ಚಳಿಗಾಲ. ಬೆಳಗಿನ ಇಬ್ಬನಿ ಹೂ ಎಲೆಗಳನ್ನು ಅಪ್ಪಿ ಮುದ್ದಿಸುತ್ತಿದೆ. ಇತ್ತ ಜೇಡವೊಂದು ತನ್ನ ಬಲೆಯನ್ನು ಸರಿಪಡಿಸುತ್ತಾ, ಗಾಳಿಗೆ ಅಲುಗಾಡುತ್ತಾ ಉಯ್ಯಾಲೆಯಾಡುತ್ತಿದೆ. ಆ ಜೇಡರಬಲೆಯನ್ನು ಸಹ ಇಬ್ಬನಿ ಮುತ್ತಿ ಮುತ್ತಿನ ಮಣಿಗಳಂತೆ ಹೊಳೆಯುತ್ತಿವೆ. ಈ ರಮ್ಯ ಸಮಯವನ್ನು ಬಿಳಿಹಾಳೆಯ ಮೇಲೆ ಇಳಿಸುತ್ತಾ ತನ್ನ ಕಲಾಚತುರತೆಯನ್ನು ತಾನೇ ಸವಿಯುತ್ತಾ ಆ ಬಣ್ಣಗಳಲ್ಲೇ ಮುಳುಗಿದ್ದಾನೆ ವಿಕಾಸ್.
"ವಿಕಾಸ ಯಾರೋ ಬಂದವ್ರೆ, ನೋಡಪ್ಪ"ಅಮ್ಮನ ಧ್ವನಿ ಕೇಳುತ್ತಲೇ ಮಾಡುತ್ತಿದ್ದ ಕಸುಬನ್ನು ಅರ್ಧಕ್ಕೆ ನಿಲ್ಲಿಸಿ ಹಿತ್ತಲಿಂದ ನಡೆದನು.
ಬಂದಿದ್ದವನು ವಿಶ್ವನಾಥ. ವಿಕಾಸನ ಗೆಳೆಯ, ಜೊತೆಗೆ ಓದಿದವ. ಎಂ.ಕಾಂ ಮುಗಿಸಿ ಬೆಂಗ್ಳೂರಿನ ಕಾಲೇಜೊಂದರಲ್ಲಿ ಅಥಿತಿ ಉಪನ್ಯಾಸಕನಾಗಿದ್ದ. ಗೆಳೆಯರ ಭೇಟಿ ಕಾಫಿ ತಿಂಡಿ ಒಂದಿಷ್ಟು ಹರಟೆಗಳೊಂದಿಗೆ ನಡೆದು ವಿಕಾಸನ ಚಿತ್ರಗಳ ಕಡೆಗೆ ಬಂದಿತ್ತು. "ನಿನ್ನೆಲ್ಲಾ ಪೇಂಟಿಂಗ್ಸ್ ನು ಬೈಂಡಿಂಗ್ ಮಾಡ್ಸಿ ಇಟ್ಟಿರು, ನೆಕ್ಟ್ಸ್ ಟೈಮ್ ಬೆಂಗ್ಳೂರ್ ಚಿತ್ರಕಲಾ ಪರಷತ್ ಅಲ್ಲಿ ಎಕ್ಸಿಬಿಷನಿಗೆ ತಗೊಂಡೋಗನ. ಟೋಟಲ್ ಎಷ್ಟ್ ಪೇಂಟಿಂಗ್ಸ್ ಆಗಿದವೆ." ಎಂದು ಗೋಡೆಗಳ ಮೇಲಿದ್ದ ಒಂದು ಚಿತ್ರಪಟವನ್ನ ನೋಡುತ್ತಾ ಹೇಳಿದ ವಿಶ್ವ.
"ಎಕ್ಸಿಬಿಷನಿಗೆ ತಗೊಂಡೋಗೊ ಅಂತದ್ದು ಯಾವ್ದು ಮಾಡಿಲ್ಲ. ಒಂದೆರಡು ಬಿಟ್ರೆ ಬಾಕಿ ಎಲ್ಲ ಪೆನ್ಸಿಲ್ ಸ್ಕೆಚ್ಗಳು ಅಷ್ಟೇ".
"ಇನ್ನೂ ಟೈಮ್ ಐತಲಾ ನೀನ್ ಮಾಡು ಅಟ್ ಲೀಸ್ಟ್ ಒಂದೈವತ್ತಾದ್ರು ಮಾಡಿಟ್ಟಿರು"
"ಸರಿ ನೋಡ್ತಿನಿ" ಕುಶಲೋಪರಿಗಳು ಮುಗಿದಿದ್ದವು. ವಿಶ್ವ ಹೊರಟು ಹೋದ. ವಿಶ್ವನ ಮಾತುಗಳು ವಿಕಾಸನಲ್ಲಿ ಚೈತನ್ಯ ಮೂಡಿಸಿದರೂ ಒಂದು ರೀತಿಯಲ್ಲಿ ಚಿಂತೆಗೀಡು ಮಾಡಿದವು. ವಿಕಾಸ ಒಬ್ಬ ಕಡುಬಡವ. ತಂದೆ ಇದ್ದದ್ದೆಲ್ಲವ ಕಳೆದು ಸೋತು ಮೂಲೆಹಿಡಿದಿದ್ದನು. ತಮ್ಮನೊಬ್ಬ ಇನ್ನು ಓದುತ್ತಿದ್ದ. ಎರಡು ಎಮ್ಮೆಗಳನ್ನು ಕಟ್ಟಿಕೊಂಡು ಅವನ ತಾಯಿ ಹೇಗೋ ಸಂಸಾರ ತೂಗಿಸಿದ್ದಳು. ಇವನ ಬಿ.ಎ ಉಪಯೋಗಕ್ಕೆ ಬಾರದ್ದಾಗಿತ್ತು. ಊಟಕ್ಕೆ ಪಾಡು ಪಡುವಾಗ ಇನ್ನೆಲ್ಲಿಯ ಎಕ್ಸಿಬಿಷನ್. ಚಿತ್ರಬಿಡಿಸಲು ಬೇಕಾಗುವ ವಿವಿಧ ನಮೂನೆ ಪೆನ್ಸಿಲ್, ಐವರಿ ಶೀಟ್ಗಳು, ಪೋಸ್ಟರ್ ಬಣ್ಣ ಬ್ರಷ್ಷುಗಳನ್ನು ಕೊಳ್ಳಲು ಏನಿಲ್ಲವೆಂದರೂ ಸಾವಿರಾರು ರೂಗಳು ಬೇಕಿತ್ತು. ಅದರಲ್ಲಿ ಐವತ್ತು ಪೇಂಟಿಂಗ್ಸ್ ಎಂದರೇ ಅವನಿಗೆ ಹಲವಾರು ಸಾವಿರಗಳನ್ನೇ ಖರ್ಚು ಮಾಡಬೇಕಾಗಿತ್ತು. ತರುವುದು ಎಲ್ಲಿಂದ? ಆದಾಯ ಶೂನ್ಯ. ಕೆಲವು ಸ್ನೇಹಿತರು ಬಣ್ಣ ಕೆಲವು ಬ್ರಷ್ ಗಳನ್ನು ಗೀಫ್ಟ್ ಎಂದು ನೀಡಿ, ಅವನ ಕೆಲವು ಪೇಂಟಿಂಗ್ಸನ್ನು ಅದೇ ಗಿಫ್ಟ್ ಹೆಸರಿನಲ್ಲಿ ತೆಗೆದುಕೊಂಡು ಹೋಗಿದ್ದರು. ಅವನ ಬಡತನ ಅವನನ್ನು ಹತಾಶನನ್ನಾಗಿಸಿತ್ತು.
