ಸೋಮವಾರ, ಜನವರಿ 30, 2012

ಗೋರಿ

ಎನ್ನ ಪ್ರೇಮಸೌದ 
ಉರುಳಿ ಬಿದ್ದರೂ
ನನ್ನೆದೆಮೇಲೆ ಹಾಗೇಯೇ
ಕುಳಿತಿದ್ದ ಗೋಪುರವ
ಕಂಡು ಜನ
'ಗೋರಿ' ಎಂದರು..!!

ಶರತ್ ಚಕ್ರವರ್ತಿ.

ಶನಿವಾರ, ಜನವರಿ 28, 2012

ಕವಿತೆ



ಕಾಡಿಗೆ ತೀಡಿದ ಕಂಗಳ
ಚಂಚಲೆಯ ಮುಂಗುರುಳು
ಮುದ್ದಿಸುವ ಕೆನ್ನೆಮೇಲೆ
ಮೂಡಿದ ಮೊಡವೆಯಾಗಿ ಬಂದೆ 


ನವಿಲ ನಾಚಿಸಿ ಕುಣಿವ
ನರ್ತಕಿಯ ನುಲಿವ 
ಸೊಂಟದ ಮೇಲಿನ
ನುಣುಪಾದ ನರಿಗೆಯಾಗಿ ಕಂಡೆ 


ಪುರಷನ ತೆಕ್ಕೆಯಲಿ ಬೆರೆತು
ಹೊಸೆದುಕೊಂಡು ಬೆವೆತ
ಪ್ರಕೃತಿಯ ಬಿಸಿಯುಸಿರ
ನವಿರಾದ ನರಳುವಿಕೆಯಲಿ ಚಿಮ್ಮಿದೆ. 


ವೃದ್ದನ ಬಿಳಿತಲೆಯ ಕಂಡು
ಹಿಯ್ಯಾಳಿಸಿ ನಗುವ
ಸುಕ್ಕುಗಟ್ಟಿದ ಮುದುಕಿಯ
ಬೋಡು ನಗೆಯಲ್ಲಿ ಹರಿದೆ 


ಅಮ್ಮನ ಕೊಂದ ನಿನ್ನ
ಬಿಡಲಾರೆಯೆಂದು ಬೊಗಸೆ
ಮಣ್ಣನಿಡಿದು ಕಡಲ ಮುಚ್ಚಲೊರಟ
ಮಗುವಿನ ಮುಗ್ದ ಕಣ್ಣಲಿ ನಿಂತೆ 


ಬಾರದ ಮಳೆಗೆ ಮುಖವೊಡ್ಡಿ
ಬೀಳುವ ಗುಂಡಿಗೆ
ಎದೆಯೊಡ್ಡಿ ನಿಂತ ರೈತನ
ಭವಿಷ್ಯದ ಪ್ರಶ್ನಾರ್ಥಕವಾಗಿ ಕುಳಿತೆ 


ನಿನಗಾಗಿಯೇ ಮಡಿ ಹಾಳೆಯ
ಮಡಿಸದೇ ಧ್ಯಾನಿಸುತ್ತಾ
ಕುಳಿತಾಗ ಎದೆಯೊಡೆದು
ಹೊರಬರಲಾರದಾದೇ ಏಕೆ ಕವಿತೆ..? 


-ಶರತ್ ಚಕ್ರವರ್ತಿ. 




ಸೋಮವಾರ, ಜನವರಿ 23, 2012

ಕುಂದಾಪುರದ ಬಸ್ಸಿನಲ್ಲಿ...

ಭರ್ರೆಂದು ಸಾಗಿದ್ದ ಎನ್ ಹೆಚ್ 66ಓಡಿ ಹೋಗಿ ಹಿಡಿದ
ಕಾಲಿಡಲು ತಾವಿಲ್ಲದ ರಶ್ಸಿನ ಬಸ್ಸು 
ಮಾತಿಲ್ಲದೇ ಬೆವೆತು
ಜಿನುಗುತ್ತಿದ್ದ ಬಿಳಿಚರ್ಮದ ಚಲುವೆಯರು
ತೋಯ್ದು ನೀರಾದ ಅರೆತೆರೆದ ಬೆನ್ನು 
ಹೊಳೆವ ಮಿನುಗು ಮೂಗುತಿ ಮಿಂಚು
ಸೂಸು ಬರುತ್ತಿದ್ದ ಕಂಕುಳ
ಕಮಟು ಗಂಧ 
ವೇಗಮಿತಿ ಮರೆತ ಚಾಲಕ
"ಹೆಮ್ಮಾಡಿ ತಲ್ಲೂರು
ಕುಂದಾಪುರ" ಎಂದು 
ವೇದಘೋಷ ನುಡಿದಿದ್ದ ಕಂಡಕ್ಟರ್ ಮೌಲ್ವಿ
ಕಿಟಕಿ ನಡುವೆ ತಣ
ತಣಗುಡುತ್ತಿದ್ದ ಹೊಳೆ-ಕಡಲ ಸಂಗಮ 
ಬೆಸ್ತರ ಬಂಧಿಸಿದ್ದ ಮೀನುಬಲೆ 
ಹಿಮ್ಮುಗ ಓಟದ ಕಾಂಕ್ರಿಟು ಸೇತುವೆ 
ಹೆಂಡತಿಯ ಪ್ರಸವಕ್ಕೆಂದು 
ಓಡಿ ಹೋಗುತ್ತಿದ್ದಕೈಗಡಿಯಾರದ ಮುಳ್ಳು.


