ನೋಡಿಕೊಂಡಿದ್ದರೇ ಒದುಗನನ್ನು ಇನ್ನು ಹೆಚ್ಚಾಗಿ ಆವರಿಸಿಕೊಂಡು ಓದಿಸಿ ಕೊಳ್ಳುತ್ತಿತ್ತು ಎಂದು ಹೇಳಬಹುದು.ನ್ಯೂನತೆಗಳನ್ನು ಬದಿಗಿಟ್ಟು ಒಟ್ಟಾರೆಯಾಗಿ ಕಥೆಯನ್ನು ಓದಿದಾಗ ಓದುಗನಿಗೊಂದು ಸಂದೇಶ ಮತ್ತು ಓದುಗನ ಮನಸ್ಸಿನಾಳದ ಆದರ್ಶಗಳನ್ನು ಕೆಣಕಿ ಮೇಲೆತ್ತುವುದಂತೂ ಕಂಡಿತ.ವ್ಯಕ್ತಿ ಧನದಾಯಿ ಆದಂತೆ ಅವನ ಅದರ್ಶ, ನಡವಳಿಕೆ, ಕನಸುಗಳು ಹೇಗೆಲ್ಲಾ ಮರೆಯಾಗಿ ಕೆವಲ ಹಣ ಸಂಪಾದನೆಯನ್ನೇ ಚಟವನ್ನಾಗಿ ರೂಡಿಸಿಕೊಳ್ಳುತ್ತಾನೆ ಎಂಬುದು ತೀರಾ ವಿಷಾದನೀಯ.ಇಂತಾ ಒಂದು ಉತ್ತಮ ಸಂದೇಶವನ್ನು ಸಾರುತ್ತಾ ಮತ್ತು ಧನದಾಯಿ ವ್ಯಕ್ತಿಯನ್ನು ಬದಲಾಯಿಸಿ ಅವನಿಗೆ ಅವನ ಕನಸು ಆದರ್ಶ ಮಾರ್ಗ ತೋರುವ ಪ್ರಯತ್ನವನ್ನು ಈ ಒಂದು ಸಣ್ಣ ಕಥೆಯೊಂದಿಗೆ ನಡೆಸಿರುವ ಪ್ರಯೋಗಕ್ಕೆ ನನ್ನ ತುಂಬು ಹೃದಯದ ಶುಭಾಷಯಗಳು, ಮತ್ತು ಇಂತಾ ಸಮಾಜದ ಮೇಲೆ ಪರಿಣಾಮ ಬೀರುವ ಮತ್ತು ವಾಸ್ತವತೆಯನ್ನು ಬಿಂಬಿಸಿ ಬದಲಾವಣೆಗೆ ಹೊತ್ತು ಕೊಟ್ಟು ಬರೆಯುವ ಕಥೆ- ಕವನಗಳು ಹೆಚ್ಚಾಗಿ ಮೂಡಿ ಬರಲಿ ಎಂದು ಆಶಿಸುತ್ತೇನೆ.

ಗುರುವಾರ, ಮೇ 3, 2012

ಕಡೆಸಾಲು




ಕಂಬಿ ಹಿಂದೆ ಕೈಕಟ್ಟಿ ನಿಂತ ಖೈದಿಯಂತೆ

ಹೊಂಚು ಹಾಕಿ ಸಂಚು ಹೂಡುತ್ತಿಹ ಮನ 
ಸೆರಗ ಮರೆಯ ನಡುವಿಗಿಣುಕೋ ಕಳ್ಳಗಣ್ಣ. 


ಬೇಟೆ ತಪ್ಪಿ ಉಗ್ರನಾದ ವ್ಯಾಘ್ರನಂತೆ 
ಆಗ್ರಹಿಸಿ ಕುಳಿತಿಹ ಹಸಿವು
ಎಡೆಯೆತ್ತಿ ಬುಸುಗುಡುವ ಉರಗ.


ಕೆಡುಗನಸ ತೆರೆಯಿಂದ ಧಿಕ್ಕನೆ ಎದ್ದಂತೆ
ಮೂಡಿರುವ ಭವಿಷ್ಯದ ಕೊಕ್ಕೆಗಳು 
ಅಬ್ಬರದಿ ಇಳೆಗಿಕ್ಕೊ ಮಿಂಚುಗಳು
ಸಿಡಿಲುಗಳು.


ದಾರಿಗುಂಟ ಗವಲು ಹಿಡಿದು ಅಲೆವ ಡೊಂಕುಬಾಲದಂತೆ 
ದಿಕ್ಕು ಅರಿಯದೇ ಹರಿದಿಹ ಕಣ್ಗಳೋ
ತಿರುಗಿ ಹಾಡಿ ಬೇಡಿ ತಿನುವ ಜಂಗಮರು.


ವರ್ತಮಾನಕೆ ಅಂಜಿ ಕಮರಿದ ಕನಸಂತೆ
ಬತ್ತಿ ಬೆಂಗಾಡಾದ ಆಸೆಗಳಾದವು 
ಇಂದು ಹುಟ್ಟಿ ನಾಳೆ ಸಾಯುವ
ಅಣಬೆಗಳು.


ಅಂಗಾಲಿಗೆ ಚುಚ್ಚಿ ಒಳಗೇ ಮುರಿದ 
ಮುಳ್ಳಂತೆ ಹೆಜ್ಜೆ ಹೆಜ್ಜೆಗೆ ಚುಚ್ಚಿ ಚುಯ್'ಗುಡಿಸಿ
ಕಾಡುವ ಅವಳ ನೆನಪುಗಳು 
ಕವಿತೆಗೆ ಕೊನೆಯಾಗಲೊರಟ
ಕವಿಮನದ ದುಗುಡವನೊತ್ತ
ಕಡೆಸಾಲುಗಳು. 


-ಶರತ್ ಚಕ್ರವರ್ತಿ.
http://sanchalanasahitya.blogspot.in/2012/05/blog-post_03.html

ಶನಿವಾರ, ಫೆಬ್ರವರಿ 18, 2012

ಸೂರ್ಯೋದಯ

ಮುಂಜಾನೆದ್ದ ಸೂರ್ಯ
ಆಕಳಿಸುತ್ತಾ ಬರುವಾಗ
ಮೋಡಕೆ ಎಡವಿ
ನೀರಿಗೆ ಬಿದ್ದೊಡನೆ
ಕಡಲ ಅಲೆಗಳು
ನಾಚಿ ಕೆಂಪಾದವು..!!!

ಶರತ್ ಚಕ್ರವರ್ತಿ.

ಶುಕ್ರವಾರ, ಫೆಬ್ರವರಿ 17, 2012

ಇಬ್ಬನಿ.

ಸುಲ್ತಾನನಾಗಿ ಸೂರ್ಯ
ಕುದುರೆಯೇರಿ ಬರುತಿರೆ
ಹೂ ಧವಳವನ್ನಪ್ಪಿ
ಮುದ್ದಿಸುತ್ತ ಮೈಮರೆತ
ಇಬ್ಬನಿ ಹನಿಗಳು
ಪ್ರತಿರೋದವಿಲ್ಲದೆ ಮಡಿದವು ..
.





ಶರತ್ ಚಕ್ರವರ್ತಿ.

ಗುರುವಾರ, ಫೆಬ್ರವರಿ 9, 2012

ಅವ್ವ ಕೊಟ್ಟ ಕಾಸು.




