ಶನಿವಾರ, ಫೆಬ್ರವರಿ 18, 2012

ಸೂರ್ಯೋದಯ

ಮುಂಜಾನೆದ್ದ ಸೂರ್ಯ
ಆಕಳಿಸುತ್ತಾ ಬರುವಾಗ
ಮೋಡಕೆ ಎಡವಿ
ನೀರಿಗೆ ಬಿದ್ದೊಡನೆ
ಕಡಲ ಅಲೆಗಳು
ನಾಚಿ ಕೆಂಪಾದವು..!!!

ಶರತ್ ಚಕ್ರವರ್ತಿ.

ಶುಕ್ರವಾರ, ಫೆಬ್ರವರಿ 17, 2012

ಇಬ್ಬನಿ.

ಸುಲ್ತಾನನಾಗಿ ಸೂರ್ಯ
ಕುದುರೆಯೇರಿ ಬರುತಿರೆ
ಹೂ ಧವಳವನ್ನಪ್ಪಿ
ಮುದ್ದಿಸುತ್ತ ಮೈಮರೆತ
ಇಬ್ಬನಿ ಹನಿಗಳು
ಪ್ರತಿರೋದವಿಲ್ಲದೆ ಮಡಿದವು ..
.





ಶರತ್ ಚಕ್ರವರ್ತಿ.

ಗುರುವಾರ, ಫೆಬ್ರವರಿ 9, 2012

ಅವ್ವ ಕೊಟ್ಟ ಕಾಸು.




         ಹುಟ್ಟೂರಿನಿಂದ ಚದುರಿ ಪರವೂರಿನಲ್ಲಿ ನೆಲೆಕಂಡಿದ್ದ ಸ್ನೇಹಿತರೊಡನೆ ಮತ್ತೇ ತವರಿನಲ್ಲಿ ಸೇರಿ ಕಾಕ ಹೋಟೇಲಿನಲ್ಲಿ ಬಿರಿಯಾಣಿ ಬಾರಿಸಿ ನಂತರ ಎಲ್ಲಾ ಪರದೇಸಿಗಳಿಗೂ ಬೀಳ್ಕೊಟ್ಟು ಮತ್ತೇ ಸ್ವತಂತ್ರವಾದ ಬಿಕನಾಸಿ ಜೀವನದ ಬಗ್ಗೆ ಬೇಸರ ಹುಟ್ಟಿ ಮನದೊಳಗೆ ಏನೇನೋ ಗೊಣಗುತ್ತಾ ದೇವಗೆರೆ ಮಾರ್ಕೇಟಿನಲ್ಲಿ ನುಸುಳುವಾಗ ಸವಕಲು ಮೈಗೆ ಮಸಿಹಿಡಿದು ಗಬ್ಬಾದ ಸೀರೆಯನ್ನುಟ್ಟು ಕಂಕುಳಲ್ಲಿ ಮಗು ಹಿಡಿದು ಆ ಮಗುವನ್ನೇ ತೋರುತ್ತಾ "ಸಾಮಿ ಏನಾರಾ...." ಎಂದು ಕೈ ಚಾಚುತ್ತಾ ಹೆಂಗಸೊಬ್ಬಳು ಅಡ್ಡಗಟ್ಟಿದಳು. ಇದ್ದ ತಲೆಬಿಸಿಯಲ್ಲಿಯೂ ಕೈಗಳು ಕಿಸೆಗಿಳಿದು ತಳಶೋಧಿಸಹತ್ತಿದ್ದವು. ಎಲ್ಲಿ ಕೈ ಹಾಕಿದರೂ ಒಂದು ಬಿಡಿಗಾಸು ಇಲ್ಲ. ಎಲ್ಲಾ ಜೇಬುಗಳನ್ನೂ ತಡಕಿ ಪರ್ಸಿನ ಸಂದುಗಳಲ್ಲಿ ಕಣ್ಣನ್ನಿಳಿಸಿದಾಗ ಶಾಲೆಗೆ ಹೋಗಲಾರೆ ಎಂದು ಹಟ ಹಿಡಿದು ಕುಳಿತ ಮಗುವಿನಂತೆ ರೂಪಾಯಿಯೊಂದು ಮೂಲೆ ಹಿಡಿದಿತ್ತು. ಹೊರಗೆಳೆದು ಆವಳ ಕೈಗಿತ್ತು ದೇವಗೆರೆಯ ಬಳಿ ಬಂದು ಬಿಂಬ ನೋಡುತ ಕುಳಿತೆ. ಪುಂಡ ಮೀನೊಂದು ಪುಳಕ್ಕನೆ ಮೇಲೆದ್ದು ಮುಳುಗಿ ಬಿಂಬವನ್ನು ಕೆಡಿಸಿ ಅಲೆಯನ್ನಾಗಿಸಿತು. ಆದರೆ ಮನಸ್ಸಿನೊಳಗೂ ಯಾವುದೋ ತರಂಗ ಲಯಮರೆತು ಮೇಲೆ ಕೆಳಗೆ ಆಡುತ್ತಿತ್ತು. ಅಲೆಗಳ ಕ್ರೋಢಿಕರಿಸಿ ಸ್ಥಿಮಿತ ಬಿಂಬಕ್ಕಾಗಿ ವರ್ತಮಾನಕೆ ವಾಪಸ್ಸಾಗದ ವಿಚ್ಚೇದಿತ ಭೂತಕ್ಕೆ ಮರಳಿದೆ. 

           ಹೌದು ತುಂಬಾ ಹಳೆಯ ನೆನಪು, ಇಂದೇಕೆ ಇಷ್ಟು ಕಾಡುತ್ತಿದೆ. ಹರಿದ ಚಡ್ಡಿ ತೊಟ್ಟು ಊರಾಳಿದ ಕಾಲದ ನೆನಪು ಮನದ ದೇವಗೆರೆಯಲ್ಲಿ ಬಿಂಬದರ್ಶನ ಸಾಗಿತ್ತು.

