ಬುಧವಾರ, ಸೆಪ್ಟೆಂಬರ್ 7, 2011

ತಪ್ಪಿನ ಅರಿವು.


        ಈ ಚಿತ್ರ ಯಾವುದೋ ಇಂಗ್ಲಿಷ್ ಚಲನಚಿತ್ರದ 3 ಡಿ ನಿರ್ಮಿತ ಅನ್ಯಗ್ರಹ ಜೀವಿಯಲ್ಲ. ನಾ ಕಂಡ ಪುಟ್ಟ ಮುಗ್ದ ಬಾಲಕ. ಈ ವಿಚಿತ್ರ ಬಾಲಕನನ್ನು ನಾನು ಕಂಡದ್ದು ಹೊಳೆನರಸೀಪುರದ ರೈಲು ನಿಲ್ದಾಣದಲ್ಲಿ. ಈ ಪುಟ್ಟ ಬಾಲಕ ಹುಟ್ಟು ಕುರುಪಿಯಾಗಿರದೇ ಎಲ್ಲಾ ಪುಟ್ಟ ಮಕ್ಕಳಂತೆಯೇ ಇದ್ದು, ಕೆಲದಿನಗಳ ಹಿಂದೆ ನಡೆದ ಆಕಸ್ಮಿಕ ಘಟನೆಯಿಂದ ಘಾಸಿಗೊಂಡು ಮುಖ, ಕೈ ಕಾಲುಗಳು ಸಂಪೂರ್ಣವಾಗಿ ಸುಟ್ಟು ಹೋದವೆಂದು ತಿಳಿಯಿತು.

       ಈ ಹುಡುಗನನ್ನು ಕಂಡು ಅಲ್ಲಿದ್ದ ಜನರ ಪ್ರತಿಕ್ರಿಯೆಗಳು ವಿಚಿತ್ರವಾಗಿದ್ದವು, ಕೆಲವರಂತೂ ಹತ್ತಿರ ಬರದಂತೆಯೇ ಬೈದು, ಹೆದರಿಸಿ ಅಟ್ಟುತ್ತಿದ್ದರು, ಕೆಲ ಹೆಂಗಸರು ನೋಡಿದೊಡನೆಯೆ ಭಯಪಟ್ಟುಕೊಂಡರು, ಒಂದು ಚಿಕ್ಕ ಮಗು ಕೂಡ ಈ ಬಾಲಕನನ್ನು ನೋಡಿ ಕಿರುಚಿಕೊಂಡು ತಂದೆಯ ಬಳಿಗೆ ಓಡಿತು. ಆತ ಕೂಡ ಆ ಹುಡುಗನನ್ನು ಹೆದರಿಸಿ ಆಳುತ್ತಿದ್ದ ತನ್ನ ಮಗುವನ್ನು ಸಂತೈಸಿದನು. 

       ಆದರೆ ಇದ್ಯಾವುದರ ಅರಿವು ಇಲ್ಲದೇ ಹುಡುಗ ಮಾತ್ರ ತನ್ನಷ್ಟಕ್ಕೆ ತಾನು ಆಡುತ್ತಲೇ ಇದ್ದ, ಅವನ ಕಡೆ ಗಮನವಿಲ್ಲದೇ ಅವನ ತಂದೆ ಅದೆಲ್ಲೋ ಕುಡಿದು ನೆಲಕ್ಕೆ ತಲೆಕೊಟ್ಟಿದ್ದ. ಬೈದರೂ, ಅಟ್ಟಿದರು ಅದ್ಯಾವುದು ಅವನ ಆಟಕ್ಕೆ ಅಡ್ಡಿಯಾದಂತೆ ತೋಚಲಿಲ್ಲ.

       ನನ್ನಂತ ಹುಡುಗ ಆಡುತ್ತಾ ಬಂದಾಗ ಹತ್ತಿರದಿಂದ ಆತನನ್ನು ನೋಡಿ ತಲ್ಲಣಿಸಿದೆ. ಆತನ ಬಲಗೈಯಲ್ಲಿ ಬೆರಳುಗಳೇ ಇರಲಿಲ್ಲ. ಆ ಹುಡುಗನ ಮುಖದಲ್ಲಿ ಯಾವುದೇ ನೋವುಗಳಿರಲಿಲ್ಲ. ಆತ ಮುಗ್ದ. ಆದರೇ ಆತನ ಮುಂದಿನ ದಿನಗಳು ಈ ಕ್ರೂರ ಸಮಾಜದ ಅಸಹ್ಯ ವರ್ತನೆಗಳು, ಜನಗಳು ಆತನನ್ನು ಕಾಣುವ ಕೀಳು ಭಾವಗಳು ಆತನ ಭವಿಷ್ಯವ ಕಾಡದೇ ಇರುವುದಿಲ್ಲ. ನೆನೆದು ಆ ಹುಡುಗನ ಮೇಲೆ ಮರುಕ ಉಂಟಾಯಿತು, ಅಂಗಡಿಯ ಬಳಿಗೆ ಹೋಗಿ ಆತನಿಗೆ ಬಿಸ್ಕೇಟ್ ಕೊಡಿಸಿ ಸಾರ್ಥಕವಾಯಿತು ಎಂದುಕೊಂಡೆ.  ಆದರೇ ಆ ಹುಡುಗ ನಲಿಯುತ್ತ ಓಡಿ ಹೋಗಿ ಬಿಸ್ಕೇಟ್ ಪ್ಯಾಕ್ ಅನ್ನು ತನ್ನ ತಂದೆ ಕೈಲಿರಿಸಿ ವಾಪಸಾದ. 