         ಹುಟ್ಟೂರಿನಿಂದ ಚದುರಿ ಪರವೂರಿನಲ್ಲಿ ನೆಲೆಕಂಡಿದ್ದ ಸ್ನೇಹಿತರೊಡನೆ ಮತ್ತೇ ತವರಿನಲ್ಲಿ ಸೇರಿ ಕಾಕ ಹೋಟೇಲಿನಲ್ಲಿ ಬಿರಿಯಾಣಿ ಬಾರಿಸಿ ನಂತರ ಎಲ್ಲಾ ಪರದೇಸಿಗಳಿಗೂ ಬೀಳ್ಕೊಟ್ಟು ಮತ್ತೇ ಸ್ವತಂತ್ರವಾದ ಬಿಕನಾಸಿ ಜೀವನದ ಬಗ್ಗೆ ಬೇಸರ ಹುಟ್ಟಿ ಮನದೊಳಗೆ ಏನೇನೋ ಗೊಣಗುತ್ತಾ ದೇವಗೆರೆ ಮಾರ್ಕೇಟಿನಲ್ಲಿ ನುಸುಳುವಾಗ ಸವಕಲು ಮೈಗೆ ಮಸಿಹಿಡಿದು ಗಬ್ಬಾದ ಸೀರೆಯನ್ನುಟ್ಟು ಕಂಕುಳಲ್ಲಿ ಮಗು ಹಿಡಿದು ಆ ಮಗುವನ್ನೇ ತೋರುತ್ತಾ "ಸಾಮಿ ಏನಾರಾ...." ಎಂದು ಕೈ ಚಾಚುತ್ತಾ ಹೆಂಗಸೊಬ್ಬಳು ಅಡ್ಡಗಟ್ಟಿದಳು. ಇದ್ದ ತಲೆಬಿಸಿಯಲ್ಲಿಯೂ ಕೈಗಳು ಕಿಸೆಗಿಳಿದು ತಳಶೋಧಿಸಹತ್ತಿದ್ದವು. ಎಲ್ಲಿ ಕೈ ಹಾಕಿದರೂ ಒಂದು ಬಿಡಿಗಾಸು ಇಲ್ಲ. ಎಲ್ಲಾ ಜೇಬುಗಳನ್ನೂ ತಡಕಿ ಪರ್ಸಿನ ಸಂದುಗಳಲ್ಲಿ ಕಣ್ಣನ್ನಿಳಿಸಿದಾಗ ಶಾಲೆಗೆ ಹೋಗಲಾರೆ ಎಂದು ಹಟ ಹಿಡಿದು ಕುಳಿತ ಮಗುವಿನಂತೆ ರೂಪಾಯಿಯೊಂದು ಮೂಲೆ ಹಿಡಿದಿತ್ತು. ಹೊರಗೆಳೆದು ಆವಳ ಕೈಗಿತ್ತು ದೇವಗೆರೆಯ ಬಳಿ ಬಂದು ಬಿಂಬ ನೋಡುತ ಕುಳಿತೆ. ಪುಂಡ ಮೀನೊಂದು ಪುಳಕ್ಕನೆ ಮೇಲೆದ್ದು ಮುಳುಗಿ ಬಿಂಬವನ್ನು ಕೆಡಿಸಿ ಅಲೆಯನ್ನಾಗಿಸಿತು. ಆದರೆ ಮನಸ್ಸಿನೊಳಗೂ ಯಾವುದೋ ತರಂಗ ಲಯಮರೆತು ಮೇಲೆ ಕೆಳಗೆ ಆಡುತ್ತಿತ್ತು. ಅಲೆಗಳ ಕ್ರೋಢಿಕರಿಸಿ ಸ್ಥಿಮಿತ ಬಿಂಬಕ್ಕಾಗಿ ವರ್ತಮಾನಕೆ ವಾಪಸ್ಸಾಗದ ವಿಚ್ಚೇದಿತ ಭೂತಕ್ಕೆ ಮರಳಿದೆ. 

           ಹೌದು ತುಂಬಾ ಹಳೆಯ ನೆನಪು, ಇಂದೇಕೆ ಇಷ್ಟು ಕಾಡುತ್ತಿದೆ. ಹರಿದ ಚಡ್ಡಿ ತೊಟ್ಟು ಊರಾಳಿದ ಕಾಲದ ನೆನಪು ಮನದ ದೇವಗೆರೆಯಲ್ಲಿ ಬಿಂಬದರ್ಶನ ಸಾಗಿತ್ತು.

           ಚಾಪೆ ಮೇಲೆ ಮಕಡೆ ಮಲಗಿಕೊಂಡೆ ನೋಟುಪುಸ್ತಕದಲ್ಲಿ ಒಂದೇ ಉಸಿರಿಗೆ ಗೀಚುತ್ತಾ ಪಕ್ಕದಲ್ಲಿ ಇದ್ದ ನೀರಾಲ ಕಾಫಿಯನ್ನು ಕುಡಿಯದೇ ಒಣಗಿಸಿ, ಹೋಂವರ್ಕ್ ಮುಗಿಸಿ ಪುಸ್ತಕಗಳನ್ನು ಕಸದಚೀಲದಂತ ಜೋಳಿಗೆಯಲ್ಲಿ ತುಂಬಿ ಗೋಡೆಯ ಗೂಟಕ್ಕೆ ತೂಗುಬಿಟ್ಟು "ಅವ್ವ ಆತು" ಎಂದು ಮೂಗೊರೆಸಿ ಎಂದು ನಿಂತೆ.

"ಹೂಂ.., ಲೋಟ ತಗ ಬಾ" ಒಳಗಿಂದಲೇ ಅವ್ವ,

ಕಾಫಿಯ ನೆನಪು ಬರುತ್ತಲೇ ತಣ್ಣಗಾಗಿದ್ದ ಕಾಫಿಯನ್ನು ಒಂದೇ ಗುಟುಕಿಗೆ ಮಡ್ಡಿ ಸಮೇತ ಕುಡಿದು ಮುಖ ಕಸಿವಿಸಿ ಮಾಡುತ್ತಾ ಅಡುಗೆ ಕೋಣೆಗೆ ಹೋಗಿ ಲೋಟ ಕುಕ್ಕಿ "ಅವ್ವೊ, ನಾನೇಳಿದ್ದು ಕಾಪಿನಲ್ಲ, ಬರ್ದಾತು ಅಂತವ"

"ಹಂಗಾರೆ ಇನ್ನೂ ವಸೀ ಓದ್ಕ್ಯಂತಿರು, ಇನ್ನೋಟೊತ್ತು ಆದ್ಮೇಲೆ ಉಣ್ಣುವಂತೆ"

"ಹೂಂ, ನಾಳಿಕೆ ಬೂನಳ್ಳಿ ಜಾತ್ರಿಗೆ ಹೋಯ್ತಿನಿ"

"ಸ್ಕೂಲು..?" 

"ರಜಾ ಕಣವ್ವೋ"

"ಹಂಗಾರೇ ನನ್ ಕುಟೆ ಬರುವಂತೆ ಹೋಗು ಓದ್ಕ್ಯ"

"ಇಲ್ಲಾ, ನಾನ್ ಜಲ್ದಿ ಹೋಯ್ತಿನಿ ಬೆಳಿಗ್ಗೆಲೆಯ"

"ಬೆಳಿಗ್ಗೆಲೆ ಹೋಗೇನ್ಲಾ  ಮಾಡ್ತಿಯ, ಆ ಜನದೊಳಗೆ ಎಲ್ಲಾದ್ರೂ ಹೋದ್ರೇನ್ ಮಾಡನಾ"

"ಎಲ್ಯಾಕ್ ಹೋಯ್ತರೇ, ಮನೆದಾರಿ ಗೊತ್ತಿಲ್ವ"

"ಆತು ನಡಿ ಉಣ್ಣನ, ಕರಿ ಎಲ್ಲಾನ್ರುವೆ"

          ಊಟವಾಗಿ ಅವ್ವನ ಮಗ್ಗುಲಲ್ಲಿಂದಲೇ ಜಾತ್ರೆಯ ಸೊಬಗು ವೈಶಿಷ್ಟ್ಯಗಳು ಕಣ್ಣಿಗೆ ನೂರಾರು ಪ್ರಶ್ನಾರ್ಥಕಗಳನ್ನು ತಂದು ಕೊಕ್ಕೆ ಹಾಕುತ್ತಿದ್ದವು.