-ಶರತ್ ಚಕ್ರವರ್ತಿ.

ನೆನಪು

ಇಲ್ಲಿಗೆ ಮುಗಿದುಬಿಡಲೆಂದು
ಸಾಲು ಸಾಲು ನೆನಪುಗಳ
ಗುಂಡಿ ತೋಡಿ ಹೂತುಬಿಟ್ಟೆ.

ಮೊದಲ ಮಳೆಯಲಿ ಮಿಂದಾಗಲೇ
ಅರಿವಾದದ್ದು....?

ಹೂಳಲಿಲ್ಲ - ಬಿತ್ತಿದ್ದೇನೆಂದು!!!
-ಶರತ್ ಚಕ್ರವರ್ತಿ.

ಸೋಮವಾರ, ನವೆಂಬರ್ 28, 2011

ನಿತ್ಯ ಸುಮಂಗಲಿ

ನಲುಮೆಯ ನುಡಿಗಳನಾಡುತ
ಪ್ರಣಯ ಚೇಷ್ಟೆಗೈಯ್ಯತ
ಪ್ರೇಮ ರಸಧಾರೆಯನ್ನರಿಸಿಹನು
ನನ್ನಾಸೆಗಳನು ಮೆಟ್ಟಿನಿಂತು
ಮೈಮುರಿದು 
ನನ್ನದೆಲ್ಲ ಅವನದೆಂದೇ ಅಧಿಕಾರಿಸಿಹನು


ಭಿಗುಮಾನದ ಏರಿಳಿತದಲಿ
ತುಂಬಿದೆದೆ ತಲ್ಲಣಿಸಿಹುದು

ಇವನಾಗುವನೇ ಎನ್ನ ಮನದಿನಿಯ
ಹಾರೊಡೆದ ಎದೆಯಲಿ
ಬಂಧಿಸಿದ ಆಸೆಗಂಗಳು ಮುಚ್ಚಿ 
ತೆಲಿಹವು ಕನಸಕೊಳದಲಿ


ರವಿ ಬಂದು ಶ್ಯಾಮ ತೊಲಗಿರೇ 
ಒಂಟಿಯಾಗಿಹುದು ಮೈಮನ 
;ವಾರಸುಧಾರನಿಲ್ಲದೆ
ಕಾದು ಕಾತರಿಸಿಹವು ಕಂಗಳು 
ಸುಮಂಗಲಿಯಾಗುವ ನಿತ್ಯ ಕನಸಿನ ಅಮಲಲಿ

ಖಾಲಿ ಹೊಟ್ಟೆಯಲ್ಲಿ ಕನಸುಗಳ ಮೂಟೆಕಟ್ಟಿ 
ಹಸಿದು ಕಾದವರ ತೃಷೆ ನೀಗಲು 
ಹಾಧರಿಸಿರುವೆ..
ಓ... ತೃಷಿಕನೇ ಕಾಣದೇ 
ನಿನ್ನಲ್ಲೆನ್ನ ಆಂತರ್ಯ ಅಂಗಲಾಚಿಹುದು
ನೀಡು ಗರತಿಯಾಗೋ ಚೈತನ್ಯ.


-ಶರತ್ ಚಕ್ರವರ್ತಿ.

ಶನಿವಾರ, ನವೆಂಬರ್ 19, 2011

ನೀ ಚಂದಿರಳೇ..?

ಎಷ್ಟೇ ಹೊಳಪಿದ್ದರೂ
ಸ್ವಂತಿಕೆಯಿಲ್ಲದ 
ಹುಣ್ಣಿಮೆ ಸೂರ್ಯನ ಪ್ರತಿಫಲನ
ಭಿಂಕದಲಿ ಬೀಗೊ
ನಿನ್ನ ರಾಶಿ ರಾಶಿ 
ಸೌಂದರ್ಯ ನನ್ನ ಕಣ್ಣಗಳ ಪ್ರತಿಫಲನ!

ಶರತ್ ಚಕ್ರವರ್ತಿ.

ಬುಧವಾರ, ನವೆಂಬರ್ 16, 2011

ಮಿಂಚು

ಬೆಳಕಾಗಿ ಬಾ... ಬೆಳದಿಂಗಳಾಗಿ
ಬಾ... ಎಂದು ಹಾಡಿರೇ
ಮಿಂಚಾಗಿ ಬಂದಳು ದೃಷ್ಟಿಯನ್ನೇ
ಹೊತ್ತೊಯ್ದದಳು....!

ಶರತ್ ಚಕ್ರವರ್ತಿ.