           ಚಾಪೆ ಮೇಲೆ ಮಕಡೆ ಮಲಗಿಕೊಂಡೆ ನೋಟುಪುಸ್ತಕದಲ್ಲಿ ಒಂದೇ ಉಸಿರಿಗೆ ಗೀಚುತ್ತಾ ಪಕ್ಕದಲ್ಲಿ ಇದ್ದ ನೀರಾಲ ಕಾಫಿಯನ್ನು ಕುಡಿಯದೇ ಒಣಗಿಸಿ, ಹೋಂವರ್ಕ್ ಮುಗಿಸಿ ಪುಸ್ತಕಗಳನ್ನು ಕಸದಚೀಲದಂತ ಜೋಳಿಗೆಯಲ್ಲಿ ತುಂಬಿ ಗೋಡೆಯ ಗೂಟಕ್ಕೆ ತೂಗುಬಿಟ್ಟು "ಅವ್ವ ಆತು" ಎಂದು ಮೂಗೊರೆಸಿ ಎಂದು ನಿಂತೆ.

"ಹೂಂ.., ಲೋಟ ತಗ ಬಾ" ಒಳಗಿಂದಲೇ ಅವ್ವ,

ಕಾಫಿಯ ನೆನಪು ಬರುತ್ತಲೇ ತಣ್ಣಗಾಗಿದ್ದ ಕಾಫಿಯನ್ನು ಒಂದೇ ಗುಟುಕಿಗೆ ಮಡ್ಡಿ ಸಮೇತ ಕುಡಿದು ಮುಖ ಕಸಿವಿಸಿ ಮಾಡುತ್ತಾ ಅಡುಗೆ ಕೋಣೆಗೆ ಹೋಗಿ ಲೋಟ ಕುಕ್ಕಿ "ಅವ್ವೊ, ನಾನೇಳಿದ್ದು ಕಾಪಿನಲ್ಲ, ಬರ್ದಾತು ಅಂತವ"

"ಹಂಗಾರೆ ಇನ್ನೂ ವಸೀ ಓದ್ಕ್ಯಂತಿರು, ಇನ್ನೋಟೊತ್ತು ಆದ್ಮೇಲೆ ಉಣ್ಣುವಂತೆ"

"ಹೂಂ, ನಾಳಿಕೆ ಬೂನಳ್ಳಿ ಜಾತ್ರಿಗೆ ಹೋಯ್ತಿನಿ"

"ಸ್ಕೂಲು..?" 

"ರಜಾ ಕಣವ್ವೋ"

"ಹಂಗಾರೇ ನನ್ ಕುಟೆ ಬರುವಂತೆ ಹೋಗು ಓದ್ಕ್ಯ"

"ಇಲ್ಲಾ, ನಾನ್ ಜಲ್ದಿ ಹೋಯ್ತಿನಿ ಬೆಳಿಗ್ಗೆಲೆಯ"

"ಬೆಳಿಗ್ಗೆಲೆ ಹೋಗೇನ್ಲಾ  ಮಾಡ್ತಿಯ, ಆ ಜನದೊಳಗೆ ಎಲ್ಲಾದ್ರೂ ಹೋದ್ರೇನ್ ಮಾಡನಾ"

"ಎಲ್ಯಾಕ್ ಹೋಯ್ತರೇ, ಮನೆದಾರಿ ಗೊತ್ತಿಲ್ವ"

"ಆತು ನಡಿ ಉಣ್ಣನ, ಕರಿ ಎಲ್ಲಾನ್ರುವೆ"

          ಊಟವಾಗಿ ಅವ್ವನ ಮಗ್ಗುಲಲ್ಲಿಂದಲೇ ಜಾತ್ರೆಯ ಸೊಬಗು ವೈಶಿಷ್ಟ್ಯಗಳು ಕಣ್ಣಿಗೆ ನೂರಾರು ಪ್ರಶ್ನಾರ್ಥಕಗಳನ್ನು ತಂದು ಕೊಕ್ಕೆ ಹಾಕುತ್ತಿದ್ದವು.

"ಅವ್ವ ಜಾತ್ರಿಗೆ ಆನೆ ಬತೀತ..?"

"ಇವಗೆಲ್ಲ ಎಲ್ ಬತ್ತವೆ ನಮ್ ಅಪ್ಪಾರ್ ಕಾಲ್ದಲಿ ಬರವಂತೆ ನಾನಂತು ಕಾಣ್ನಪ್ಪ".

ಮತ್ತೆ ಮೌನ. ದೀಪ ಹಾರಿದ್ದರೂ ಕತ್ತಲಲ್ಲೇ ಕಣ್ಣುಗಳು ಜಾತ್ರೆಯ ಬಣ್ಣವನ್ನು ಬಣ್ಣನೆಯನ್ನು ತಡಕುತ್ತಿದ್ದವು.

"ಅವ್ವ ನಾಳಿಕೆ ಹಾಕ್ಯಳಕೆ ಬಟ್ಟೆ..?"

"ಇರವ್ನೆ ಹಾಕ್ಯ, ಅತ್ತೆ ಕೊಟ್ಟವ್ಳಲ್ಲ ಅದುನ್ನೆ ಹಾಕ್ಯಂಡೋಗು".

"ಅದು ದೊಡ್ದಾಯ್ತಿತೆ"

"ಪಿನ್ನ ಹಾಕಿ ಉಡುದಾರಕ್ಕೆ ಸಿಗಿಸ್ಕೊಂಡೋಗು"

          ಲೆಕ್ಕಾಚಾರಗಳು ಮುಂದುವರೆದವು, ಎತ್ತೆತ್ತಲೋ ಸಾಗಿ ಆರಂಭವಿಲ್ಲದೇ ಆರಂಭಗೊಂಡು ಅಂತ್ಯದ ಅರಿವಿಲ್ಲದೇ ಮರೆಯಾಗುತ್ತಿದ್ದವು.

"ಅವ್ವ ಜಾತ್ರಿಗೆ ಏನೇನ್ ಬತೀತೆ ಹಂಗಾರೇ?

"ಬೆಳಿಗ್ಗೆ ನೋಡುವಂತೆ ಮನಿಕ್ಯೊ ಸುಮ್ಕೆ"

         ಆಲೋಚನೆಗಳು ಬಿಡಲಿಲ್ಲ, ಬೆಳಗಾದರೇ ಜಾತ್ರೆ. ಆಟದ ಸಾಮಾನು ಮೈಸೂರು ಪಾಕು, ಕಡ್ಲೇಪುರಿ, ರಾಟವಾಣ ಎಲ್ಲಾ ಈಗಲೇ ಬಂದಿರಬಹುದೇ? ನಿಲ್ಲದ ಪ್ರಶ್ನೆಗಳು ಹುಟ್ಟಿ ಸಾವಿಲ್ಲದೇ ಕಾಣಿಯಾಗುತ್ತಿದ್ದವು. ಜಾತ್ರೆಯಲ್ಲೇ ಮಲಗಿ ಜಾತ್ರೆ ಜಾತ್ರೆ ಎಂದೇ ತಡವರಿಸಿ ಮೇಲೆದ್ದೆ.