"ಅವ್ವ ಜಾತ್ರಿಗೆ ಆನೆ ಬತೀತ..?"

"ಇವಗೆಲ್ಲ ಎಲ್ ಬತ್ತವೆ ನಮ್ ಅಪ್ಪಾರ್ ಕಾಲ್ದಲಿ ಬರವಂತೆ ನಾನಂತು ಕಾಣ್ನಪ್ಪ".

ಮತ್ತೆ ಮೌನ. ದೀಪ ಹಾರಿದ್ದರೂ ಕತ್ತಲಲ್ಲೇ ಕಣ್ಣುಗಳು ಜಾತ್ರೆಯ ಬಣ್ಣವನ್ನು ಬಣ್ಣನೆಯನ್ನು ತಡಕುತ್ತಿದ್ದವು.

"ಅವ್ವ ನಾಳಿಕೆ ಹಾಕ್ಯಳಕೆ ಬಟ್ಟೆ..?"

"ಇರವ್ನೆ ಹಾಕ್ಯ, ಅತ್ತೆ ಕೊಟ್ಟವ್ಳಲ್ಲ ಅದುನ್ನೆ ಹಾಕ್ಯಂಡೋಗು".

"ಅದು ದೊಡ್ದಾಯ್ತಿತೆ"

"ಪಿನ್ನ ಹಾಕಿ ಉಡುದಾರಕ್ಕೆ ಸಿಗಿಸ್ಕೊಂಡೋಗು"

          ಲೆಕ್ಕಾಚಾರಗಳು ಮುಂದುವರೆದವು, ಎತ್ತೆತ್ತಲೋ ಸಾಗಿ ಆರಂಭವಿಲ್ಲದೇ ಆರಂಭಗೊಂಡು ಅಂತ್ಯದ ಅರಿವಿಲ್ಲದೇ ಮರೆಯಾಗುತ್ತಿದ್ದವು.

"ಅವ್ವ ಜಾತ್ರಿಗೆ ಏನೇನ್ ಬತೀತೆ ಹಂಗಾರೇ?

"ಬೆಳಿಗ್ಗೆ ನೋಡುವಂತೆ ಮನಿಕ್ಯೊ ಸುಮ್ಕೆ"

         ಆಲೋಚನೆಗಳು ಬಿಡಲಿಲ್ಲ, ಬೆಳಗಾದರೇ ಜಾತ್ರೆ. ಆಟದ ಸಾಮಾನು ಮೈಸೂರು ಪಾಕು, ಕಡ್ಲೇಪುರಿ, ರಾಟವಾಣ ಎಲ್ಲಾ ಈಗಲೇ ಬಂದಿರಬಹುದೇ? ನಿಲ್ಲದ ಪ್ರಶ್ನೆಗಳು ಹುಟ್ಟಿ ಸಾವಿಲ್ಲದೇ ಕಾಣಿಯಾಗುತ್ತಿದ್ದವು. ಜಾತ್ರೆಯಲ್ಲೇ ಮಲಗಿ ಜಾತ್ರೆ ಜಾತ್ರೆ ಎಂದೇ ತಡವರಿಸಿ ಮೇಲೆದ್ದೆ.

         ಬಚ್ಚಲ ಹಂಡೆಗೆ ಹತ್ತಾರು ಬಾರಿ ಕೈಹಾಕಿ ಬೇಗ ನೀರು ಕಾಯಲೆಂದು ತೆಂಗಿನ ಗರಿ ಮಟ್ಟೆಯನ್ನು ತುರುಕಿದೆ. ಅಟ್ಟಿಯಲ್ಲಿ ಮಲಗಿ ನಾಚುತ್ತಿದ್ದ ರಂಗೋಲಿಯ ಎದೆ ಮೇಲೆ ನಿಂತು ನನಗಿಂತ ಮೊದಲೇ ಯಾರಾದರೂ ಹೊರಟರೇ ಎಂದು ಅಕ್ಕಪಕ್ಕದ ಮನೆಗಳ ಮೇಲೂ ಕಣ್ಣಾಡಿಸಿದೆ. ಎದುರು ಮನೆಯ ಸುಬ್ಬಣ್ಣ ಹಟ್ಟಿಯಲ್ಲಿ ಎಮ್ಮೆ ಕಟ್ಟುತ್ತಿದ್ದ. ಅವನ ಹೆಂಡತಿ ಬಕೇಟ್ ಹಿಡಿದು ಎಮ್ಮ ಮುಂದೆ ಇಡುತ್ತಾ "ಏನ ಶರು ಜಾತ್ರೆಗೆ ಹೋಕ್ಕುಲ್ವ." "ಹೀಗ ಸ್ನಾನ ಮಾಡ್ಕ್ಯಂಡು ಹೋಯ್ತಿನಿ" ಎಂದೇಳಿ ಮತ್ತೇ ಬಚ್ಚಲೆಡೆಗೆ ಧಾವಿಸಿದರೇ ಅಲ್ಲಿ ಚಡ್ಡಿ ನೆನೆಸುತ್ತಾ ಕುಳಿತಿದ್ದ ಚಿಕ್ಕಪ್ಪನನ್ನು ಕಂಡು ಸಿಟ್ಟು ಬಂದು "ನಾನ್ ಪಸ್ಟು ಮಾಡ್ಕ್ಯಬೇಕು ಅಂತ ನೀರ್ ಕಾಯ್ಸಿದ್ರೇ ನೀನ್ ಬಂದ್ ಕೂತಿದಿಯ..?" 

"ಆಮೇಲ್ ಮಾಡ್ಕ್ಯಳ್ವಂತೆ ಹೋಗ್ಲ ದೊಡ್ಮನ್ಸ."

"ನಾನ್ ಜಾತ್ರಿಗೆ ಹೋಗ್ಬೇಕು, ಲೇಟಾಯ್ತಿತೆ."

"ಜಾತ್ರೇಲಿ ಯಾರುನ್ನ ನೋಡ್ಬೇಕ್ಲ, ನಿಧಾನುಕ್ಕೆ ಅವ್ವಕುಟೆ ಹೋಗ್ವಂತೆ ಹೋಗು." ಮೈ ಕಿಡಿ ಕಿಡಿಯಾಗಿ ಕಣ್ಣೀರು ತುಂಬಿಕೊಂಡು ಕೊಟ್ಟಿಗೆಗೆ ಹೋದೆ. ಅವ್ವ ಎಮ್ಮೆ ಹಾಲ ಕರೆದು ಬೊಂಬಿಗೆ ತುಂಬುತ್ತಿದ್ದಳು. "ಅವ್ವ ನೋಡು ನೀರ್ ನಾನ್ ಕಾಯ್ಸಿದ್ರೆ ಚಿಕ್ಕಪ್ಪ ಹೋಗಿ ಸ್ನಾನ ಮಾಡ್ತವ್ನೆ, ಕೇಳಿದ್ಕೆ ಬೈಯ್ತನೆ."

"ಅಯ್ಯ ಅವುಂದು ಇದ್ದಿದ್ದೆಯ ಬುಡು, ಏನ್ ಅಂತ ಉಸಾಬರೀನೊ ಕಾಣೆ. ಅವ್ನಾದ್ಮೇಲೆ ಮಾಡ್ಕಳ್ವಂತೆ ಹೋಗವ." ವಿಧಿಯಿಲ್ಲದೇ ಕಾದು ಹಂಡೆಯಲ್ಲಿ ತಳಕಂಡಿದ್ದ ನೀರಿಗೆ ಅವಸರ ಅವಸರವಾಗಿ ಇಳಿದು ಅರೆಬರೆ ತೊಳೆದು "ಅವ್ವ ಬಟ್ಟೆ ಕೊಡ್ಬಾ"

"ತಡಿಲಾ ನಾನೇ ಬಂದ್ ಮಾಡುಸ್ತಿನಿ."