ಆದರೂ ಅವನೊಬ್ಬ ಅದ್ಬುತ ಚಿತ್ರಕಲೆಗಾರ. ಎದುರಿದ್ದ ದೃಶ್ಯಕ್ಕೆ ಜೀವತುಂಬಿ, ಭಾವವುಳ್ಳ ಹನಿಗವನಗಳೊಂದಿಗೆ ಅದ್ಬುತ ದೃಷ್ಯಕಾವ್ಯವನ್ನೇ ಹುಟ್ಟುಹಾಕುವಂತ ನಿಪುಣನಾಗಿದ್ದ. ಮುಂದೊಂದು ದಿನ ದೊಡ್ಡ ಕಲಾವಿದನಾಗಿ ನಾಡಿಗೆ ಹೆಸರಾಗಬೇಕೆಂಬುದು ಅವನ ಆಶಯ; ಗುರಿ ಕೂಡ.
ಯಾವುದಾದರೂ ಸಣ್ಣ ಕೆಲಸಕ್ಕೆ ಸೇರಿ, ಜೊತೆ ಜೊತೆಗೆ ಚಿತ್ರಕಲೆಯ ಸಾಧನೆಗೆ ಶ್ರಮಿಸಬೇಕೆಂದು ತೀರ್ಮಾನಿಸಿದ್ದ. ಹಲವಾರು ಸರ್ಕಾರಿ ಖಾಸಗಿ ಕೆಲಸಗಳಿಗೆ ಅರ್ಜಿ ಎಸೆದು ಸಾಕಾಗಿ ಕುಳಿತಿರುವಾಗ ಅವನಿಗೆ ಸಿಕ್ಕಿದ್ದೆ ಲೋಕೋಪಯೋಗಿ ಇಲಾಖೆಯಲ್ಲಿ ಜವಾನನ ಕೆಲಸ. ಸರ್ಕಾರಿ ಸಂಬಳ ಹೆಚ್ಚಲ್ಲದಿದ್ದರೂ ಕಡಿಮೆಯೆನ್ನುವಂತೆಯೂ ಇರಲಿಲ್ಲ. ಇದನ್ನೇನು ಕೊನೆಯವರೆಗೂ ಮಾಡಬೇಕೆ ಎಂದುಕೊಂಡು ಹೊರಡಲು ತಯಾರಾದ.ಅವನ ಗ್ರಹಾಚಾರಕ್ಕೊ ಏನೋ ಕೆಲ್ಸ ಸಿಕ್ಕಿದ್ದು ದೂರದ ಮಂಗಳೂರಿನಲ್ಲಿ. ಹಲವು ಆಪ್ತರ ಭರವಸೆಗಳೊಂದಿಗೆ ಹಾಸನದಿಂದ ಮಂಗಳೂರು ಬಸ್ಸು ಹತ್ತಿದ. ಅವನ ಒಂದು ತಿಂಗಳ ಖರ್ಚಿಗಾಗಿ ಮನೆಯಲ್ಲಿದ್ದ ಒಂದು ಎಮ್ಮೆಯನ್ನು ಮಾರಿ ಅವನ ತಾಯಿ ಕಣ್ಣಿರಿನ ನಡುವೆ ನಗುತ್ತಾ ಕಳುಹಿಸಿಕೊಟ್ಟರು.
ಮಂಗಳೂರು ಮಹಾನಗರದ ದುಭಾರಿ ಜೀವನ, ಅಸಾಧಾರಣ ಶೆಖೆ ಅವನನ್ನು ತತ್ತರಿಸುವಂತೆ ಮಾಡಿದವು. ಸ್ನೇಹಿತನ ದೂರದ ಸಂಬಂಧಿಯೊಬ್ಬನ ರೂಮಿನಲ್ಲೇ ಇವನಿಗೆ ಜಾಗ ದೊರೆಯಿತು. ಅವನು ಕೂಡ ಒಬ್ಬಂಟಿಯಾದ್ದರಿಂದ ಹೊಂದಿಕೆಯಾಗುವಂತೆ ಕಂಡನು. ಮೊದಮೊದಲು ಕೆಲಸ ಆರಾಮು ಎನಿಸಿದರೂ ನಂತರದ ದಿನಗಳಲ್ಲಿ ಅಧಿಕಾರಿಗಳೇ ಕಿರಿಕಿರಿ ಎನಿಸತೊಡಗಿದರು. "ಓಯ್ ವಿಕಾಸು ಇಲ್ಲಿ ಬಾ, ಎಂತದು ನೀನು ಕೆಲಸ ಮಾಡುವುದು. ಇಲ್ಲಿ ಕಾಣು ಬಲೆ ಹೇಗೆ ಬೀಳ್ತವುಂಟು" ಎಂದು ಗುಮಾಸ್ತನ ಆರ್ಭಟ, ಬೊಜ್ಜ, ಸಾವು ಬೈಗಳಗಳ ಮಧ್ಯೆ ಜೀವನ ರೋಸಿಹೋಗುತ್ತಿತ್ತು. ಸೌಂದರ್ಯವೆಂದು ಭಾವುಕನಾಗಿ ಮೈಮರೆತು ನೋಡುತ್ತಿದ್ದ ಜೇಡರಬಲೆಗಳ ಮೇಲೆ ಕಿಡಿಕಿಡಿಯಾಗುವಂತಾಯಿತು.