         ಬಚ್ಚಲ ಹಂಡೆಗೆ ಹತ್ತಾರು ಬಾರಿ ಕೈಹಾಕಿ ಬೇಗ ನೀರು ಕಾಯಲೆಂದು ತೆಂಗಿನ ಗರಿ ಮಟ್ಟೆಯನ್ನು ತುರುಕಿದೆ. ಅಟ್ಟಿಯಲ್ಲಿ ಮಲಗಿ ನಾಚುತ್ತಿದ್ದ ರಂಗೋಲಿಯ ಎದೆ ಮೇಲೆ ನಿಂತು ನನಗಿಂತ ಮೊದಲೇ ಯಾರಾದರೂ ಹೊರಟರೇ ಎಂದು ಅಕ್ಕಪಕ್ಕದ ಮನೆಗಳ ಮೇಲೂ ಕಣ್ಣಾಡಿಸಿದೆ. ಎದುರು ಮನೆಯ ಸುಬ್ಬಣ್ಣ ಹಟ್ಟಿಯಲ್ಲಿ ಎಮ್ಮೆ ಕಟ್ಟುತ್ತಿದ್ದ. ಅವನ ಹೆಂಡತಿ ಬಕೇಟ್ ಹಿಡಿದು ಎಮ್ಮ ಮುಂದೆ ಇಡುತ್ತಾ "ಏನ ಶರು ಜಾತ್ರೆಗೆ ಹೋಕ್ಕುಲ್ವ." "ಹೀಗ ಸ್ನಾನ ಮಾಡ್ಕ್ಯಂಡು ಹೋಯ್ತಿನಿ" ಎಂದೇಳಿ ಮತ್ತೇ ಬಚ್ಚಲೆಡೆಗೆ ಧಾವಿಸಿದರೇ ಅಲ್ಲಿ ಚಡ್ಡಿ ನೆನೆಸುತ್ತಾ ಕುಳಿತಿದ್ದ ಚಿಕ್ಕಪ್ಪನನ್ನು ಕಂಡು ಸಿಟ್ಟು ಬಂದು "ನಾನ್ ಪಸ್ಟು ಮಾಡ್ಕ್ಯಬೇಕು ಅಂತ ನೀರ್ ಕಾಯ್ಸಿದ್ರೇ ನೀನ್ ಬಂದ್ ಕೂತಿದಿಯ..?" 

"ಆಮೇಲ್ ಮಾಡ್ಕ್ಯಳ್ವಂತೆ ಹೋಗ್ಲ ದೊಡ್ಮನ್ಸ."

"ನಾನ್ ಜಾತ್ರಿಗೆ ಹೋಗ್ಬೇಕು, ಲೇಟಾಯ್ತಿತೆ."

"ಜಾತ್ರೇಲಿ ಯಾರುನ್ನ ನೋಡ್ಬೇಕ್ಲ, ನಿಧಾನುಕ್ಕೆ ಅವ್ವಕುಟೆ ಹೋಗ್ವಂತೆ ಹೋಗು." ಮೈ ಕಿಡಿ ಕಿಡಿಯಾಗಿ ಕಣ್ಣೀರು ತುಂಬಿಕೊಂಡು ಕೊಟ್ಟಿಗೆಗೆ ಹೋದೆ. ಅವ್ವ ಎಮ್ಮೆ ಹಾಲ ಕರೆದು ಬೊಂಬಿಗೆ ತುಂಬುತ್ತಿದ್ದಳು. "ಅವ್ವ ನೋಡು ನೀರ್ ನಾನ್ ಕಾಯ್ಸಿದ್ರೆ ಚಿಕ್ಕಪ್ಪ ಹೋಗಿ ಸ್ನಾನ ಮಾಡ್ತವ್ನೆ, ಕೇಳಿದ್ಕೆ ಬೈಯ್ತನೆ."

"ಅಯ್ಯ ಅವುಂದು ಇದ್ದಿದ್ದೆಯ ಬುಡು, ಏನ್ ಅಂತ ಉಸಾಬರೀನೊ ಕಾಣೆ. ಅವ್ನಾದ್ಮೇಲೆ ಮಾಡ್ಕಳ್ವಂತೆ ಹೋಗವ." ವಿಧಿಯಿಲ್ಲದೇ ಕಾದು ಹಂಡೆಯಲ್ಲಿ ತಳಕಂಡಿದ್ದ ನೀರಿಗೆ ಅವಸರ ಅವಸರವಾಗಿ ಇಳಿದು ಅರೆಬರೆ ತೊಳೆದು "ಅವ್ವ ಬಟ್ಟೆ ಕೊಡ್ಬಾ"

"ತಡಿಲಾ ನಾನೇ ಬಂದ್ ಮಾಡುಸ್ತಿನಿ."

"ನಂದಾತು ಬಾ, ಬಟ್ಟೆ ಕೊಡು"