"ನಂದಾತು ಬಾ, ಬಟ್ಟೆ ಕೊಡು"

"ತೂ ಏನ್ ಅರ್ಜೆಂಟು ಅಂತಿನಿ ಈ ಹುಡ್ಗುಗೆ, ನೆಟ್ಟುಗ್ ಮೈ ತಿಕ್ಯಂಡ."ಎಂದು ಗೊಣಗುಡುತ್ತಾ ಕುಕ್ಕೆಯಲ್ಲಿ ತುಂಬಿಟ್ಟ ಅತ್ತೆ ಮಗನಿಗೆ ಹಳತಾದ ದೊಗಳೆ ಚಡ್ಡಿಯನ್ನು, ಜೋಬು ಕಿತ್ತು ನೇತಾಡುತ್ತಿದ್ದ ಶರ್ಟನ್ನು ತೆಗೆದುಕೊಟ್ಟಳು. ಒಂದೇ ಉಸಿರಿಗೆ ಶರ್ಟಿನೊಳಗೆ ನುಸುಳಿ ದೊಗಳೆ ಚಡ್ಡಿಯನ್ನು ಉಡುದಾರಕ್ಕೆ ಸಿಕ್ಕಿಸತೊಡಗಿದೆ. "ತಡಿಲಾ ಅತುರ್ಗೇಡಿ" ಎಂದು ನಗುತ್ತಾ ಅವ್ವ ಚಡ್ಡಿಗೆ ಪಿನ್ನಾ ಹಾಕಿ ಗಟ್ಟಿಮಾಡಿ ಭುಜ ಹೊಟ್ಟಯ ಶರ್ಟನ್ನು ನೀವಿದಳು. ಬಿಡಿಸಿಕೊಂಡು ಓಡುವ ಬರದಲ್ಲಿದ್ದವನನ್ನು ಹಿಡಿದು ಕೈಗೊಂದು ರೂಪಾಯಿ ಕೊಟ್ಟು ಮುತ್ತಿಟ್ಟು "ಜ್ವಾಪಾನ" ಎಂದಳು.


ಬೇಡದೆ ಒಲಿದು ಬಂದ ಲಕ್ಷ್ಮೀಯಿಂದ ಹೊಸತೊಂದು ಯೋಚನೆ ಮೂಡಿ ಕವಲೊಡೆದು ನೂರಾಯಿತು. "ರೂಪಾಯಿಲಿ ಏನೇನ್ ತಗಳದು..?"ಎಂದು ತಲೆಕೆರೆಯುತ್ತಿರುವಾಗಲೇ ಹಿಂದಿನಿಂದ ಮಂಜಣ್ಣನ ಮರದ ಗಾಲಿಯ ಎತ್ತಿನ ಗಾಡಿ ಬಂದಿತು.

"ಬತ್ತಿಯೆನ್ಲ"

"ಹುಂ"

"ಜಲ್ದಿ ಹತ್ತು" ಆಗಾಗಲೇ ಗಾಡಿಯ ತುಂಬೆಲ್ಲ ಜಾತ್ರೆಯ ಜನಗಳು ತುಂಬಿದ್ದರು. ಕೆಲವು ಚಡ್ಡಿಯಿಂದ ಮೇಲೆತ್ತಿ ಕಟ್ಟಿದ್ದ ಬಿಳಿಪಂಚೆಗಳು, ಇನ್ನುಳಿದವು ಮಿಂಚು ಹಂಚಿನ ಸೀರೆಗಳು. ಮಂಜಣ್ಣನ ಮಗ ವಿಶ್ವ ನಾನು ಗಾಡಿ ಒಡೆಯುತ್ತೇನೆಂದು ಅಪ್ಪನೊಡನೆಯೇ ಬಾರುಕೋಲು ಹಿಡಿದು ಮುಂದೆ ನಿಂತಿದ್ದ. ಠೀವಿಯಿಂದ ಒಮ್ಮೆ ತಿರುಗಿ "ಆಯ್ತೆನ್ಲ..?"ಎಂದು ಕೇಳಿಯುಬಿಟ್ಟ.
"ಹುಂ" ಎನ್ನುತ್ತಾ ಕೂರಲು ಜಾಗವಿಲ್ಲದೇ ಹಿಂಬದಿಯಲ್ಲಿ ರಸ್ತೆಯ ಹಿಮ್ಮುಗ ಓಟಕ್ಕೆ ಕಣ್ಣು ಕೊಟ್ಟು, ಗಾಡಿ ಹಲಗೆಗೆ ಒರಗಿ ತೂಗಾಡುತ್ತಾ ನಿಂತೆ. ಮಂಜಣ್ಣನ ಕಪ್ಪು ಕೋಡಿನ ಬಿಳಿ ಎತ್ತುಗಳು ವಿಶ್ವನ ಬಾರುಕೋಲಿಗೆ ಬೆದರಿ ಓಡುತ್ತಿದ್ದವು.

             ಗಾಡಿ ಅಕ್ಕಸಾಲಿಗರ ಗದ್ದೆ ಏರಿ ದಾಟಿ ಹಕ್ಕೆಯನ್ನು ಹಿಂದಿಕ್ಕಿ ಬೂನಳ್ಳಿಗೆ ನುಗ್ಗಿತು. ಭಾರೀ ಜನಜಂಗುಳಿಯೇ ಅಲ್ಲಿತ್ತು. ಕೈಯಲ್ಲಿ ಬುಟ್ಟಿ ಬ್ಯಾಗುಗಳನ್ನು ಹಿಡಿದು ಜನಸಂದಣಿ ಅತ್ತಿಂದಿತ್ತ ಇತ್ತಿಂದತ್ತ ಹರಿದಾಡುತ್ತಿತ್ತು. ರಸ್ತೆ ತುಂಬಿದ್ದರಿಂದ ಗಾಡಿಯನ್ನು ಸೈಡಿಗೆ ನಿಲ್ಲಿಸಿ "ಇಳ್ಕಳಿ ಇಳ್ಕಳಿ" ಎಂದು ಮಂಜಣ್ಣ ಗಾಡಿಯಿಂದ ನೆಗೆದು ನೊಗ ಬಿಚ್ಚಲು ಅನುವಾದ. ಅವಸರದಲಿ ನಾನೂ ಕೆಳಗೆ ನೆಗೆದೆ, ಗಾಡಿಯ ಹಲಗೆಗೆ ಹೊಡೆದಿದ್ದ ಮೊಳೆಗೆ ಸಿಲುಕಿ ಎರಡಿಂಚು ಉದ್ದದಷ್ಟು ಚಡ್ಡಿ ಸೀಳಿಹೋಯಿತು. ನನ್ನಹಿಂದೆ ಇಳಿಯಲು ನಿಂತಿದ್ದ ಕೆಳಗಲ ಕೇರಿ ಸಾವಿತ್ರಮ್ಮ ಹಲ್ಲು ಬಿರಿದು "ಯಾಕ್ಲ" ಎಂದಳು. ನನ್ನ ಅವಸ್ಥೆ ಕಂಡು ಎಲ್ಲರೂ ನಗಲಾರಂಭಿಸಿದರು. "ಅದು ಸಿಕಾಕ್ಯಂಡಿತ್ತು ಗೊತಾನಿಲ್ಲ" ಎನ್ನುತ್ತಾ ಅವರ ಗುಂಪನ್ನು ಬಿಟ್ಟು ಮುಂದಕ್ಕೆ ಓಡಿದೆ. ಎತ್ತುಗಳ ಬಿಚ್ಚಿ ಗಾಡಿ ಇಳುಕುತ್ತಿದ್ದ ಮಂಜಣ್ಣ "ತಡಿಲಾ" ಎಂದರೂ ನಿಲ್ಲದೇ ಓಡಿ ಊರೊಳಕ್ಕೆ ಬಂದೆ.

