ಶನಿವಾರ, ಏಪ್ರಿಲ್ 13, 2013

ಹೂಗಂಧವಿನ್ನೂ ಉಳಿದೇ ಇದೆ ಕೈ ಬೆರಳುಗಳಲ್ಲಿ

ನನ್ನ ಮುದ್ದಿನ ಚಿಟ್ಟೆ…

ಏನೂ, ದುಪ್ಪಟ್ಟ ಕೊಡವಿ ನೋಡಿಕೊಳ್ಳುತ್ತಿರುವೆಯಾ? ಸಾಕ್ ಸಾಕು ಸುಮ್ನೆ ಅಟ್ಟ ಹತ್ತಿಸಿದೆ. ಆದರೂ ಪತಂಗಕ್ಕೂ ನಿಂಗೂ ತುಂಬಾನೇ ಸ್ವಾಮ್ಯ ಕಣೆ. ನಿನ್ನ ಚೆಲ್ಲುಚೆಲ್ಲಾಟ, ತರಳೆಗಳು ಪತಂಗದ ಬಣ್ಣಗಳಿಗಿಂತಲೂ ಹೆಚ್ಚು ಕಣ್ಣು ಚುಚ್ಚುತ್ತೆ. ಬಿಡು ನೀನೋ ಚಿಟ್ಟೆನ ಮೀರಿಸೋವಷ್ಟ್ ಸುಂದರಿ, ಉಬ್ಬಿಹೋಗಬೇಡ, ಅದು ನನ್ನ ಕಣ್ಣಿಗೆ ಮಾತ್ರ. ಯಾಕಂದ್ರೆ ನನ್ನ ಸ್ನೇಹಿತ ಹೇಳ್ತಿದ್ದ “ಅವಳೇನು ಚನ್ನಾಗಿದಾಳೆ ಅಂತ ಲವ್ ಮಾಡ್ತಿದಿಯೋ” ಅಂತ (ಹ್ಹಿ ಹ್ಹಿ ಹ್ಹಿ…).
ಹುಂ.., ಇರಲಿ. ಹ್ಯಾಪಿ ವೆಲೆಂಟೈನ್ಸ್ ಡೇ ಬೀ ಮೈ ವೆಲೆಂಟೈನ್. ಇದು ನಮ್ಮ 7ನೇ ವರ್ಷದ ಪ್ರೇಮಿಗಳ ದಿನ. ನಂಗೊತ್ತು ನಿನಗೆ ಕೋಪ ಬೇಜಾರು ಎರಡು ಇದೆ ಅಂತ. ಆದ್ರೇನ್ ಮಾಡ್ಲಿ. ನನ್ನ ಪರಿಸ್ಥಿತಿ ಫೋನ್ ಕೂಡ ಮಾಡೋಕಾಗದಂತ ಬೇಲಿ ಹಾಕಿದೆ. ಅಲ್ಲದೇ ಕೋಪದಲ್ಲಿ ಹೊರಡೋ ನಿನ್ನ ಧ್ವನಿಯನ್ನ ಎದುರಿಸೋಕಾಗದೆ ಪತ್ರ ಬರಿತಿದಿನಿ. ಖುಷಿವಿಷಯ ಏನಂದ್ರೆ ನಂಗೆ ಹೊಸ ಕೆಲಸ ಸಿಕ್ಕಿದೆ, ಒಳ್ಳೆ ಸಂಬಳ. ಆದ್ರೇ ನನ್ನ ಜೊಂಪೆ ಕೂದಲಿಗೆ ಕತ್ತರಿ ಬಿತ್ತು, ದಿನ ಶೇವಿಂಗ್ ಮಾಡಿಸಿಕೊಂಡೇ ಕೆಲಸಕ್ಕೆ ಹೋಗಬೇಕು. ಬಹುಶಃ ನೀನೆ ಈ ಕಂಪನಿಯವರಿಗೆ ಹೇಳಿ ಈ ರೂಲ್ಸ್ ಮಾಡ್ಸಿದಿಯೇನೋ ಅನ್ನಿಸುತ್ತೆ. “ಹಂಗೇ ಆಗಬೇಕು ನಿಂಗೆ” ಅಂತಿದೀಯ.

ರಾಸ್ಕಲ್!