ತಿಂಗಳು ತುಂಬುತ್ತಾ ಬಂದಿತ್ತು. ಎಮ್ಮೆ ಮಾರಿದ ಹಣವು ಮುಗಿದು ಜೇಬಿನಲ್ಲಿ ಹತ್ತು ರೂಪಾಯಿ ಮಾತ್ರ ಉಳಿದಿತ್ತು. ಸ್ನೇಹಿತನ ರೂಮಿನಲ್ಲೇ ರಾತ್ರಿ ಊಟ ಆಗುತ್ತಿದ್ದರಿಂದ ಹೇಗೋ ಜೀವ ಉಳಿದಿತ್ತೆನ್ನಬಹುದು. ಇನ್ನುಳಿದಂತೆ ಬೆಳಿಗ್ಗೆ ಮಧ್ಯಾಹ್ನಗಳು ಉಪವಾಸ ವ್ರತಗಳಾದವು. ಹಸಿದು ಹಸಿದು ಸಿಕ್ಕದೆಲ್ಲಾ ತಿನ್ನುವಂತಾಯಿತು ಅವನ ಪಾಡು. ಕೆಲವು ದಿನಗಳಲ್ಲಿ ರೂಮಿನ ಸ್ನೇಹಿತ ಕೂಡ ಬರಿಗೈಯ್ಯವನನ್ನು ಕಡೆಗಾಣಿಸಲಾರಂಭಿಸಿದ.
ಬ್ಯಾಂಕ್ ಅಕೌಂಟ್, ಎನ್.ಪಿ.ಸಿ ಇತ್ಯಾದಿ ರಗಳೆಗಳಿಂದ ಮೊದಲ ತಿಂಗಳ ಸಂಬಳವೂ ತಡವೇ. ಎರಡು ಮೂರು ತಿಂಗಳ ನಂತರ ಬಂದರೂ ಬಂದೀತು, ಎಂದಾಗ ವಿಕಾಸ ದಿಕ್ಕೆಟ್ಟು ಕುಳಿತನು. ಸಾಲಮಾಡಿಕೊಂಡಾದ್ರು ಹಾಸನ ಬಸ್ಸು ಹತ್ತಬೇಕೆನಿಸುತ್ತಿತ್ತು. ಹೀಗಿರುವಾಗ ಒಮ್ಮೆ ಕಾಂಟ್ರಕ್ಟ್ ಇಂಜಿನಿಯರ್ ಸೋಮನಾಥ ಶೆಟ್ಟಿಯವರು ಕಂಟ್ರಾಕ್ಟ್ ಬಿಲ್ ಸಂಬಂಧಿ ಫೈಲ್ ನೀಡಿ ತುರ್ತಾಗಿ ಸರ್ಕಾರಿ ಅಭಿಯಂತರ ಸೈನ್ ಮಾಡಿಸಿ ತರಲು ಕೋರಿದರು. ಕೆಲಸ ಮುಗಿದ ಕೂಡಲೇ ನೂರು ರೂಪಾಯಿಯ ಬಣ್ಣದ ನೋಟನ್ನು ಚಾಚಿದರು. "ಅಯ್ಯೊ ಬ್ಯಾಡ ಸರ್ ಬ್ಯಾಡ" ಎಂದರೂ "ಹೇ ಅಡ್ಡಿಯಿಲ್ಲ ಇಟ್ಟಗೋ ಮಾರಾಯ, ಬಿರಿಯಾನಿ ತಿನ್ನು " ಎಂದು ಅವನ ಜೇಬಿಗೆ ತುರುಕಿ ಗಲ್ಲ ತಟ್ಟಿದರು. ಹಸಿದು ತತ್ತರಿಸಿದ್ದವನು ಬಿರಿಯಾನಿ ಹೆಸರು ಕೇಳಿ ಮಾತುಬರದೇ ಸ್ಥಬ್ದನಾದ. ಅವನ ಹಸಿವು ಅವನ ಬಾಯಿ ಕಟ್ಟಿಹಾಕಿತು.
ಮಧ್ಯಾಹ್ನದ ಬಿಡುವಲ್ಲೇ ಹೋಗಿ ಹೊಟ್ಟೆ ತುಂಬ ಬಿರಿಯಾನಿ ತಿಂದು ಬೀಡ ಹಾಕುವ ನಿರ್ಧಾರ ಮಾಡಿದನು. ಬಿಡುವಾಯ್ತು. ಹೊರಟ, ಹೋಟೇಲ್ ಹತ್ತಿರವಾಗುತ್ತಿರವಂತೆ ಅವನ ಮನಸ್ಸು ಬಿರಿಯಾನಿಯ ರುಚಿಯಿಂದ "ನಾಳೆ?" ಎಂಬ ಪ್ರಶ್ನೆಯ ಕಡೆಗೆ ಸಾಗುತ್ತಿತ್ತು. ಸೀದಾ ಹೋದವನೆ ಸಣ್ಣ ಕ್ಯಾಂಟೀನಲ್ಲಿ ಒಂದೇ ಒಂದು ಖಾಲಿ ದೋಸೆ ತಿಂದು ಮಿಕ್ಕ ಹಣವನ್ನ ತನ್ನ ನಾಳೆಯ ಖರ್ಚನ್ನು ನೆನೆದು ಜೇಬಿಗಿಳಿಸಿದ. ಹೊಟ್ಟೆ ಸ್ವಲ್ಪ ಮಟ್ಟಿಗೆ ತುಂಬಿತಾದರೂ ಮನಸ್ಸು ಮಾತ್ರ ಪೂರ್ತಿ ತುಂಬಿ ಸಂತುಷ್ಟಗೊಂಡು ಸೋಮನಾಥಶೆಟ್ಟಿಗೆ ವಂದಿಸುತ್ತಿತ್ತು. ಆದಿನ ಕಳೆದು ಮರುದಿನ ಬಂತು. ಇಂದು ಕೂಡ ನೆನ್ನೆಯಂತೆ ಆದರೇ.....! ಎಂದುಕೊಳ್ಳುತ್ತಾ ಕೆಲಸದಲ್ಲಿ ತೊಡಗಿದನು. ಆದರೆ ಹಿಂದಿನ ದಿನ ಮತ್ತೇ ಮರುಕಳುಹಿಸಿತು. ಕಾರ್ಯಪಾಲಕ ಅಭಿಯಂತರರ ಕೊಠಡಿಯಿಂದ ಹೊರಬಂದ ವ್ಯಕ್ತಿಯೊಬ್ಬ ಇವನನ್ನು ಕರೆದು ಕೈಗೊಂದು ಕವರ್ ಕೊಟ್ಟು, "ಇದನ್ನು ನಿಮ್ ಸಾಹೇಬರಿಗೆ ತಲುಪಿಸು, ಇದು ನಿನಗೆ" ಎಂದು ವಿಕಾಸನ ಜೇಬಿಗೆ ಐವತ್ತು ಗಿಡಿದು ಹೊರನಡೆದ. ಕವರ್ ಒಳಗಿದ್ದಿದ್ದು ಹಣವೇ. ಸಾಹೇಬನ ಪಾಲು. ವಿಕಾಸನ ತಲೆತಿರುಗತೊಡಗಿ ವಿಚಾರಗಳ ತಾಕಲಾಟಕ್ಕೆ ಶುರುಹಚ್ಚಿಕೊಂಡಿತು.