            ಅಲ್ಲಿ ಚನ್ನಪ್ಪನ ಅಡ್ಡೆ ಅಡ್ಡದಿಡ್ಡಿಯಾಗಿ ಓಡಾಡುತ್ತಿತ್ತು. ಜನರು ನಿಂತಲ್ಲೇ ಕೈಮುಗಿದು ಕೆನ್ನೆ ತಟ್ಟಿಕೊಳ್ಳುತ್ತಿದ್ದರು. ಕರಿಯಣ್ಣನ ವಾದ್ಯ ಭೀರದೇವರ ಹೊತ್ತ ವೇಷದಾರಿಗಳನ್ನು ಕುಣಿಸುತ್ತಿತ್ತು. ನಿಂತಲ್ಲಿಯೇ ಕುಣಿಸುವಂತಿದ್ದ ಬೆಟ್ಟಮಣೆ ಸದ್ದು ಕೇಳುತ್ತಾ ನಾನು ಕುಣಿಯಬೇಕೆನಿಸುವಂತಿತ್ತು. ಅಷ್ಟರಲ್ಲಿ ಚನ್ನಪ್ಪನ ಅಡ್ಡೆ ಜನರ ಗುಂಪಿನ ಮೇಲೆಯೇ ನುಗ್ಗಿಬಂತು. ಇದರ ಸಹವಾಸವೇ ಬೇಡವೆನ್ನುತ್ತಾ ದೇವಸ್ತಾನದ ಬೀದಿಗೆ ಬಿದ್ದೆ. ಅಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಜನ. ಅದರಲ್ಲೂ ಬರೀ ಹೆಂಗಸರೇ. ಸೆರಗುಗಳ ಸರಿಸಿ ನುಸುಳಿ ನುಸುಳಿ ದೇವಸ್ತಾನದ ಮುಂದೆ ಬಂದರೆ ಅಲ್ಲಿ ಕೆಂಡ ರವಗುಡುತ್ತಿತ್ತು. ಜನಗಳು ತಳ್ಳಾಡಿ ತಳ್ಳಾಡಿ ಒಬ್ಬೊಬ್ಬರೇ "ಕೆಟ್ನಲ್ಲಪ್ಪೋ..." ಎನ್ನುವಂತೆ ಕೆಂಡದ ಮೇಲೆ ಕಣ್ಮುಚ್ಚಿ ಓಡುತ್ತಿದ್ದರು.

          ಇದು ನನ್ನದಲ್ಲದ ಜಾಗ ಎಂದು ಹೇಗೆ ನುಗ್ಗಿದ್ದೆನೋ ಹಾಗೇಯೆ ವಾಪಸ್ಸಾದೆ. ಅಷ್ಟರಲ್ಲಿ ಅಡ್ಡೆ ಭೀರದೇವರುಗಳು ತೋಪನ್ನು ಮುಟ್ಟಿದ್ದವು. ಅವುಗಳ ಹಿಂದೆ ರಾಶಿ ರಾಶಿ ಜನಗಳು "ಐಸ್ಸಾ…. ಎಳಿರಿ ಎಳಿರಿ…ಐಸ್ಸಾ…" ಎಂದು ಉಸಿರುಗಟ್ಟಿಕೊಂಡು ತೇರೆನ್ನೆಳೆಯುತ್ತಿದ್ದರು. ದೂರದಲ್ಲಿ ನಿಂತ ಜನರು ಅಲ್ಲಿಂದಲೇ ಕೈಮುಗಿದು ತೇರಿಗೆ ಬಾಳೆಹಣ್ಣು ಹೂಗಳಿಂದ ಬಾರಿಸುತ್ತಿದ್ದರು.       ನನಗೂ ತೇರೆಳೆಯುವ ಮನಸ್ಸಾಗಿ ಓಡಿದೆ. ಹಗ್ಗ ಹಿಡಿಯುವುದಿರಲಿ ಹತ್ತಿರ ಹೋಗಲು ಸಹ ಕಷ್ಟವಿತ್ತು. ಒಬ್ಬರ ಅಂಡು ಒಬ್ಬರು ಹಿಡಿದು ಎಳೆಯುವಂತೆ ಕಂಡು ಹಗ್ಗವೇ ಮರೆಯಾದಂತಿತ್ತು. ಅಂತೂ ಹೇಗೋ ನುಸುಳಿ ಕೈಹಾಕಿದೆ ಹಗ್ಗ ಸಿಗಲಿಲ್ಲ, ಇನ್ಯಾರದೋ ಕೈಹಿಡಿದಿದ್ದೆ. ಅವನು ತಿರುಗಿದನೇ ನನ್ನ ರಟ್ಟೆಹಿಡಿದು "ಐ ಹೋಗತ್ಲಗಿ, ಸಿಕ್ಕಾಕ್ಯಂಡ್ ಸತ್ಗಿತ್ ಹೋದೀಯ" ಎಂದು ತೆಗೆದು ಹಿಂದಕ್ಕೆ ಎಸೆದುಬಿಟ್ಟ. ಕ್ಷಣದಲ್ಲೇ ಕೋಪ ನೆತ್ತಿಗೇರಿ ಹಿಂದಿನಿಂದ ಕಚ್ಚಿ ಓಡಿಬಿಡಲೆ ಎನಿಸಿತು.

            ಆದರೆ ಕಣ್ಣುಗಳು ಕೋಪದಿಂದಲೇ ತುಂಬಿ ಹನಿಯಾದವು. ಅಲ್ಲಿ ನಿಲ್ಲಲು ಮನಸಾಗದೆ ಚಡ್ಡಿಯೆಳೆದುಕೊಂಡು ಮೆಲ್ಲಗೆ ಮೆರವಣಿಗೆಯಿಂದ ದೂರ ನಡೆಯುತ್ತಿರುವಾಗ ಅವ್ವ ಕೊಟ್ಟ ಕಾಸು ನೆನಪಾಯಿತು. "ತೋಪಿಗಾರ ಹೋಗನ, ಅಂಗಡಿ ಬಂದಿರ್ತವೆ" ಎಂದು ಮತ್ತೆ ಓಡಲಾರಂಭಿಸಿದೆ. ಸ್ವಾಮಣ್ಣನ ಅಂಗಡಿ ಪಕ್ಕ ಮುತ್ತಿದ್ದ ಜನಜಂಗುಳಿ ನನ್ನ ಓಟಕ್ಕೆ ಬ್ರೇಕ್ ಹಾಕುವಂತೆ ಮಾಡಿತು.

