ಶನಿವಾರ, ಜನವರಿ 28, 2012

ಕವಿತೆ



ಕಾಡಿಗೆ ತೀಡಿದ ಕಂಗಳ
ಚಂಚಲೆಯ ಮುಂಗುರುಳು
ಮುದ್ದಿಸುವ ಕೆನ್ನೆಮೇಲೆ
ಮೂಡಿದ ಮೊಡವೆಯಾಗಿ ಬಂದೆ 


ನವಿಲ ನಾಚಿಸಿ ಕುಣಿವ
ನರ್ತಕಿಯ ನುಲಿವ 
ಸೊಂಟದ ಮೇಲಿನ
ನುಣುಪಾದ ನರಿಗೆಯಾಗಿ ಕಂಡೆ 


ಪುರಷನ ತೆಕ್ಕೆಯಲಿ ಬೆರೆತು
ಹೊಸೆದುಕೊಂಡು ಬೆವೆತ
ಪ್ರಕೃತಿಯ ಬಿಸಿಯುಸಿರ
ನವಿರಾದ ನರಳುವಿಕೆಯಲಿ ಚಿಮ್ಮಿದೆ. 


ವೃದ್ದನ ಬಿಳಿತಲೆಯ ಕಂಡು
ಹಿಯ್ಯಾಳಿಸಿ ನಗುವ
ಸುಕ್ಕುಗಟ್ಟಿದ ಮುದುಕಿಯ
ಬೋಡು ನಗೆಯಲ್ಲಿ ಹರಿದೆ 


ಅಮ್ಮನ ಕೊಂದ ನಿನ್ನ
ಬಿಡಲಾರೆಯೆಂದು ಬೊಗಸೆ
ಮಣ್ಣನಿಡಿದು ಕಡಲ ಮುಚ್ಚಲೊರಟ
ಮಗುವಿನ ಮುಗ್ದ ಕಣ್ಣಲಿ ನಿಂತೆ 


ಬಾರದ ಮಳೆಗೆ ಮುಖವೊಡ್ಡಿ
ಬೀಳುವ ಗುಂಡಿಗೆ
ಎದೆಯೊಡ್ಡಿ ನಿಂತ ರೈತನ
ಭವಿಷ್ಯದ ಪ್ರಶ್ನಾರ್ಥಕವಾಗಿ ಕುಳಿತೆ 


ನಿನಗಾಗಿಯೇ ಮಡಿ ಹಾಳೆಯ
ಮಡಿಸದೇ ಧ್ಯಾನಿಸುತ್ತಾ
ಕುಳಿತಾಗ ಎದೆಯೊಡೆದು
ಹೊರಬರಲಾರದಾದೇ ಏಕೆ ಕವಿತೆ..? 


-ಶರತ್ ಚಕ್ರವರ್ತಿ. 




4 ಕಾಮೆಂಟ್‌ಗಳು:

  1. ಬಾರದ ಮಳೆಗೆ ಮುಖವೊಡ್ಡಿ
    ಬೀಳುವ ಗುಂಡಿಗೆ ಎದೆಯೊಡ್ಡಿ
    ನಿಂತ ರೈತನ
    ಭವಿಷ್ಯದ ಪ್ರಶ್ನಾರ್ಥಕವಾಗಿ ಕುಳಿತೆ... ಚನ್ನಗಿ ಮೂದಿಬ೦ದಿದೆ ಸರ್....

    ಪ್ರತ್ಯುತ್ತರಅಳಿಸಿ