ಸೋಮವಾರ, ಜೂನ್ 25, 2012

ಅಹಲ್ಯೆಯಲ್ಲದ ನನ್ನ ಮನ

ಕೋಟಿ ಸೂರ್ಯೋದಯ ಚಂದ್ರೋದಯಗಳ ಕಂಡರೂ
ಬಿಡದೇ ಬಿಸಿಲು ಮಳೆ ಚಳಿಗಳಲಿ ಮಿಂದರೂ
ಕೋಟಿ ಋತು ವಸಂತಗಳು ಸಂಧರೂ
ಒಂಟಿಯೇ ಈ ಬಂಡೆಗಲ್ಲು


ಚಿಟಿಚಿಟಿ ಮಳೆಹನಿಗಳ ಸಂಗೀತ 
ಉಲಿದು ನುಲಿದು ನಲಿದು ಹಾಡುವ ಗುಬ್ಬಿ
ಗೊರವಗಳ ಒಡನಾಟ 
ಗುಂಯ್ ಗುಡುವ ಗೊಂಡಾರಣ್ಯದ ನಟ್ಟನಡುವೆ 
ಸಾವಿರ ಬಂಡೆಗಳ ಗುಡ್ಡದ ಗುಡ್ಡೆಯಲ್ಲಿದ್ದರೂ 
ಒಂಟಿಯೇ.


ಗುಡುಗಿ ಸಿಡಿಲು ಸಿಡಿದರೂ ಪ್ರಾಣಭಯವಿಲ್ಲ 
ಜಡಿ ಮಳೆಬಡಿದರೂ ಒಂದಿನಿತು ಅಲುಗಿಲ್ಲ 
ಗಾಳಿ ಹೊತ್ತು ತಂದ ಕಾಡುಮಲ್ಲೆ ಕಂಪಿನ ಸಂಘವೂ 
ಬೇಕಿಲ್ಲ ಯಾರ ಸಂಘವು.


ಹೆಪ್ಪಾದ ಜಡವಿದು ಯಾರ ಅಳುಕಿಲ್ಲ ಹಂಗಿಲ್ಲ
ಮಾತಿಲ್ಲ ಉಸಿರ ಸದ್ದಿಲ್ಲ
ಬಿಸಿಲು ಬೇಗೆಗಳ ಗೋಜಿಲ್ಲ 
ಒಡಲ ಒಡೆದು ನೂರು ಚೂರು ಮಾಡುವರೆಂಬ
ಅರಿವೂ ಇಲ್ಲ.


ಇದೆ...!

ಜಡವಿದ್ದರೂ ಆಂತರ್ಯ ಕಿವುಚೋ ನೋವಿದೆ

ಒಳಗೆ ಕುಳಿತು ಕಾದು ಕುದಿದ ಬಿಸಿಯುಸಿರಿದೆ
ಝರಿ ತೊರೆಯ ಮೀರಿಸೋ ಕಣ್ಣೀರಿದೆ
ಮೌನದ ಕಣ್ಕಟ್ಟೆಯೊಡೆದು ಹೊರಬರಲು ಕಾದಿದೆ

ಒಂಟಿತನವ ಪಾದದಿ ಮೆಟ್ಟಿ ಕೊಲುವ ನವಿರು ಸ್ಪರ್ಶಕೆ 
ಕಾದಿದೆ ನವ ಚೈತನ್ಯಕೆ ಅಹಲ್ಯೆಯಂತೆ,
ಅಹಲ್ಯೆಯಲ್ಲದ ನನ್ನ ಮನ.

-ಶರತ್ ಚಕ್ರವರ್ತಿ.

1 ಕಾಮೆಂಟ್‌:

  1. ನಿಜವಾದ ಅಹಲ್ಯೆಯ ದುಗುಡ ಹೇಗಿತ್ತೋ ಗೊತ್ತಿಲ್ಲ ಗೆಳೆಯ ಆದ್ರೆ ಅವಳಲ್ಲಿ ಕೇಳಿ ಬರೆದಂತಿದೆ.ಬೇಂದ್ರೆ ಹೇಳಲ್ವ ಅಶೋಕ ವನದಲಿ ವಿಶೋಕನಾಗಿ ರಾಮನಾಮವನೆ ಜಪಿಸುತಿದೆ ಅಂತ ಹಾಗೆ
    ತುಂಬಾನೆ ಇಷ್ಠ ಆಯ್ತು

    ಪ್ರತ್ಯುತ್ತರಅಳಿಸಿ