            ಅದು ಕೋಳಿ ಅಂಕ. ದುಡ್ಡು ಕಟ್ಟಿ ಕೋಳಿಜಗಳಕ್ಕೆ ಬಿಡುತ್ತಿದ್ದರು. "ನೆಗಿ, ಕುಕ್ಕು… ಹಿಡ್ಕ, ಹಂಗೇ.." ಇತ್ಯಾದಿ ಸದ್ದುಗಳು ಅಲ್ಲಿದ್ದವು. ಸಂದಿಯಲ್ಲಿ ನುಗ್ಗಿ ತಲೆಮಾತ್ರ ಒಳಗೆ ಹಾಕಿದೆ. ಎರಡು ಕೆಂಪು ಹುಂಜಗಳು ಒಂದೇ ತರವೇ ಇದ್ದರೂ, ಒಂದು ಇನ್ನೊಂದನ್ನು ಹಿಡಿದು "ಕೊರ್…ಕೊರ್…" ಎಂದರೂ ಬಿಡದೇ ಕುಕ್ಕುತ್ತಿತ್ತು. "ತೂ...ಇದ್ರ, ಶೇಷಣ್ಣ ಇದು ಪಂಥಕೆ ಆಗಕುಲ್ಲ ಹಿಡ್ಕ ನಡಿ ಒಂದೊತ್ ಊಟಕಾಯ್ತದೆ" ಎಂದು ಕೋಳಿ ಜರೆಯುತ್ತಾ ದುಡ್ಡು ಕಳೆದುಕೊಂಡು ಕೂತಿದ್ದ ಚಿಕ್ಕಪ್ಪನನ್ನು ಕಂಡು ನನ್ನ ಬಳಿ ಇದ್ದ ರೂಪಾಯಿಯನ್ನೂ ಕಿತ್ತುಕೊಂಡಾನು ಎಂದು ತೂರಿಸಿದ್ದ ತಲೆಯನ್ನು ಹೊರಗೆಳೆದುಕೊಂಡು ತೋಪಿಗೆ ಬಂದೆ.

            ನೂರು ಬಣ್ಣಗಳ ಒಟ್ಟಿಗೆ ಕಣ್ಣಿಗೆ ರಾಚುತ್ತಿದ್ದ ಅಂಗಡಿ ಮಳಿಗೆಗಳೂ, ಗಿರಗಿರ ತಿರುಗುತ್ತಿದ್ದ ರಾಟವಾಣಗಳಲ್ಲಿ ಕುಳಿತು "ಹೋ…" ಎಂದರಚುತ್ತಿದ್ದರೂ, ದೊಡ್ಡ ದೊಡ್ಡ ಪುರಿ ಮೂಟೆಗಳ ಹಿಂದೆ ಕುಳಿತ ಬನೀನುದಾರಿ ದಢೂತಿಯ ಬಾಣಲೆಯಲ್ಲಿ ಕುದಿಯುತ್ತಿದ್ದ ಜಿಲೇಬಿಗಳು, ಒತ್ತೊಟ್ಟಾಗಿಟ್ಟ ಇಟ್ಟಿಗೆರಾಶಿಯಾಗಿದ್ದ ಮೈಸೂರು ಪಾಕು, ಸಕ್ಕರೆ ಅಚ್ಚು, ಸುಣ್ಣದಕಲ್ಲುಗಳ ರಾಶಿ, ಹಾರ್ನ್ ಮಾಡಿಕೊಂಡು ಓಡುವ ಪುಟಾಣಿ ಕಾರು, ಕೀ ಕೊಟ್ಟರೆ ಕುಳಿಯುವ ಹುಡುಗಿ ಗೊಂಬೆ, ಕೊಳಲು, ನೀಲಿ ಕೆಂಪು ಹಳದಿ ಬಲೂನುಗಳು, ಪ್ಲಾಸ್ಟಿಕ್ ಬಾಲು ಬ್ಯಾಟು, "ಪೂಯ್..." ಎಂದು ಪೀಪಿ ಊದುತ್ತಾ ಕುಳೀತ ಪೀಪಿ ಅಂಗಡಿಯವನು, ಹಚ್ಚೆ ಹಾಕುವವನಿಗೆ ಕೈಕೊಟ್ಟು ಕಣ್ಮುಚ್ಚಿ ಕುಳಿತವರು, ಅದು ಇದು ಎಂದು ಕೈತೋರಿ ಹಠ ಮಾಡುವ ಮಕ್ಕಳಿಗೆ ಗದರಿಸುವರು ನೋಡುತ್ತಾ ಪುಳಕಿತನಾಗಿ ಮೀನು ಮೇಲೆ ಕೆಳಗೆ ಆಡುವಂತೆ ಮೂರು ಭಾರಿ ಅಂಗಡಿಗಳ ಮುಂದೆ ಸುತ್ತಿ ಬಂದೆ. ಸಣ್ಣದೊಂದು ಕಾರು ಕೈಬೀಸುತ್ತಿತ್ತು. ಹತ್ತಿರ ಹೋಗಿ ಮುಟ್ಟಿ "ವಮ್ಮೊವ್, ಇದೆಷ್ಟು..?"


"ಮೂರುಪ್ಪಾಯ್ ಒಂದು"

ತಕ್ಷಣ ಕೈತೆಗೆದು "ಪೀಪಿ.....?"

"ಎರಡ್ರುಪಾಯ್"

"ತೂ.. ನಮ್ಮವ್ವ ಇನ್ನೊಂದ್ರುಪಾಯ್ ಜಾಸ್ತಿ ಕೊಟ್ಟಿದಿದ್ರೆ" ಎಂದಕೊಂಡು ಮೇಲೇಳುವಾಗ ಹಸಿರು ಲಂಗ ತೊಟ್ಟು ಮೇಲೆತ್ತಿ ಕಟ್ಟಿದ ಎರಡು ಜುಟ್ಟಿಗೂ ಮಲ್ಲಿಗೆ ಸುತ್ತಿ ಚಿಟ್ಟೆಯಾಗಿದ್ದ ಶ್ವೇತಾ ಪಕ್ಕದಲ್ಲಿಯೇ ನಿಂತು "ನೀನೇನ್ ತಗತಿದಿಯ, ನಂಗೆ ನಮ್ಮಪ್ಪ ರೈಲು ಕೊಡುಸ್ತು ಗೊತ್ತಾ" ಎಂದು ನುಲಿದಳು.
"ನಮ್ಮವ್ವನು ನನಿಗೆ ಬಸ್ ಕೊಡುಸ್ತಿತಂತೆ ಅಮೇಲಿಂದವ ಗೊತ್ತಾ..." ಎಂದವನೇ ಅವಳ ಕಡೆಗೂ ತಿರುಗದೆ ಚಡ್ಡಿಯ ತೂತು ಮುಚ್ಚಿ ಜಿಲೇಬಿಯ ಅಂಗಡಿ ಬಳಿ ನಿಂತು "ಎಷ್ಟು..?"

"ಜಿಲೇಬಿ ರೂಪಾಯ್ಗೊಂದು, ಮೈಸೂರ್ ಪಾಕ ರೂಪಾಯಿಗೆರಡು" ಬಾಯಿಗೆ ಬೆರಳಿಟ್ಟು ಲೆಕ್ಕಾಚಾರ ಮಾಡಿ ತಲೆಕೆರೆದು ಮೂಗೊರೆಸಿ ಸ್ಕೂಲ್ ಮನೆತಾವ ಇನ್ನೂ ಅಂಗಡಿಗಳಿರಬಹುದೆಂದು ಅತ್ತ ನಡೆದೆ. ಮನಸ್ಸು ತಿನ್ನುವುದಕ್ಕಿಂತ ಆಡುವುದನ್ನೇ ಹೆಚ್ಚು ಬೇಡುತ್ತಿತ್ತು.

          ಸ್ಕೂಲ್ ಮನೆ ಮುಂದೆ ಕುಸ್ತಿ ಪಂದ್ಯ ನಡೆಯುತ್ತಿತ್ತು. ಪೈಲಾನ ಚನ್ನಪ್ಪಯ್ಯ ಕಚ್ಚೆ ಹಾಕ್ಕೊಂಡು ನಿಂತಿದ್ದ, ಅವನ ಎದುರಿದ್ದ ಇನ್ನೊಬ್ಬ ದಡಿಯ ಯಾರೆಂದು ತಿಳಿಯಲಿಲ್ಲ. ಅಷ್ಟರಲ್ಲಿ ಚನ್ನಪ್ಪಯ್ಯನ ಮಗ ನಮ್ಮ ಶಾಲೆಯ ಬೂಸಾ ಮಾಧು ಕಣ್ಣಿಗೆ ಬಿದ್ದನು. ನನ್ನ ನೋಡಿ "ಬಾರ್ಲ ನಾವು ಕುಸ್ತಿ ಆಡನ" ಎಂದು ಕರೆದರೇ ಎಂದು ಯೋಚಿಸುವ ಮುನ್ನವೇ ಕಾಲುಗಳು ಓಡಲಾರಂಭಿಸಿದವು.