"ತೂ ಏನ್ ಅರ್ಜೆಂಟು ಅಂತಿನಿ ಈ ಹುಡ್ಗುಗೆ, ನೆಟ್ಟುಗ್ ಮೈ ತಿಕ್ಯಂಡ."ಎಂದು ಗೊಣಗುಡುತ್ತಾ ಕುಕ್ಕೆಯಲ್ಲಿ ತುಂಬಿಟ್ಟ ಅತ್ತೆ ಮಗನಿಗೆ ಹಳತಾದ ದೊಗಳೆ ಚಡ್ಡಿಯನ್ನು, ಜೋಬು ಕಿತ್ತು ನೇತಾಡುತ್ತಿದ್ದ ಶರ್ಟನ್ನು ತೆಗೆದುಕೊಟ್ಟಳು. ಒಂದೇ ಉಸಿರಿಗೆ ಶರ್ಟಿನೊಳಗೆ ನುಸುಳಿ ದೊಗಳೆ ಚಡ್ಡಿಯನ್ನು ಉಡುದಾರಕ್ಕೆ ಸಿಕ್ಕಿಸತೊಡಗಿದೆ. "ತಡಿಲಾ ಅತುರ್ಗೇಡಿ" ಎಂದು ನಗುತ್ತಾ ಅವ್ವ ಚಡ್ಡಿಗೆ ಪಿನ್ನಾ ಹಾಕಿ ಗಟ್ಟಿಮಾಡಿ ಭುಜ ಹೊಟ್ಟಯ ಶರ್ಟನ್ನು ನೀವಿದಳು. ಬಿಡಿಸಿಕೊಂಡು ಓಡುವ ಬರದಲ್ಲಿದ್ದವನನ್ನು ಹಿಡಿದು ಕೈಗೊಂದು ರೂಪಾಯಿ ಕೊಟ್ಟು ಮುತ್ತಿಟ್ಟು "ಜ್ವಾಪಾನ" ಎಂದಳು.


ಬೇಡದೆ ಒಲಿದು ಬಂದ ಲಕ್ಷ್ಮೀಯಿಂದ ಹೊಸತೊಂದು ಯೋಚನೆ ಮೂಡಿ ಕವಲೊಡೆದು ನೂರಾಯಿತು. "ರೂಪಾಯಿಲಿ ಏನೇನ್ ತಗಳದು..?"ಎಂದು ತಲೆಕೆರೆಯುತ್ತಿರುವಾಗಲೇ ಹಿಂದಿನಿಂದ ಮಂಜಣ್ಣನ ಮರದ ಗಾಲಿಯ ಎತ್ತಿನ ಗಾಡಿ ಬಂದಿತು.

"ಬತ್ತಿಯೆನ್ಲ"

"ಹುಂ"

"ಜಲ್ದಿ ಹತ್ತು" ಆಗಾಗಲೇ ಗಾಡಿಯ ತುಂಬೆಲ್ಲ ಜಾತ್ರೆಯ ಜನಗಳು ತುಂಬಿದ್ದರು. ಕೆಲವು ಚಡ್ಡಿಯಿಂದ ಮೇಲೆತ್ತಿ ಕಟ್ಟಿದ್ದ ಬಿಳಿಪಂಚೆಗಳು, ಇನ್ನುಳಿದವು ಮಿಂಚು ಹಂಚಿನ ಸೀರೆಗಳು. ಮಂಜಣ್ಣನ ಮಗ ವಿಶ್ವ ನಾನು ಗಾಡಿ ಒಡೆಯುತ್ತೇನೆಂದು ಅಪ್ಪನೊಡನೆಯೇ ಬಾರುಕೋಲು ಹಿಡಿದು ಮುಂದೆ ನಿಂತಿದ್ದ. ಠೀವಿಯಿಂದ ಒಮ್ಮೆ ತಿರುಗಿ "ಆಯ್ತೆನ್ಲ..?"ಎಂದು ಕೇಳಿಯುಬಿಟ್ಟ.
"ಹುಂ" ಎನ್ನುತ್ತಾ ಕೂರಲು ಜಾಗವಿಲ್ಲದೇ ಹಿಂಬದಿಯಲ್ಲಿ ರಸ್ತೆಯ ಹಿಮ್ಮುಗ ಓಟಕ್ಕೆ ಕಣ್ಣು ಕೊಟ್ಟು, ಗಾಡಿ ಹಲಗೆಗೆ ಒರಗಿ ತೂಗಾಡುತ್ತಾ ನಿಂತೆ. ಮಂಜಣ್ಣನ ಕಪ್ಪು ಕೋಡಿನ ಬಿಳಿ ಎತ್ತುಗಳು ವಿಶ್ವನ ಬಾರುಕೋಲಿಗೆ ಬೆದರಿ ಓಡುತ್ತಿದ್ದವು.

             ಗಾಡಿ ಅಕ್ಕಸಾಲಿಗರ ಗದ್ದೆ ಏರಿ ದಾಟಿ ಹಕ್ಕೆಯನ್ನು ಹಿಂದಿಕ್ಕಿ ಬೂನಳ್ಳಿಗೆ ನುಗ್ಗಿತು. ಭಾರೀ ಜನಜಂಗುಳಿಯೇ ಅಲ್ಲಿತ್ತು. ಕೈಯಲ್ಲಿ ಬುಟ್ಟಿ ಬ್ಯಾಗುಗಳನ್ನು ಹಿಡಿದು ಜನಸಂದಣಿ ಅತ್ತಿಂದಿತ್ತ ಇತ್ತಿಂದತ್ತ ಹರಿದಾಡುತ್ತಿತ್ತು. ರಸ್ತೆ ತುಂಬಿದ್ದರಿಂದ ಗಾಡಿಯನ್ನು ಸೈಡಿಗೆ ನಿಲ್ಲಿಸಿ "ಇಳ್ಕಳಿ ಇಳ್ಕಳಿ" ಎಂದು ಮಂಜಣ್ಣ ಗಾಡಿಯಿಂದ ನೆಗೆದು ನೊಗ ಬಿಚ್ಚಲು ಅನುವಾದ. ಅವಸರದಲಿ ನಾನೂ ಕೆಳಗೆ ನೆಗೆದೆ, ಗಾಡಿಯ ಹಲಗೆಗೆ ಹೊಡೆದಿದ್ದ ಮೊಳೆಗೆ ಸಿಲುಕಿ ಎರಡಿಂಚು ಉದ್ದದಷ್ಟು ಚಡ್ಡಿ ಸೀಳಿಹೋಯಿತು. ನನ್ನಹಿಂದೆ ಇಳಿಯಲು ನಿಂತಿದ್ದ ಕೆಳಗಲ ಕೇರಿ ಸಾವಿತ್ರಮ್ಮ ಹಲ್ಲು ಬಿರಿದು "ಯಾಕ್ಲ" ಎಂದಳು. ನನ್ನ ಅವಸ್ಥೆ ಕಂಡು ಎಲ್ಲರೂ ನಗಲಾರಂಭಿಸಿದರು. "ಅದು ಸಿಕಾಕ್ಯಂಡಿತ್ತು ಗೊತಾನಿಲ್ಲ" ಎನ್ನುತ್ತಾ ಅವರ ಗುಂಪನ್ನು ಬಿಟ್ಟು ಮುಂದಕ್ಕೆ ಓಡಿದೆ. ಎತ್ತುಗಳ ಬಿಚ್ಚಿ ಗಾಡಿ ಇಳುಕುತ್ತಿದ್ದ ಮಂಜಣ್ಣ "ತಡಿಲಾ" ಎಂದರೂ ನಿಲ್ಲದೇ ಓಡಿ ಊರೊಳಕ್ಕೆ ಬಂದೆ.