ಇದು ಪ್ರತಿದಿನ ಸಲೀಸಾಗಿ ನಡೆಯತೊಡಗಿತು. ಸಾಹೇಬನಿಗೆ ಬರಬೇಕಾದ್ದರ ಜೊತೆಗೆ ಇವನ ಪಾಲು ಇವನಿಗೆ ಆಯಾಸವಿಲ್ಲದೇ ದೊರಕುತ್ತಿತ್ತು. ಪುರುಸೊತ್ತಾದಾಗಲೆಲ್ಲ ತನ್ನ ಬಳಿ ಎಷ್ಟು ದುಡ್ಡಿದೆ? ಎಷ್ಟು ಖರ್ಚಾಯ್ತು? ತೂ.. ಅಷ್ಟೇಕೆ ಖರ್ಚು ಮಾಡಿದೆ? ಇವತ್ತು ಯಾರು? ಎಷ್ಟು? ಎಂಬ ಆಲೋಚನೆಯಲ್ಲಿಯೇ ಮುಳುಗಿದನು. ಆವರಾಗಿಯೇ ಕೊಟ್ಟಾಗ ತೆಗೆದುಕೊಂಡು ಸುಮ್ಮನಾಗುತ್ತಿದ್ದವನು ದಿನ ಕಳೆದಂತೆ ಕಛೇರಿಗೆ ಬರುವ ಪರಿಚಿತ -ಅಪರಿಚಿತರೆಲ್ಲರನ್ನು ತಾನಾಗಿಯೇ ಮಾತಾಡಿಸಿ ಅವರ ಸಮಸ್ಯೆ ತಿಳಿದು "ಕೆಲ್ಸ ಮಾಡ್ಸಿಕೊಡ್ತಿನಿ, ನನ್ ಕಡೆನೂ ನೋಡ್ಕೊಬೇಕು" ಎಂದು ಸೂಚನೆ ನೀಡುತ್ತಾ ಕೈಚಾಚತೊಡಗಿದನು. ಪ್ರತಿದಿನ ಏನಿಲ್ಲವೆಂದರೂ 250 - 300 ರೂಪಾಯಿಗಳು ಅವನದಾಗುತ್ತಿತ್ತು.
ಇತ್ತ ಆದಾಯ ಕಂಡರೂ ಅವನಲ್ಲಿಯ ಜಿಪುಣ ಜಾಗೃತನಾಗತೊಡಗಿದನು. ಆದರೆ ಮೊದಲಿನಿಂದಲೂ ಅವನೆನು ಅಂತ ಜಿಪುಣನಾಗಿರಲಿಲ್ಲ. ಇತ್ತೀಚೆಗೆ ಹತ್ತು ರೂಪಾಯಿ ಖರ್ಚು ಮಾಡಲು ಅವನು ಹತ್ತು ಸಲವೇ ಯೋಚಿಸುತ್ತಿದ್ದ. ಅವನ ಬುದ್ದಿಯೆಲ್ಲಾ ದುಡ್ಡನ್ನು ಕಲೆಹಾಕಿ ದೊಡ್ಡ ಮೊತ್ತ ಮಾಡುವುದನ್ನಷ್ಟೇ ಯೋಚಿಸುತ್ತಿತ್ತು. ತಿಂಗಳ ಸಂಬಳವೇ ಬೇಡವೆನಿಸುವಷ್ಟು ಹಣ ಅವನಲ್ಲಿ ಶೇಖರಣೆಯಾಗಿತ್ತು. ಜೊತೆಗೆ ಎರಡು ತಿಂಗಳ ಸಂಬಳದ ಹಣವೂ ಸೇರಿ ಎರಡು ತಿಂಗಳಲ್ಲೇ ಹತ್ತಾರು ಸಾವಿರಗಳು ಅವನಲ್ಲಿ ಸೇರಿತ್ತು. ಚಪ್ಪಲಿ ಹರಿದರೂ ಹೊಲಿಗೆ ಹಾಕಿಸಿ ನಡೆದನೇ ಹೊರತು ಹೊಸದನ್ನು ಕೊಳ್ಳುವ ಧೈರ್ಯ ಮಾಡಲಿಲ್ಲ.