           ವಾದ್ಯಗಳು ಭೀರದೇವರುಗಳು ಅಡ್ಡೆಯೊಂದಿಗೆ ಸುತ್ತುತ್ತಲೇ ಇದ್ದವು. ತೇರು ತೋಪಿನ ದ್ಯಾವಮ್ಮನ ಗುಡಿ ಮುಂದೆ ಕೇಳುವವರೆ ದಿಕ್ಕಿಲ್ಲದಂತೆ ನಿಂತಿತ್ತು. ಜಾತ್ರೆಯಲ್ಲಿ ಜನಸಂಚಾರ ತೊರೆ ಬತ್ತಿದಂತೆ ಬತ್ತುತ್ತಿತ್ತು. ಜೋಬಲ್ಲಿ ರೂಪಾಯಿ ಹಾಗೇಯೇ ಇತ್ತು. ಹೊಸದೊಂದು ಉಪಾಯ ಹೊಳೆಯಿತು. ತೋಪಿನ ಮೂಲೆಯಲ್ಲಿ ಕಾರು ಬಸ್ಸು ಪೀಪಿಗಳನ್ನು ಮಾರುತ್ತಿದ್ದ ಅಂಗಡಿಯ ಮುಂದೆ ಕುಕ್ಕರುಗಾಲಾಗಿ ಕೂತು "ಅದೆಷ್ಟು, ತೋರ್ಸಿ ವಸಿಯ" ಎಂದು ಅಂಗಡಿಯವಳ ಹಿಂದೆ ಇದ್ದ ಯಾವುದೇ ವಸ್ತು ತೋರಿಸಿ ಆಕೆ ಅತ್ತ ತಿರುಗಿದೊಡನೆ ಕೆಂಪು ಬಣ್ಣದ ಹಾರ್ನ್ ಕಾರಿಗೆ ಕೈಯಿಟ್ಟೆ. ಅಂಗಡಿಯವಳ ಮಗ ಮುದುಡಿ ಮಲಗಿದ್ದವನು ಟಕ್ಕನೆ ಎದ್ದು "ಅವ್ವ ಅವ್ವ ತಗತಾವ್ನೆ ತಗತಾವ್ನೆ" ಎಂದರಚಿದ. ಎಲ್ಲಿ ಹಿಡಿದುಕೊಂಡಾರೋ ಎಂದು ಅಲ್ಲಿಂದ ಬರಕಿತ್ತೆ. ಯಾರೋ ಒಬ್ಬ "ಹಿಡ್ಕಳಿ, ಹಿಡ್ಕಳಿ" ಅಂದ, ತಿರುಗಿ ಕೂಡ ನೋಡದೇ ಓಡಿ ಊರೋಳಕ್ಕೆ ಬಂದಿದ್ದೆ. ಸಂಜೆಯಾಗುತ್ತಿತ್ತು, ಓಡಿ ಓಡಿ ಕೈಕಾಲೆಲ್ಲವೂ ಸೋಲುತ್ತಿದ್ದವು, ಜಾತ್ರೆಯ ಮೇಲೆ ಬೇಸರವೂ ಆಗಿತ್ತು.
"ಮನೆಗಾದ್ರೂ ಹೊಗನ ಅಂದ್ರೇ ರೂಪಾಯಿ…? ಜಿಲೇಬಿನಾರ ತಿನ್ಬೋದಾಗಿತ್ತು" ಎಂದುಕೊಳ್ಳುತ್ತಾ ತಿರುಗಿ ತೋಪಿಗೋದರೆ ಹಿಡಿದು ಮರಕ್ಕೆ ಕಟ್ಟಿದರೇ ಎಂಬ ಭಯದಲ್ಲಿ ಹೊಂಚುಹಾಕುತ್ತಿರುವಾಗ ಕಂಕುಳಲ್ಲಿ ಅವುಚಿ, ಮೂತಿಗೆ ನೋಣಮುತ್ತಿದ್ದ ಮಗುವನ್ನು ತಬ್ಬಿ ಹಿಡಿದು "ಅಣ್ಣಾ ಸಾಮಿ ಎನಾರಾ ಕೊಡಣ್ಣ ಮಗಿಗೇ.." ಎಂದು ಸಿಕ್ಕ ಸಿಕ್ಕವರನ್ನು ಕಾಡುತ್ತಿದ್ದ ಕರಿಮೈಯ್ಯ ಭಿಕ್ಷುಕಿಯೊಬ್ಬಳು ಎಲ್ಲರಿಂದಲೂ ಬೈಸಿಕೊಳ್ಳುತ್ತಾ ಮುಂದೆ ಬಂದಳು.

           ಮನಸ್ಸಿಗೇನು ತೋಚಿತೋ ಸೀದಾ ಅವಳ ಕೈಯಲ್ಲಿ ರೂಪಾಯಿ ಎಸೆದು ಚಡ್ಡಿಯ ತೂತನ್ನೂ ಮುಚ್ಚಿ ಹಿಡಿಯದೇ ನೇರವಾಗಿ ಮನೆಗೆ ನಡೆದೆ.
ಅವ್ವ "ಇಷ್ಟತಂಕ ಎಲ್ ಹೋಗಿದ್ಲ, ನಾವ್ ಅಲ್ಲೇಲ್ಲ ಹುಡ್ಕಿದ್ರು ಇಲ್ಲ"


ನಾನೇನು ಮಾತಾಡಲಿಲ್ಲ. ಹಾಗೇ ಗೋಡೆಗೊರಗಿ ಮನೆ ಸೂರನ್ನು ದಿಟ್ಟಿಸುತ್ತರುವಾಗ, ಅವ್ವ "ರೂಪಾಯ್`ಲೇನ್ ತಗಂಡೆ?"

"ನಿನ್ ರೂಪಾಯಿಗೇನ್ ಬತೀತೆ" ಎಂದು ನಡೆದುದ್ದನ್ನು ಹೇಳಿದೆ. ಅವ್ವ ನಗುತ್ತಾ "ಅದ್ಕೇಯ ಮೂತಿ ಹನುಮಂತರಾಯ ಆಗಿರದು, ಹೋಗ್ಲಿಬುಡು ಮನೇ, ಅದ್ರು ಋಣ ಭಿಕ್ಷೆಳ್ ಮಗಿಗಿತ್ತೆನೋ, ತಗ ಜಾತ್ರೆಲಿ ನಾನೇ ತಂದಿದಿನಿ" ಎಂದು ಒಂದು ತಟ್ಟೆಯಲ್ಲಿ ಕಡಲೆಪುರಿ, ಎರಡು ಜಿಲೇಬಿಗಳನ್ನು ತಂದುಕೊಟ್ಟಳು. ಅವುಗಳನ್ನು ಕಂಡಿದ್ದೆ ಜಾತ್ರೆಯಲ್ಲಿ ನಡೆದ ಪರಿಪಾಟಲುಗಳು ಮರೆತೆಹೋದವು. ಚಿಕ್ಕಪ್ಪ ನನಗೆ ಎಂದು ತಂದಿದ್ದ ಪೀಪಿಯನ್ನು ಸಹ ಕೊಟ್ಟಳು. ಆ ಕ್ಷಣ ಅವ್ವನ ಕುತ್ತಿಗೆ ತಬ್ಬಿ ಮುತ್ತಿಟ್ಟು ಪೀಪಿ ಊದುತ್ತಾ ಊರೆಲ್ಲಾ ಸುತ್ತಿ ಬಂದು, ರಾತ್ರಿಯೆಲ್ಲಾ ಊದಿ ಎಲ್ಲರ ನಿದ್ದೆ ಕೆಡಿಸಿ ಅದನು ತಂದುಕೊಟ್ಟ ಚಿಕ್ಕಪ್ಪನಿಗೂ ಎಲ್ಲರೂ ಉಗಿಯುವಂತೆ ಮಾಡಿದೆ.