            ಅಲ್ಲಿ ಚನ್ನಪ್ಪನ ಅಡ್ಡೆ ಅಡ್ಡದಿಡ್ಡಿಯಾಗಿ ಓಡಾಡುತ್ತಿತ್ತು. ಜನರು ನಿಂತಲ್ಲೇ ಕೈಮುಗಿದು ಕೆನ್ನೆ ತಟ್ಟಿಕೊಳ್ಳುತ್ತಿದ್ದರು. ಕರಿಯಣ್ಣನ ವಾದ್ಯ ಭೀರದೇವರ ಹೊತ್ತ ವೇಷದಾರಿಗಳನ್ನು ಕುಣಿಸುತ್ತಿತ್ತು. ನಿಂತಲ್ಲಿಯೇ ಕುಣಿಸುವಂತಿದ್ದ ಬೆಟ್ಟಮಣೆ ಸದ್ದು ಕೇಳುತ್ತಾ ನಾನು ಕುಣಿಯಬೇಕೆನಿಸುವಂತಿತ್ತು. ಅಷ್ಟರಲ್ಲಿ ಚನ್ನಪ್ಪನ ಅಡ್ಡೆ ಜನರ ಗುಂಪಿನ ಮೇಲೆಯೇ ನುಗ್ಗಿಬಂತು. ಇದರ ಸಹವಾಸವೇ ಬೇಡವೆನ್ನುತ್ತಾ ದೇವಸ್ತಾನದ ಬೀದಿಗೆ ಬಿದ್ದೆ. ಅಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಜನ. ಅದರಲ್ಲೂ ಬರೀ ಹೆಂಗಸರೇ. ಸೆರಗುಗಳ ಸರಿಸಿ ನುಸುಳಿ ನುಸುಳಿ ದೇವಸ್ತಾನದ ಮುಂದೆ ಬಂದರೆ ಅಲ್ಲಿ ಕೆಂಡ ರವಗುಡುತ್ತಿತ್ತು. ಜನಗಳು ತಳ್ಳಾಡಿ ತಳ್ಳಾಡಿ ಒಬ್ಬೊಬ್ಬರೇ "ಕೆಟ್ನಲ್ಲಪ್ಪೋ..." ಎನ್ನುವಂತೆ ಕೆಂಡದ ಮೇಲೆ ಕಣ್ಮುಚ್ಚಿ ಓಡುತ್ತಿದ್ದರು.

          ಇದು ನನ್ನದಲ್ಲದ ಜಾಗ ಎಂದು ಹೇಗೆ ನುಗ್ಗಿದ್ದೆನೋ ಹಾಗೇಯೆ ವಾಪಸ್ಸಾದೆ. ಅಷ್ಟರಲ್ಲಿ ಅಡ್ಡೆ ಭೀರದೇವರುಗಳು ತೋಪನ್ನು ಮುಟ್ಟಿದ್ದವು. ಅವುಗಳ ಹಿಂದೆ ರಾಶಿ ರಾಶಿ ಜನಗಳು "ಐಸ್ಸಾ…. ಎಳಿರಿ ಎಳಿರಿ…ಐಸ್ಸಾ…" ಎಂದು ಉಸಿರುಗಟ್ಟಿಕೊಂಡು ತೇರೆನ್ನೆಳೆಯುತ್ತಿದ್ದರು. ದೂರದಲ್ಲಿ ನಿಂತ ಜನರು ಅಲ್ಲಿಂದಲೇ ಕೈಮುಗಿದು ತೇರಿಗೆ ಬಾಳೆಹಣ್ಣು ಹೂಗಳಿಂದ ಬಾರಿಸುತ್ತಿದ್ದರು.       ನನಗೂ ತೇರೆಳೆಯುವ ಮನಸ್ಸಾಗಿ ಓಡಿದೆ. ಹಗ್ಗ ಹಿಡಿಯುವುದಿರಲಿ ಹತ್ತಿರ ಹೋಗಲು ಸಹ ಕಷ್ಟವಿತ್ತು. ಒಬ್ಬರ ಅಂಡು ಒಬ್ಬರು ಹಿಡಿದು ಎಳೆಯುವಂತೆ ಕಂಡು ಹಗ್ಗವೇ ಮರೆಯಾದಂತಿತ್ತು. ಅಂತೂ ಹೇಗೋ ನುಸುಳಿ ಕೈಹಾಕಿದೆ ಹಗ್ಗ ಸಿಗಲಿಲ್ಲ, ಇನ್ಯಾರದೋ ಕೈಹಿಡಿದಿದ್ದೆ. ಅವನು ತಿರುಗಿದನೇ ನನ್ನ ರಟ್ಟೆಹಿಡಿದು "ಐ ಹೋಗತ್ಲಗಿ, ಸಿಕ್ಕಾಕ್ಯಂಡ್ ಸತ್ಗಿತ್ ಹೋದೀಯ" ಎಂದು ತೆಗೆದು ಹಿಂದಕ್ಕೆ ಎಸೆದುಬಿಟ್ಟ. ಕ್ಷಣದಲ್ಲೇ ಕೋಪ ನೆತ್ತಿಗೇರಿ ಹಿಂದಿನಿಂದ ಕಚ್ಚಿ ಓಡಿಬಿಡಲೆ ಎನಿಸಿತು.