ಆದರೇ ಅವನ ಗುರಿಯ ಕನಸು ಮಾತ್ರ ಆಗಾಗ ಬಿಚ್ಚಿಕೊಂಡು ಆಲೋಚನೆಗಳಲ್ಲಿ ರೂಪತಾಳುತ್ತಿತ್ತು. ದಿನನಿತ್ಯದಲ್ಲಿ ಕಂಡಂತಹ ಕೆಲವು ಭಾವುಕ ಸನ್ನಿವೇಶಗಳು, ಸಮುದ್ರ ದಡದ ಪ್ರೇಮಿಗಳು, ಸುಕ್ಕುಹಿಡಿದ ಅಜ್ಜಿಯ ನಗು, ಮಂಗಳೂರಿನ ಸುಂದರ ಸೂರ್ಯಾಸ್ತಗಳು ಚಿತ್ರಿಸುವಂತೆ ಆಗಾಗ್ಗೆ ಕೈಬೀಸುತ್ತಿದ್ದವು. ಸದ್ಯದಲ್ಲೆ ಇವನೆಲ್ಲಾ ಪಟದೊಳಕ್ಕೆ ಕಟ್ಟಿಕೂರಿಸಬೇಕು ಅಂದುಕೊಳ್ಳುತ್ತಿದ್ದನು. ಮತ್ತೊಂದು ಕಡೆ ಖಾಲಿ ಹಾಳೆ ಸಿಕ್ಕಿದ ಕಡೆಯೆಲ್ಲಾ ಲೆಕ್ಕಮಾಡುತ್ತಾ ಕೂರತೊಡಗಿದ. ಜೇಬಿನಲ್ಲೆಷ್ಟು, ಬ್ಯಾಂಕಿನಲ್ಲೆಷ್ಟು, ಮುಂದಿನ ವಾರದೊಳಗೆ ಎಷ್ಟಾಗಬುಹುದು ಇವುಗಳೇ ಆ ಲೆಕ್ಕಾಚಾರಗಳಾಗಿದ್ದವು. ವಿಕಾಸ್ ದಿನ ದಿನಕ್ಕೆ ವಿ-ಕಾಸುವೇ ಆಗಿ ಹೋದನು.
ಅದೊಂದು ದಿನ, ತಿಂಡಿ ತಿನ್ನದೇ ಅರ್ಧ ಟೀ ಕುಡಿದು ನಗರದ ಬೀದಿಗಳಲ್ಲಿ ಜೇಬಿಗೆ ಕೈಹಾಕಿ ನಡೆಯುತ್ತಿರುವಾಗ ಚಿತ್ರಕಲಾ ಸಾಮಾಗ್ರಿಗಳು ದೊರೆಯುತ್ತವೆ, ಎಂಬ ಮಾಹಿತಿಯಿದ್ದ ಜಾಹೀರಾತುವೊಂದನ್ನು ಕಂಡು ಆ ಅಂಗಡಿ ಬಳಿ ಹೋದನು. ತರತರಹದ ಪೆನ್ಸೀಲುಗಳು, ಬ್ರಶ್, ಬಣ್ಣದ ಡಬ್ಬಿಗಳು, ತೆಳು-ಗಟ್ಟಿ ಹಾಳೆಗಳನ್ನು ಕೇಳಿ ತೆಗೆಸಿದ. ಕಣ್ಣಮುಂದೆ ಎಲ್ಲಾ ಸಾಮಾಗ್ರಿಗಳನ್ನು ಒಟ್ಟಾಗಿ ಕಂಡು ಅವನು ಮನಸ್ಸು ಉಲ್ಲಾಸಕೊಂಡಿತು. ಅವುಗಳ ಬೆಲೆಯನ್ನು ಕೇಳಿ ಲೆಕ್ಕಮಾಡಹೊರಟನು. ಮನಸ್ಸೆಲ್ಲೋ ಒಂದು ಕಡೆ ಮುಷ್ಕರ ಸಾರಿ ಕೆಳಮುಖನಾಗಿ ಜಗ್ಗತೊಡಗಿತು. ಇಬ್ಬದಿಗೆ ಸಿಲುಕಿದವನು ಒಂದು ಕ್ಷಣ ಯೋಚಿಸಿ ಗಂಟಲು ಸರಿಮಾಡಿಕೊಂಡು "ಬೇಡ ಸಾರ್, ಸಾರಿ" ಎಂದು ಮುಂದೆ ಅಡಿಯಿಟ್ಟನು.
ಮುಂದೇಂದು ವಿಕಾಸನ ಕೈ ಬಣ್ಣದ ಕಲೆಯಾಗಲಿಲ್ಲ, ಶುದ್ದವಾಗಿಯೂ ಉಳಿಯಲಿಲ್ಲ. ಅದೆಷ್ಟೋ ಚಿತ್ರಗಳು ಸ್ಥಭ್ದವಾಗದೆ ಹಾಗೆಯೇ ಹರಿದು ಹೋದವು, ಮತ್ತಷ್ಟು ಕಲ್ಪನೆಯಲ್ಲೇ ಕೊಳೆತವು. ಆದರೆ ವಿಕಾಸ ಮಾತ್ರ ಒಬ್ಬ ಮಾದರಿ ಪುರುಷನಾಗಿ ನಮ್ಮ ನಿಮ್ಮೊಳಗೆ ಉಳಿದ.
*~*~*~*
(ದಿನಾಂಕ: 15-05-2012ರ "ಪ್ರಜಾಸಮರ" ಪಾಕ್ಷಿಕದಲ್ಲಿ ಪ್ರಕಟ)
ಶರತ್ ಚಕ್ರವರ್ತಿ.
ಹಾಸನ.
ದಿನಾಂಕ: 23/02/2012
ವಿಮರ್ಶೆ: ಸುನಿಲ್ ಗೌಡ:
- ನನ್ನ ಪ್ರಿಯ ಮಿತ್ರ ಶರತ್ ಚಕ್ರವರ್ತಿ ಯವರ "ವಿಮುಖ" ಎಂಬ ಒಂದು ಉತ್ತಮ ಸಂದೇಶವಿರುವ ಸಣ್ಣ ಕಥೆಯನ್ನು ವಿಮರ್ಶಿಸಿಕೊಡಲು ನನಗೆ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು.