            ಕೆರೆ ನೀರಿನಲ್ಲಿ ಬಿಂಬ ನಗುತ್ತಿತ್ತು. ಆಗಲೇ ಮಧ್ಯಾಹ್ನ ಕಳೆದು ಸಂಜೆಯಾಗುತ್ತಲಿತ್ತು. ಆ ಮಧುರ ದಿನಗಳು ಇನಿಲ್ಲವಾಗಿದ್ದವು. ಕಾಡುತ್ತಿದ್ದ ನೆನಪುಗಳ ಅಲೆಗಳನ್ನು ದೇವಗೆರೆ ಹಾಳೆಯ ಮೇಲೆ ಇಳಿಬಿಟ್ಟು ಗಲ್ಲಕ್ಕೆ ಕೈಯಿರಿಸಿದೆ. ಗಡ್ಡ ಕೈಗೆ ಚುಚ್ಚಿತು. ಈ ಹರುಕು ಗಡ್ಡಕ್ಕಿಂತ  ಹರುಕು ಚಡ್ಡಿಯೇ ವಾಸಿಯೆಂದು ಅಲ್ಲಿಂದೆದ್ದೆ.
                                     ==========



ಸೋಮವಾರ, ಜನವರಿ 30, 2012

ಗೋರಿ

ಎನ್ನ ಪ್ರೇಮಸೌದ 
ಉರುಳಿ ಬಿದ್ದರೂ
ನನ್ನೆದೆಮೇಲೆ ಹಾಗೇಯೇ
ಕುಳಿತಿದ್ದ ಗೋಪುರವ
ಕಂಡು ಜನ
'ಗೋರಿ' ಎಂದರು..!!

ಶರತ್ ಚಕ್ರವರ್ತಿ.

ಶನಿವಾರ, ಜನವರಿ 28, 2012

ಕವಿತೆ



ಕಾಡಿಗೆ ತೀಡಿದ ಕಂಗಳ
ಚಂಚಲೆಯ ಮುಂಗುರುಳು
ಮುದ್ದಿಸುವ ಕೆನ್ನೆಮೇಲೆ
ಮೂಡಿದ ಮೊಡವೆಯಾಗಿ ಬಂದೆ 


ನವಿಲ ನಾಚಿಸಿ ಕುಣಿವ
ನರ್ತಕಿಯ ನುಲಿವ 
ಸೊಂಟದ ಮೇಲಿನ
ನುಣುಪಾದ ನರಿಗೆಯಾಗಿ ಕಂಡೆ 


ಪುರಷನ ತೆಕ್ಕೆಯಲಿ ಬೆರೆತು
ಹೊಸೆದುಕೊಂಡು ಬೆವೆತ
ಪ್ರಕೃತಿಯ ಬಿಸಿಯುಸಿರ
ನವಿರಾದ ನರಳುವಿಕೆಯಲಿ ಚಿಮ್ಮಿದೆ. 


ವೃದ್ದನ ಬಿಳಿತಲೆಯ ಕಂಡು
ಹಿಯ್ಯಾಳಿಸಿ ನಗುವ
ಸುಕ್ಕುಗಟ್ಟಿದ ಮುದುಕಿಯ
ಬೋಡು ನಗೆಯಲ್ಲಿ ಹರಿದೆ 


ಅಮ್ಮನ ಕೊಂದ ನಿನ್ನ
ಬಿಡಲಾರೆಯೆಂದು ಬೊಗಸೆ
ಮಣ್ಣನಿಡಿದು ಕಡಲ ಮುಚ್ಚಲೊರಟ
ಮಗುವಿನ ಮುಗ್ದ ಕಣ್ಣಲಿ ನಿಂತೆ 


ಬಾರದ ಮಳೆಗೆ ಮುಖವೊಡ್ಡಿ
ಬೀಳುವ ಗುಂಡಿಗೆ
ಎದೆಯೊಡ್ಡಿ ನಿಂತ ರೈತನ
ಭವಿಷ್ಯದ ಪ್ರಶ್ನಾರ್ಥಕವಾಗಿ ಕುಳಿತೆ 


ನಿನಗಾಗಿಯೇ ಮಡಿ ಹಾಳೆಯ
ಮಡಿಸದೇ ಧ್ಯಾನಿಸುತ್ತಾ
ಕುಳಿತಾಗ ಎದೆಯೊಡೆದು
ಹೊರಬರಲಾರದಾದೇ ಏಕೆ ಕವಿತೆ..? 


-ಶರತ್ ಚಕ್ರವರ್ತಿ. 




ಸೋಮವಾರ, ಜನವರಿ 23, 2012

ಕುಂದಾಪುರದ ಬಸ್ಸಿನಲ್ಲಿ...

ಭರ್ರೆಂದು ಸಾಗಿದ್ದ ಎನ್ ಹೆಚ್ 66ಓಡಿ ಹೋಗಿ ಹಿಡಿದ
ಕಾಲಿಡಲು ತಾವಿಲ್ಲದ ರಶ್ಸಿನ ಬಸ್ಸು 
ಮಾತಿಲ್ಲದೇ ಬೆವೆತು
ಜಿನುಗುತ್ತಿದ್ದ ಬಿಳಿಚರ್ಮದ ಚಲುವೆಯರು
ತೋಯ್ದು ನೀರಾದ ಅರೆತೆರೆದ ಬೆನ್ನು 
ಹೊಳೆವ ಮಿನುಗು ಮೂಗುತಿ ಮಿಂಚು
ಸೂಸು ಬರುತ್ತಿದ್ದ ಕಂಕುಳ
ಕಮಟು ಗಂಧ 
ವೇಗಮಿತಿ ಮರೆತ ಚಾಲಕ
"ಹೆಮ್ಮಾಡಿ ತಲ್ಲೂರು
ಕುಂದಾಪುರ" ಎಂದು 
ವೇದಘೋಷ ನುಡಿದಿದ್ದ ಕಂಡಕ್ಟರ್ ಮೌಲ್ವಿ
ಕಿಟಕಿ ನಡುವೆ ತಣ
ತಣಗುಡುತ್ತಿದ್ದ ಹೊಳೆ-ಕಡಲ ಸಂಗಮ 
ಬೆಸ್ತರ ಬಂಧಿಸಿದ್ದ ಮೀನುಬಲೆ 
ಹಿಮ್ಮುಗ ಓಟದ ಕಾಂಕ್ರಿಟು ಸೇತುವೆ 
ಹೆಂಡತಿಯ ಪ್ರಸವಕ್ಕೆಂದು 
ಓಡಿ ಹೋಗುತ್ತಿದ್ದಕೈಗಡಿಯಾರದ ಮುಳ್ಳು.


-ಶರತ್ ಚಕ್ರವರ್ತಿ.

ನೆನಪು

ಇಲ್ಲಿಗೆ ಮುಗಿದುಬಿಡಲೆಂದು
ಸಾಲು ಸಾಲು ನೆನಪುಗಳ
ಗುಂಡಿ ತೋಡಿ ಹೂತುಬಿಟ್ಟೆ.

ಮೊದಲ ಮಳೆಯಲಿ ಮಿಂದಾಗಲೇ
ಅರಿವಾದದ್ದು....?

ಹೂಳಲಿಲ್ಲ - ಬಿತ್ತಿದ್ದೇನೆಂದು!!!
-ಶರತ್ ಚಕ್ರವರ್ತಿ.