            ಆದರೆ ಕಣ್ಣುಗಳು ಕೋಪದಿಂದಲೇ ತುಂಬಿ ಹನಿಯಾದವು. ಅಲ್ಲಿ ನಿಲ್ಲಲು ಮನಸಾಗದೆ ಚಡ್ಡಿಯೆಳೆದುಕೊಂಡು ಮೆಲ್ಲಗೆ ಮೆರವಣಿಗೆಯಿಂದ ದೂರ ನಡೆಯುತ್ತಿರುವಾಗ ಅವ್ವ ಕೊಟ್ಟ ಕಾಸು ನೆನಪಾಯಿತು. "ತೋಪಿಗಾರ ಹೋಗನ, ಅಂಗಡಿ ಬಂದಿರ್ತವೆ" ಎಂದು ಮತ್ತೆ ಓಡಲಾರಂಭಿಸಿದೆ. ಸ್ವಾಮಣ್ಣನ ಅಂಗಡಿ ಪಕ್ಕ ಮುತ್ತಿದ್ದ ಜನಜಂಗುಳಿ ನನ್ನ ಓಟಕ್ಕೆ ಬ್ರೇಕ್ ಹಾಕುವಂತೆ ಮಾಡಿತು.

            ಅದು ಕೋಳಿ ಅಂಕ. ದುಡ್ಡು ಕಟ್ಟಿ ಕೋಳಿಜಗಳಕ್ಕೆ ಬಿಡುತ್ತಿದ್ದರು. "ನೆಗಿ, ಕುಕ್ಕು… ಹಿಡ್ಕ, ಹಂಗೇ.." ಇತ್ಯಾದಿ ಸದ್ದುಗಳು ಅಲ್ಲಿದ್ದವು. ಸಂದಿಯಲ್ಲಿ ನುಗ್ಗಿ ತಲೆಮಾತ್ರ ಒಳಗೆ ಹಾಕಿದೆ. ಎರಡು ಕೆಂಪು ಹುಂಜಗಳು ಒಂದೇ ತರವೇ ಇದ್ದರೂ, ಒಂದು ಇನ್ನೊಂದನ್ನು ಹಿಡಿದು "ಕೊರ್…ಕೊರ್…" ಎಂದರೂ ಬಿಡದೇ ಕುಕ್ಕುತ್ತಿತ್ತು. "ತೂ...ಇದ್ರ, ಶೇಷಣ್ಣ ಇದು ಪಂಥಕೆ ಆಗಕುಲ್ಲ ಹಿಡ್ಕ ನಡಿ ಒಂದೊತ್ ಊಟಕಾಯ್ತದೆ" ಎಂದು ಕೋಳಿ ಜರೆಯುತ್ತಾ ದುಡ್ಡು ಕಳೆದುಕೊಂಡು ಕೂತಿದ್ದ ಚಿಕ್ಕಪ್ಪನನ್ನು ಕಂಡು ನನ್ನ ಬಳಿ ಇದ್ದ ರೂಪಾಯಿಯನ್ನೂ ಕಿತ್ತುಕೊಂಡಾನು ಎಂದು ತೂರಿಸಿದ್ದ ತಲೆಯನ್ನು ಹೊರಗೆಳೆದುಕೊಂಡು ತೋಪಿಗೆ ಬಂದೆ.

            ನೂರು ಬಣ್ಣಗಳ ಒಟ್ಟಿಗೆ ಕಣ್ಣಿಗೆ ರಾಚುತ್ತಿದ್ದ ಅಂಗಡಿ ಮಳಿಗೆಗಳೂ, ಗಿರಗಿರ ತಿರುಗುತ್ತಿದ್ದ ರಾಟವಾಣಗಳಲ್ಲಿ ಕುಳಿತು "ಹೋ…" ಎಂದರಚುತ್ತಿದ್ದರೂ, ದೊಡ್ಡ ದೊಡ್ಡ ಪುರಿ ಮೂಟೆಗಳ ಹಿಂದೆ ಕುಳಿತ ಬನೀನುದಾರಿ ದಢೂತಿಯ ಬಾಣಲೆಯಲ್ಲಿ ಕುದಿಯುತ್ತಿದ್ದ ಜಿಲೇಬಿಗಳು, ಒತ್ತೊಟ್ಟಾಗಿಟ್ಟ ಇಟ್ಟಿಗೆರಾಶಿಯಾಗಿದ್ದ ಮೈಸೂರು ಪಾಕು, ಸಕ್ಕರೆ ಅಚ್ಚು, ಸುಣ್ಣದಕಲ್ಲುಗಳ ರಾಶಿ, ಹಾರ್ನ್ ಮಾಡಿಕೊಂಡು ಓಡುವ ಪುಟಾಣಿ ಕಾರು, ಕೀ ಕೊಟ್ಟರೆ ಕುಳಿಯುವ ಹುಡುಗಿ ಗೊಂಬೆ, ಕೊಳಲು, ನೀಲಿ ಕೆಂಪು ಹಳದಿ ಬಲೂನುಗಳು, ಪ್ಲಾಸ್ಟಿಕ್ ಬಾಲು ಬ್ಯಾಟು, "ಪೂಯ್..." ಎಂದು ಪೀಪಿ ಊದುತ್ತಾ ಕುಳೀತ ಪೀಪಿ ಅಂಗಡಿಯವನು, ಹಚ್ಚೆ ಹಾಕುವವನಿಗೆ ಕೈಕೊಟ್ಟು ಕಣ್ಮುಚ್ಚಿ ಕುಳಿತವರು, ಅದು ಇದು ಎಂದು ಕೈತೋರಿ ಹಠ ಮಾಡುವ ಮಕ್ಕಳಿಗೆ ಗದರಿಸುವರು ನೋಡುತ್ತಾ ಪುಳಕಿತನಾಗಿ ಮೀನು ಮೇಲೆ ಕೆಳಗೆ ಆಡುವಂತೆ ಮೂರು ಭಾರಿ ಅಂಗಡಿಗಳ ಮುಂದೆ ಸುತ್ತಿ ಬಂದೆ. ಸಣ್ಣದೊಂದು ಕಾರು ಕೈಬೀಸುತ್ತಿತ್ತು. ಹತ್ತಿರ ಹೋಗಿ ಮುಟ್ಟಿ "ವಮ್ಮೊವ್, ಇದೆಷ್ಟು..?"


"ಮೂರುಪ್ಪಾಯ್ ಒಂದು"

ತಕ್ಷಣ ಕೈತೆಗೆದು "ಪೀಪಿ.....?"