- ಮತ್ತು ನನ್ನ ಮಟ್ಟಿಗೆ ಈ ಕಥೆ ಶರತ್ ಬರೆದಿರುವ ವಿಧವಿಧವಾದ ಸಣ್ಣ ಕಥೆಗಳಲ್ಲಿ ಇದು ಕೂಡ ವಿಭಿನ್ನವಾಗಿಯೇ ಗುರುತಿಸಿಕೊಳ್ಳುತ್ತದೆ.ಒಬ್ಬ ಬಡ ಕಲಾವಿದ ಮತ್ತು ಕಲಾವಿದನಾಗಿಯೇ ಬೆಳೆಯಬೇಕೆಂಬ ಕನಸುಗಳನ್ನು ಕಟ್ಟಿ ಕೊಂಡವನು ಕೂಡ ಹೇಗೆ ಭ್ರಷ್ಟಾಚಾರದ ಸುಳಿಯಲ್ಲಿ ಸಿಕ್ಕು, ಒಬ್ಬ ಭ್ರಷ್ಟನಾಗಿ ರೂಪು ಗೊಳ್ಳುತ್ತಾನೆ ಎನ್ನುವುದು ತುಂಬಾ ಅರ್ಥವತ್ತಾಗಿ ಕಾಣಿಸುವಂತೇ ಹೆಚ್ಚು ಮಾತಿಲ್ಲದೇ ಕೆಲವೇ ಹಾಳೆಗಳಲ್ಲಿ ಹೇಳುವ ಲೇಖಕನ ಈ ಪ್ರಯೋಗ ತುಂಬಾ ಚೆನ್ನಾಗೆ ಮೂಡಿ ಬಂದಿದೆ.'ವಿಮುಖ' ಎಂಬ ಬದಲಾವಣೆಯ ಅರ್ಥ ಉಳ್ಳ ಶೀರ್ಷಿಕೆ ಮತ್ತು 'ವಿಕಾಸ' ಎಂಬುದು ಕೂಡ ರೂಪಾಂತರ ಅಥವಾ ಬದಲಾವಣೆ ಎಂಬ ಅರ್ಥ ಬರುವ ನಾಯಕನ ಹೆಸರು ಕೂಡ ಕಥೆ ತುಂಬಾ ಹೊಂದಾಣಿಕೆ ಇರುವಂತೆ ನೋಡಿಕೊಂಡಿರುವುದು ನಿಜಕ್ಕೂ ಲೇಖಕನ ಕಥೆ ಮತ್ತು ಪಾತ್ರ ಸೃಷ್ಟಿಸುವ ಪ್ರಬುದ್ಧತೆಯನ್ನು ತೋರಿಸುತ್ತದೆ.ಪ್ರಕೃತಿಯ ವರ್ಣನೆಯಲ್ಲಂತೂ ಲೇಖಕ ಸ್ವಲ್ಪ ವಿಭಿನ್ನವಾಗಿಯೇ ಚಿಂತಿಸಿರುವುದನ್ನು ಗಮನಿಸಬಹುದು ಉದಾ: "ಇತ್ತ ಜೇಡವೊಂದು ತನ್ನ ಬಲೆಯನ್ನು ಸರಿಪಡಿಸುತ್ತಾ, ಗಾಳಿಗೆ ಅಲುಗಾಡುತ್ತಾ ಉಯ್ಯಾಲೆಯಾಡುತ್ತೊದೆ. ಆ ಜೇಡರಬಲೆಯನ್ನು ಸಹ ಇಬ್ಬನಿ ಮುತ್ತಿ ಮತ್ತಿನ ಮಣಿಗಳಂತೆ ಹೊಳೆಯುತ್ತಿದೆ." ಜೇಡರ ಬಲೆಯ ಜೊತೆ ಮಂಜಿನ ಹನಿಗಳನ್ನು ವರ್ಣಿಸಿರುವುದು ತುಂಬಾ ಚೆಂದಾ ಕಾಣುತ್ತದೆ, ಮತ್ತು ಓದುಗನಿಗೂ ಆ ಮುಂಜಾನೆಯ ಚಿತ್ರ ಕಣ್ಮುಂದೆ ಬರದೇ ಇರಲಾರದು. ಮತ್ತು " ಸೌಂದರ್ಯವೆಂದು ಭಾವುಕನಾಗಿ ಮೈಮರೆತು ನೋಡುತ್ತಿದ್ದ ಜೇಡರಬಲೆಗಳ ಮೇಲೆ ಕಿಡಿಕಿಡಿಯಾಗುವಂತಾಯಿತು." ಎಂಬ ಸಾಲು ಕೂಡ ಮೇಲಿನ ವರ್ಣನೆಗೆ ಪುಷ್ಟಿ ಕೊಡುವ ಕೆಲಸವನ್ನೇ ಮಾಡುತ್ತದೆ.ಮತ್ತು ಯಾವುದೇ ಒಂದು ವಸ್ತು ತುಂಬಾ ಇಷ್ಟವಾಗಿದ್ದರೂ ಅದರಿಂದಲೇ ಕೆಲಸ ಕೆಡುವುದರಿಂದ ತುಂಬಾ ಕಿರಿಕಿರಿ ಆಗುವುದರಲ್ಲಿ ಸಂಶಯ ಇಲ್ಲ. ಉದಾ: ನಿಮ್ಮ ಮುದ್ದಾದ ಮಗು ನಿಮ್ಮ ಕೆಲಸಕ್ಕೆ ಅಡ್ಡಿ ಮಾಡಿ ನಿಮ್ಮ ಕೆಲಸದ ಫೈಲ್ ಮೇಲೆ ನೀರು ಚೆಲ್ಲಿತೆಂದರೇ ಕಿರಿಕಿರಿ ಆಗೇ ಆಗುತ್ತದೆ.ಎಮ್ಮೆ ಮಾರಿ ತಿಂಗಳ ಖರ್ಚಿಗೆ ಸರಿ ಮಾಡಿ ಕೆಲಸಕ್ಕೆ ಸೇರುವುದನ್ನು ಕೂಡ ಅಷ್ಟೆ ಚೆನ್ನಾಗಿ ಹೇಳಿರುವುದು ಮತ್ತು ಅದನ್ನೇ ಆಧಾರವಾಗಿಟ್ಟುಕೊಂಡು ಜೀವನ ಮಾಡುತ್ತಿದ್ದ ತಾಯಿ ದುಖಃ ತುಂಬಿದ ಕಣ್ಣುಗಳಲ್ಲೇ ನಗುತ್ತಾ ಕಳಿಸುವುದು ಓದುಗನ ಮನಕಲುಕವಂತೆ ಮಾಡುವಲ್ಲಿ ಲೇಖಕ ಯಶಸ್ವಿ ಆಗುತ್ತಾನೆ.