      ನನ್ನಿಂದ ತುಸು ದೂರದಲ್ಲಿ ಇನ್ನೋರ್ವ ಯುವಕ ಆ ಹುಡುಗನನ್ನು ಛೇಷ್ಟೆ ಮಾಡುತ್ತಾ ಆಟವಾಡಿಸುತ್ತಿದ್ದಿದನ್ನು ಕಂಡೆ ಆ ಬಾಲಕನು ಸಹ ಅವನೊಡನೆ ಆಡುತ್ತಾ ಜೋರಾಗಿ ನಗುತ್ತಿರುವುದು ಕೇಳಿಸಿತು. ತಕ್ಷಣ ನನಗೆ ನನ್ನ ತಪ್ಪಿನ ಅರಿವಾಯಿತು. ಇಂತ ವಿಕಲಾಂಗ ಮಕ್ಕಳಿಗೆ ಬೇಕಿರುವುದು ನಮ್ಮ ಭಿಕ್ಷೆ ಸಮಾನವಾದ ನಮ್ಮ ಕರುಣೆಯಲ್ಲ. ಎಲ್ಲರಂತೆ ಸಮಾನವಾಗಿ ಕಾಣುವ ಆದರ್ಶ ಗುಣ. 


-ಶರತ್‌ ಚಕ್ರವರ್ತಿ.

2 ಕಾಮೆಂಟ್‌ಗಳು:

  1. ಮನ ನೋಯಿಸುವ ಚಿತ್ರಣ , ನಿಮ್ಮ ಮಾತು ಸರಿ ಬಿಕ್ಷೆ ಕೊಟ್ಟರೆ ಸಾಲದು ,ಸಮಾನವಾಗಿ ಕಾಣುವ ಗುಣ ಇರಬೇಕು ,ಇದು ನಮ್ಮ ಸಮಾಜದ ಇನ್ನೊಂದು ಮುಖ ,ಕೆಲವು ಕಡೆ ನಾನು ನೋಡಿದ್ದೇನೆ ಬದುಕು ,ಜೀವನ ,ಏನಂದೆ ಅರಿಯದ ಮಾನಸಿಕ ವ್ಯಕ್ತಿಗಳನ್ನೂ ತಮಾಷೆ ಮಾಡುವ ವ್ಯಕ್ತಿಗಳು ಇದ್ದಾರೆ ,ನಮ್ಮ ಊರಲ್ಲೂ ಒಂದು ದಿವಸ ಹೀಗೆಯೇ ಒಬ್ಬ ವ್ಯಕ್ತಿ ಬಂದಿದ್ದನು ,ಕೈ ಕಾಲು ಗಳು ,ಗಾಯದಿಂದ ತುಂಬಿ ಹೋಗಿದ್ದವು ,ಆತನಿಗೆ ನಡೆಯಲು ಆಗುತಿರಲಿಲ್ಲ ,ಹಾಗೆಯೇ ಪ್ರಯಾಣಿಕರ ತಂಗುದಾಣದಲ್ಲಿ ಮಲಗಿದ್ದನು ,ನಾವೆಲ್ಲಾ ಒಂದು ದಿನ ಹತ್ತಿರ ಹೋಗಲಿಲ್ಲ ,ಮಾರನೆ ದಿನ ನೋಡಿದಾಗ ಆತನ ಮೈತುಂಬಾ ನೊಣ ಗಳು ಕುಳಿತು ಕೊಂಡು ಆತನನ್ನು ಹಿಂಸಿಸುತಿದ್ದವು,ಇದನ್ನು ನೋಡಿದ ನಮ್ಮ ಗೆಳೆಯರೆಲ್ಲಾ ಸೇರಿ ಆತನನ್ನು ಸ್ಥಾನ ಮಾಡಿಸಿ ನಮ್ಮ ಊರ ಬಳಿಯ ಶಿರ್ವ ಪಾಂಬೂರು ನಲ್ಲಿರುವ ವ್ರದಾಶ್ರಮಕ್ಕೆ ಸೇರಿಸಿದೆವು ,ಇಂತಹ ಪರಿಸ್ತಿತಿಯಲ್ಲಿ ಕರುಣೆ ,ದಯೆ ,ಮುಖ್ಯ

    ಪ್ರತ್ಯುತ್ತರಅಳಿಸಿ