"ಎರಡ್ರುಪಾಯ್"

"ತೂ.. ನಮ್ಮವ್ವ ಇನ್ನೊಂದ್ರುಪಾಯ್ ಜಾಸ್ತಿ ಕೊಟ್ಟಿದಿದ್ರೆ" ಎಂದಕೊಂಡು ಮೇಲೇಳುವಾಗ ಹಸಿರು ಲಂಗ ತೊಟ್ಟು ಮೇಲೆತ್ತಿ ಕಟ್ಟಿದ ಎರಡು ಜುಟ್ಟಿಗೂ ಮಲ್ಲಿಗೆ ಸುತ್ತಿ ಚಿಟ್ಟೆಯಾಗಿದ್ದ ಶ್ವೇತಾ ಪಕ್ಕದಲ್ಲಿಯೇ ನಿಂತು "ನೀನೇನ್ ತಗತಿದಿಯ, ನಂಗೆ ನಮ್ಮಪ್ಪ ರೈಲು ಕೊಡುಸ್ತು ಗೊತ್ತಾ" ಎಂದು ನುಲಿದಳು.
"ನಮ್ಮವ್ವನು ನನಿಗೆ ಬಸ್ ಕೊಡುಸ್ತಿತಂತೆ ಅಮೇಲಿಂದವ ಗೊತ್ತಾ..." ಎಂದವನೇ ಅವಳ ಕಡೆಗೂ ತಿರುಗದೆ ಚಡ್ಡಿಯ ತೂತು ಮುಚ್ಚಿ ಜಿಲೇಬಿಯ ಅಂಗಡಿ ಬಳಿ ನಿಂತು "ಎಷ್ಟು..?"

"ಜಿಲೇಬಿ ರೂಪಾಯ್ಗೊಂದು, ಮೈಸೂರ್ ಪಾಕ ರೂಪಾಯಿಗೆರಡು" ಬಾಯಿಗೆ ಬೆರಳಿಟ್ಟು ಲೆಕ್ಕಾಚಾರ ಮಾಡಿ ತಲೆಕೆರೆದು ಮೂಗೊರೆಸಿ ಸ್ಕೂಲ್ ಮನೆತಾವ ಇನ್ನೂ ಅಂಗಡಿಗಳಿರಬಹುದೆಂದು ಅತ್ತ ನಡೆದೆ. ಮನಸ್ಸು ತಿನ್ನುವುದಕ್ಕಿಂತ ಆಡುವುದನ್ನೇ ಹೆಚ್ಚು ಬೇಡುತ್ತಿತ್ತು.

          ಸ್ಕೂಲ್ ಮನೆ ಮುಂದೆ ಕುಸ್ತಿ ಪಂದ್ಯ ನಡೆಯುತ್ತಿತ್ತು. ಪೈಲಾನ ಚನ್ನಪ್ಪಯ್ಯ ಕಚ್ಚೆ ಹಾಕ್ಕೊಂಡು ನಿಂತಿದ್ದ, ಅವನ ಎದುರಿದ್ದ ಇನ್ನೊಬ್ಬ ದಡಿಯ ಯಾರೆಂದು ತಿಳಿಯಲಿಲ್ಲ. ಅಷ್ಟರಲ್ಲಿ ಚನ್ನಪ್ಪಯ್ಯನ ಮಗ ನಮ್ಮ ಶಾಲೆಯ ಬೂಸಾ ಮಾಧು ಕಣ್ಣಿಗೆ ಬಿದ್ದನು. ನನ್ನ ನೋಡಿ "ಬಾರ್ಲ ನಾವು ಕುಸ್ತಿ ಆಡನ" ಎಂದು ಕರೆದರೇ ಎಂದು ಯೋಚಿಸುವ ಮುನ್ನವೇ ಕಾಲುಗಳು ಓಡಲಾರಂಭಿಸಿದವು.

           ವಾದ್ಯಗಳು ಭೀರದೇವರುಗಳು ಅಡ್ಡೆಯೊಂದಿಗೆ ಸುತ್ತುತ್ತಲೇ ಇದ್ದವು. ತೇರು ತೋಪಿನ ದ್ಯಾವಮ್ಮನ ಗುಡಿ ಮುಂದೆ ಕೇಳುವವರೆ ದಿಕ್ಕಿಲ್ಲದಂತೆ ನಿಂತಿತ್ತು. ಜಾತ್ರೆಯಲ್ಲಿ ಜನಸಂಚಾರ ತೊರೆ ಬತ್ತಿದಂತೆ ಬತ್ತುತ್ತಿತ್ತು. ಜೋಬಲ್ಲಿ ರೂಪಾಯಿ ಹಾಗೇಯೇ ಇತ್ತು. ಹೊಸದೊಂದು ಉಪಾಯ ಹೊಳೆಯಿತು. ತೋಪಿನ ಮೂಲೆಯಲ್ಲಿ ಕಾರು ಬಸ್ಸು ಪೀಪಿಗಳನ್ನು ಮಾರುತ್ತಿದ್ದ ಅಂಗಡಿಯ ಮುಂದೆ ಕುಕ್ಕರುಗಾಲಾಗಿ ಕೂತು "ಅದೆಷ್ಟು, ತೋರ್ಸಿ ವಸಿಯ" ಎಂದು ಅಂಗಡಿಯವಳ ಹಿಂದೆ ಇದ್ದ ಯಾವುದೇ ವಸ್ತು ತೋರಿಸಿ ಆಕೆ ಅತ್ತ ತಿರುಗಿದೊಡನೆ ಕೆಂಪು ಬಣ್ಣದ ಹಾರ್ನ್ ಕಾರಿಗೆ ಕೈಯಿಟ್ಟೆ. ಅಂಗಡಿಯವಳ ಮಗ ಮುದುಡಿ ಮಲಗಿದ್ದವನು ಟಕ್ಕನೆ ಎದ್ದು "ಅವ್ವ ಅವ್ವ ತಗತಾವ್ನೆ ತಗತಾವ್ನೆ" ಎಂದರಚಿದ. ಎಲ್ಲಿ ಹಿಡಿದುಕೊಂಡಾರೋ ಎಂದು ಅಲ್ಲಿಂದ ಬರಕಿತ್ತೆ. ಯಾರೋ ಒಬ್ಬ "ಹಿಡ್ಕಳಿ, ಹಿಡ್ಕಳಿ" ಅಂದ, ತಿರುಗಿ ಕೂಡ ನೋಡದೇ ಓಡಿ ಊರೋಳಕ್ಕೆ ಬಂದಿದ್ದೆ. ಸಂಜೆಯಾಗುತ್ತಿತ್ತು, ಓಡಿ ಓಡಿ ಕೈಕಾಲೆಲ್ಲವೂ ಸೋಲುತ್ತಿದ್ದವು, ಜಾತ್ರೆಯ ಮೇಲೆ ಬೇಸರವೂ ಆಗಿತ್ತು.
"ಮನೆಗಾದ್ರೂ ಹೊಗನ ಅಂದ್ರೇ ರೂಪಾಯಿ…? ಜಿಲೇಬಿನಾರ ತಿನ್ಬೋದಾಗಿತ್ತು" ಎಂದುಕೊಳ್ಳುತ್ತಾ ತಿರುಗಿ ತೋಪಿಗೋದರೆ ಹಿಡಿದು ಮರಕ್ಕೆ ಕಟ್ಟಿದರೇ ಎಂಬ ಭಯದಲ್ಲಿ ಹೊಂಚುಹಾಕುತ್ತಿರುವಾಗ ಕಂಕುಳಲ್ಲಿ ಅವುಚಿ, ಮೂತಿಗೆ ನೋಣಮುತ್ತಿದ್ದ ಮಗುವನ್ನು ತಬ್ಬಿ ಹಿಡಿದು "ಅಣ್ಣಾ ಸಾಮಿ ಎನಾರಾ ಕೊಡಣ್ಣ ಮಗಿಗೇ.." ಎಂದು ಸಿಕ್ಕ ಸಿಕ್ಕವರನ್ನು ಕಾಡುತ್ತಿದ್ದ ಕರಿಮೈಯ್ಯ ಭಿಕ್ಷುಕಿಯೊಬ್ಬಳು ಎಲ್ಲರಿಂದಲೂ ಬೈಸಿಕೊಳ್ಳುತ್ತಾ ಮುಂದೆ ಬಂದಳು.