ಬಿರಿಯಾನಿ ತಿನ್ನುವ ಬಯಕೆಯಲ್ಲಿ, ದೊಸೆ ತಿಂದು ಬರುವುದು, ಮಂಗಳೂರಿನ ಪ್ರಕೃತಿ ಪರಿಸರಗಳನ್ನು ನೋಡಿದಾಗ ಅವನ ಮನದಲ್ಲಿ ಹುಟ್ಟುವ ಭಾವನೆಳಂತು ತುಂಬಾ ಅದ್ಬುತವಾಗಿ ಬಂದಿದ್ದು, ಲೇಖಕನೇ ಅನುಭವಿಸಿ ಬರೆದಂತೆ ತೋಚುವುದು, ಮತ್ತು ಓದುಗನನ್ನು ಕೂಡ ಇಡಿದಿಡುವಂತ ಸಾಲುಗಳು.ಮತ್ತು ದುಡ್ಡು ಹೆಚ್ಚಿದಂತೆ ನಾಯಕ ಜಿಪುಣ ಬೆಳೆಯತೊಡಗುವುದು, ಹರಿದ ಚಪ್ಪಲಿಗೆ ಹೊಲಿಗೆ ಹಾಕಿಸಿ ನಡೆಯುವುದು, ದುಡ್ಡಿಗೆ ದುಡ್ಡು ಸೇರಿಸಿ ದೊಡ್ಡ ಮೊತ್ತವನ್ನು ಮಾಡುವದಷ್ಟೆ ಜೀವನ ಗುರಿ ಎಂಬಂತಾಗಿ ರೂಪುಗೊಳ್ಳುವುದು ಕೊನೆಗೆ ಅವನ ಗುರಿಯನ್ನು ಮರೆತು ಭ್ರಷ್ಟಾಚಾರವನ್ನೇ ಜೀವನವನ್ನಾಗಿ ಮಾಡಿಕೊಳ್ಳುವುದು ತುಂಬಾ ಅರ್ಥಗರ್ಭಿತವಾಗಿ ಹೇಳ ಹೊರಟಿರುವುದು ಜೊತೆಗೆ ಹಲವು ಸಂದೇಶಗಳನ್ನು ಸಾರುವಂತೆ ಕಥೆ ರಚನೆ ಮಾಡಿರುವುದು ಲೇಖಕನು ಕಥೆ ಹೇಳುವಲ್ಲಿ ಎಷ್ಟು ನಿಪುಣ ಎನ್ನುವುದನ್ನು ನೋಡಬಹುದು.ಇಷ್ಟಾಗಿಯೂ ಕೆಲವೇ ಕೆಲವು ನ್ಯೂನತೆಗಳಿಂದ ಓದಿದ ಎಲ್ಲರನ್ನೂ ಸೆಳೆಯುವಲ್ಲಿ ಸ್ವಲ್ಪ ಕಷ್ಟ ಸಾಧ್ಯವಾಗಿ ಕಾಣುತ್ತದೆ.ಕಲಾವಿದ ಕಲಾವಿದನಾಗೆ ಬೆಳೆಯಬೇಕೇನಿಲ್ಲ, ಎಲ್ಲರೂ ಮಾಡುವುದು ದುಡ್ಡು ಮತ್ತು ಹೊಟ್ಟೆಗಾಗಿಯೇ ಆದ್ದರಿಂದ ಬದಲಾವಣೆಯ ಅಗತ್ಯ ಕಂಡಿತ ಇದೆ ಎನ್ನುವ ಮನಸ್ಸಿನವರಿಗೆ ಈ ಕಥೆಯ ಸಾರ ಅಷ್ಟು ಸುಲಭವಾಗಿ ತಾಗಲಾರದು. ಹೆಣ ಹೊರುವವನಿಗೆ ಇಂದೆ ಆದರೇನು, ಮುಂದೆ ಆದರೇನು, ಕೆಲಸ ಮಾಡಿದರೇ ಜೀವನ ಅದಲ್ಲದೇ ಚಿತ್ರಕಲೆಯ ಮಹತ್ವ ತಿಳಿಯದ ಕೆಲವರಿಗೆ ಈ ಕಥೆಯ ವಿಸ್ತಾರ ಮತ್ತು ಆಳ ತಿಳಿಯದು.ಮಂಗಳೂರು ಮತ್ತು ಹಾಸನದ ಕೆಲ ಸಂಸ್ಕತಿಯನ್ನು ತೀರ ಕಥೆಯ ಒಳಹೊಕ್ಕು ನೋಡಿದಾಗ ಮಾತ್ರ ತಿಳಿಯ ಬಹುದು, ಕಥೆಯನ್ನು ಸಣ್ಣ ಕಥೆಯನ್ನಾಗೆ ಬರಿಯಬೇಕು, ಒಂದೇ ಗುಕ್ಕಿನಲ್ಲಿ ಓದಿ ಮುಗಿಸುವಂತೆ ಬರೆಯಬೇಕೆಂದು, ಮತ್ತು ಲೇಖಕನು ಒಂದೆ ಗುಕ್ಕಿನಲ್ಲಿ ಬರೆದು ಮುಂದಿಟ್ಟಿರುವಂತೆ ಭಾಸವಾಗುತ್ತದೆ.ಮತ್ತು ಸ್ಹೇಹಿತನ ಭೇಟಿ ಮತ್ತು ಮಂಗಳೂರಿನ ಆಗಮನ ಹಾಗು ಕೆಲವಾರು ಕಡೆ ಓದುಗನನ್ನು ಇಡಿದಿಡುವಲ್ಲಿ ದುರ್ಬಲಗೊಳ್ಳುತ್ತವೆ. ಮತ್ತು ಕಥೆಯ ನಿರೂಪಣೆಯನ್ನೂ ಸಾರಸಗಟಾಗಿ ಹೇಳದೇ, ರೂಪಕಗಳನ್ನು ಬಳಸಿದ್ದರೆ ತುಂಬಾ ಚೆಂದ ಇತ್ತೆಂದು ಹೇಳಬಹುದು. ಮತ್ತು ಕಥೆಯಲ್ಲಿ ಹಾಸ್ಯವೂ ಸ್ವಲ್ಪ ಹಾಸುಹೊಕ್ಕಾಗುವಂತೆ ನೋಡಿಕೊಂಡಿದ್ದರೇ ಒದುಗನನ್ನು ಇನ್ನು ಹೆಚ್ಚಾಗಿ ಆವರಿಸಿಕೊಂಡು ಓದಿಸಿ ಕೊಳ್ಳುತ್ತಿತ್ತು ಎಂದು ಹೇಳಬಹುದು.