           ಮನಸ್ಸಿಗೇನು ತೋಚಿತೋ ಸೀದಾ ಅವಳ ಕೈಯಲ್ಲಿ ರೂಪಾಯಿ ಎಸೆದು ಚಡ್ಡಿಯ ತೂತನ್ನೂ ಮುಚ್ಚಿ ಹಿಡಿಯದೇ ನೇರವಾಗಿ ಮನೆಗೆ ನಡೆದೆ.
ಅವ್ವ "ಇಷ್ಟತಂಕ ಎಲ್ ಹೋಗಿದ್ಲ, ನಾವ್ ಅಲ್ಲೇಲ್ಲ ಹುಡ್ಕಿದ್ರು ಇಲ್ಲ"


ನಾನೇನು ಮಾತಾಡಲಿಲ್ಲ. ಹಾಗೇ ಗೋಡೆಗೊರಗಿ ಮನೆ ಸೂರನ್ನು ದಿಟ್ಟಿಸುತ್ತರುವಾಗ, ಅವ್ವ "ರೂಪಾಯ್`ಲೇನ್ ತಗಂಡೆ?"

"ನಿನ್ ರೂಪಾಯಿಗೇನ್ ಬತೀತೆ" ಎಂದು ನಡೆದುದ್ದನ್ನು ಹೇಳಿದೆ. ಅವ್ವ ನಗುತ್ತಾ "ಅದ್ಕೇಯ ಮೂತಿ ಹನುಮಂತರಾಯ ಆಗಿರದು, ಹೋಗ್ಲಿಬುಡು ಮನೇ, ಅದ್ರು ಋಣ ಭಿಕ್ಷೆಳ್ ಮಗಿಗಿತ್ತೆನೋ, ತಗ ಜಾತ್ರೆಲಿ ನಾನೇ ತಂದಿದಿನಿ" ಎಂದು ಒಂದು ತಟ್ಟೆಯಲ್ಲಿ ಕಡಲೆಪುರಿ, ಎರಡು ಜಿಲೇಬಿಗಳನ್ನು ತಂದುಕೊಟ್ಟಳು. ಅವುಗಳನ್ನು ಕಂಡಿದ್ದೆ ಜಾತ್ರೆಯಲ್ಲಿ ನಡೆದ ಪರಿಪಾಟಲುಗಳು ಮರೆತೆಹೋದವು. ಚಿಕ್ಕಪ್ಪ ನನಗೆ ಎಂದು ತಂದಿದ್ದ ಪೀಪಿಯನ್ನು ಸಹ ಕೊಟ್ಟಳು. ಆ ಕ್ಷಣ ಅವ್ವನ ಕುತ್ತಿಗೆ ತಬ್ಬಿ ಮುತ್ತಿಟ್ಟು ಪೀಪಿ ಊದುತ್ತಾ ಊರೆಲ್ಲಾ ಸುತ್ತಿ ಬಂದು, ರಾತ್ರಿಯೆಲ್ಲಾ ಊದಿ ಎಲ್ಲರ ನಿದ್ದೆ ಕೆಡಿಸಿ ಅದನು ತಂದುಕೊಟ್ಟ ಚಿಕ್ಕಪ್ಪನಿಗೂ ಎಲ್ಲರೂ ಉಗಿಯುವಂತೆ ಮಾಡಿದೆ.

            ಕೆರೆ ನೀರಿನಲ್ಲಿ ಬಿಂಬ ನಗುತ್ತಿತ್ತು. ಆಗಲೇ ಮಧ್ಯಾಹ್ನ ಕಳೆದು ಸಂಜೆಯಾಗುತ್ತಲಿತ್ತು. ಆ ಮಧುರ ದಿನಗಳು ಇನಿಲ್ಲವಾಗಿದ್ದವು. ಕಾಡುತ್ತಿದ್ದ ನೆನಪುಗಳ ಅಲೆಗಳನ್ನು ದೇವಗೆರೆ ಹಾಳೆಯ ಮೇಲೆ ಇಳಿಬಿಟ್ಟು ಗಲ್ಲಕ್ಕೆ ಕೈಯಿರಿಸಿದೆ. ಗಡ್ಡ ಕೈಗೆ ಚುಚ್ಚಿತು. ಈ ಹರುಕು ಗಡ್ಡಕ್ಕಿಂತ  ಹರುಕು ಚಡ್ಡಿಯೇ ವಾಸಿಯೆಂದು ಅಲ್ಲಿಂದೆದ್ದೆ.
                                     ==========