ನ್ಯೂನತೆಗಳನ್ನು ಬದಿಗಿಟ್ಟು ಒಟ್ಟಾರೆಯಾಗಿ ಕಥೆಯನ್ನು ಓದಿದಾಗ ಓದುಗನಿಗೊಂದು ಸಂದೇಶ ಮತ್ತು ಓದುಗನ ಮನಸ್ಸಿನಾಳದ ಆದರ್ಶಗಳನ್ನು ಕೆಣಕಿ ಮೇಲೆತ್ತುವುದಂತೂ ಕಂಡಿತ.ವ್ಯಕ್ತಿ ಧನದಾಯಿ ಆದಂತೆ ಅವನ ಅದರ್ಶ, ನಡವಳಿಕೆ, ಕನಸುಗಳು ಹೇಗೆಲ್ಲಾ ಮರೆಯಾಗಿ ಕೆವಲ ಹಣ ಸಂಪಾದನೆಯನ್ನೇ ಚಟವನ್ನಾಗಿ ರೂಡಿಸಿಕೊಳ್ಳುತ್ತಾನೆ ಎಂಬುದು ತೀರಾ ವಿಷಾದನೀಯ.ಇಂತಾ ಒಂದು ಉತ್ತಮ ಸಂದೇಶವನ್ನು ಸಾರುತ್ತಾ ಮತ್ತು ಧನದಾಯಿ ವ್ಯಕ್ತಿಯನ್ನು ಬದಲಾಯಿಸಿ ಅವನಿಗೆ ಅವನ ಕನಸು ಆದರ್ಶ ಮಾರ್ಗ ತೋರುವ ಪ್ರಯತ್ನವನ್ನು ಈ ಒಂದು ಸಣ್ಣ ಕಥೆಯೊಂದಿಗೆ ನಡೆಸಿರುವ ಪ್ರಯೋಗಕ್ಕೆ ನನ್ನ ತುಂಬು ಹೃದಯದ ಶುಭಾಷಯಗಳು, ಮತ್ತು ಇಂತಾ ಸಮಾಜದ ಮೇಲೆ ಪರಿಣಾಮ ಬೀರುವ ಮತ್ತು ವಾಸ್ತವತೆಯನ್ನು ಬಿಂಬಿಸಿ ಬದಲಾವಣೆಗೆ ಹೊತ್ತು ಕೊಟ್ಟು ಬರೆಯುವ ಕಥೆ- ಕವನಗಳು ಹೆಚ್ಚಾಗಿ ಮೂಡಿ ಬರಲಿ ಎಂದು ಆಶಿಸುತ್ತೇನೆ.
ಕಥೆಯೊಳಗೆ ಅವಿತು ಕುಳಿತ ಕಥೆಗಾರ ತನ್ನ ಕೈಚಳಕ ಮೆರೆದಿದ್ದಾನೆ.. ಗೆಳೆಯ ಶರತ್ ಅದ್ಭುತವಾದ ಒಂದು ಕಥೆ ಓದಿದ ತೃಪ್ತಿ ಸಿಕ್ಕಿತು ಮನದಲ್ಲಿನ ಸಾಹಿತ್ಯ ದಾಹ ತಣಿಸಿದ ಹೆಗ್ಗಳಿಕೆ ನಿಮ್ಮದು.. ನಮ್ಮ-ನಿಮ್ಮೆಲ್ಲರೊಳಗೂ ಒಬ್ಬ ವಿಕಾಸನಿದ್ದಾನೆ ಎಂಬ ಸತ್ಯ ಅರಿವಿಗೆ ಬಂತು.. ಕಲೆಗೆ ಬೆನ್ನು ಹಾಕಿ ವಿಮುಖನಾದಂತೆ ಕಂಡರೂ ಸಮಾಜದಲ್ಲಿ ಹಣ ಮಾಡುವವನೆ ಆದರ್ಶ ವ್ಯಕ್ತಿಯಾಗುತ್ತಾನೆ ಎಂಬ ಸರಳ ಸತ್ಯವನ್ನು ಕಲಾತ್ಮಕವಾಗಿ ತೆರೆದಿಟ್ಟಿದ್ದೀರಿ.. ಕಷ್ಟಗಳು ಮನುಷ್ಯನನ್ನು ಹೇಗೆ ಹಾದಿ ತಪ್ಪಿಸುತ್ತವೆ ಎಂಬ ನಿರೂಪಣೆಯೊಂದಿಗೆ ಅನಾಥವಾದ ಕಲೆಯ ಚಿತ್ರಣ ಮನಕಲಕುತ್ತದೆ..
ಪ್ರತ್ಯುತ್ತರಅಳಿಸಿಧನ್ಯವಾದಗಳು ಗೆಳೆಯ ನಿನ್ನ ಪ್ರತಿಕ್ರಿಯೆಗೆ.
ಅಳಿಸಿಶರತ್, ತುಂಬಾ ಚೆನ್ನಗಿ ಮೂಡಿಬಂದಿದೆ ಕಥೆ, ಓದುತ್ತ, ಓದುತ್ತ, ನಾನೇ ವಿಕಾಸನಾಗಿ ಬದಲಾಗಿಬಿಟ್ಟಿದ್ದೆ. ನನಗೆ ಸಾಹಿತ್ಯದ ಜ್ಞಾನ ಅಷ್ಟೊಂದು ಇಲ್ಲ, ಹಾಗಾಗಿ, ನ್ಯೂನತೆಗಳೇನೂ ನನಗೆ ಅರ್ಥವಾಗಲಿಲ್ಲ. ಓದುಗನಾಗಿ, ತುಂಬಾ ಇಷ್ಟವಾಯಿತು. ಅಭಿನಂದನೆಗಳು.
ಪ್ರತ್ಯುತ್ತರಅಳಿಸಿ