ಅಂತೂ ನಿನಂದುಕೊಂಡಂಗೆ ಆಯಿತು, ಖುಷಿಪಡು. ಅಲ್ಲೆಲ್ಲೊ ಮರೆಯಲ್ಲಿ ನಿಂತು ನಿನ್ನ ದಾರಿ ಕಾದು ಬೇಕೆಂದೆ ಎದುರು ಸಿಗುವಾಗ ಅದೆನೋ ಒತ್ತಡ. ನೀನು ಸನಿಹವಾದಷ್ಟು ಹೆಜ್ಜೆಗಳು ನಡುಗುತ್ತಾ ಎದೆ ನಗಾರಿ ಬಡಿದಂತೆ ಆಗುತ್ತಿತ್ತು, ಉಸಿರಾಡಲೂ ಕೂಡ ಅದ್ಯಾಕೋ ಕಷ್ಟವಾಗುತ್ತಿದೆ ಎನ್ನಿಸುವಂತೆ. ಆಗೆಲ್ಲ ನಾನಂದುಕೊಳ್ಳುತ್ತಿದ್ದೆ. ನೀನೆನಾದರು ಆಗ ಮಾತನಾಡಿಸಿಬಿಟ್ಟರೆ ಗುಂಡಿಗೆ ನಿಂತೆಬಿಡುತ್ತದೆ ಎಂದು. ಆದರೆ ಇದೆಲ್ಲ ಹೇಗೆ ಆಯಿತೊ ನಿಜವಾಗಿಯೂ ಗೊತ್ತಾಗುತ್ತಿಲ್ಲ. ಒಮ್ಮೊಮ್ಮೆ ನನ್ನ ಮೇಲೆಯೇ ನನಗೆ ಅನುಮಾನ, ಭ್ರಮಾನಿರತನಾಗಿಬಿಟ್ಟನೇ ಎಂದು, ನಿಜವಾಗಿಯೂ ನನ್ನ ಪಕ್ಕ ಕುಳಿತಿರುತ್ತಿದ್ದುದು ನೀನು ಎಂಬುದು ಇಂದಿಗೂ ಕಾತರಿ ಇಲ್ಲ. ಮಾತಾಡಲು ಹಂಜಿಕೆಪಡುತ್ತಿದ್ದವನು ಅದೇಗೆ ನಿನ್ನ ಜೊತೆ ಕಿತ್ತಾಡುತ್ತ, ಬೈಸಿಕೊಂಡು, ಪರಚಿಸಿಕೊಂಡು ನೆಮ್ಮದಿಪಡುತ್ತಿದ್ದೆ ಎಂಬುದು ಇವೋತ್ತಿಗು ಅನುಮಾನವೇ ಕಣೆ, ಯಪ್ಪಾ ಬಜಾರಿ, ನೀನು ಮುನಿಸಿಕೊಂಡಾಗಲಂತು ತಪಸ್ಸು ಮಾಡಿದ್ದೇನೆ ಕಣೆ. ಆಡಬಾರದ ನಾಟಕಗಳನ್ನ ಆಡಿ ನಗಿಸಲು ಯತ್ನಿಸಿ ಸೋತಿದ್ದೇನೆ. ಎಷ್ಟು ಕಾಡಿಸಿದ್ದೆ ಕಣ್ಣಿರು ಹಾಕಿಸಿದ್ದೆ ನೀನು. ಸೇಡಿ ತೀರಿಸಿಕೊಳ್ಳಲು ನನ್ನೆಲ್ಲಾ ಶಕ್ತಿಯನ್ನ ಒಟ್ಟುಗೂಡಿಸಿಕೊಳ್ಳುತ್ತಿದ್ದೇನೆ. ಇವೆಲ್ಲ ಯಾಕೆ ಹೇಳುತ್ತಿದ್ದೇನೋ ಕಾಣೆ. ಇಂತ ತಿಕ್ಕಲು ಭಾವಗಳು ಪ್ರೀತಿಯಲ್ಲಿ ಮಾತ್ರವೇ ಯಾಕೆ ಇರುತ್ತದೆಯೋ ಗೊತ್ತಿಲ್ಲ ಕಣೆ.

ನೀನು ಇಲ್ಲಿಂದ ನಿಮ್ಮೂರಿಗೆ ಹೋದಮೇಲೆ ನಾವು ಅಡ್ಡಾಡಿದ ಜಾಗಗಳು ತುಂಬಾನೇ ಕಾಡಿಸೋಕೆ ಶುರು ಮಾಡಿವೆ. ಮಾಸ್ತಮ್ಮನ ಗುಡಿಯ ಹಿಂದೆ ಮೊದಲ ಬಾರಿ ನಿನ್ನ ತುಟಿಗಳನ್ನ ಕಚ್ಚಿದ ದಿನ ಕೆತ್ತಿದ್ದ ನಮ್ಮ ಹೆಸರುಗಳನ್ನ ಅಳಿಸಿಹಾಕಿದ್ದಾರೆ, ಅದೆನೋ ದೇವಸ್ಥಾನದ ಜೀರ್ಣೋದ್ಧಾರವಂತೆ. ನೀನಿದ್ದ ಮನೆಯ ಹತ್ತಿರನೂ ಹೋಗಿದ್ದೆ. ಆ ಬೀದಿ ತುಂಬೆಲ್ಲಾ ಜಾತಿ-ಜನಿವಾರಗಳ ಕೊಳಕು ಚರಂಡಿ ತುಂಬೆಲ್ಲಾ ಹರಿಯುತ್ತಿತ್ತು. ಅಕ್ಕ-ಪಕ್ಕದ ಬೇಲಿ ಹೂಗಳು ಸಹ ಸುಗಂಧ ಮರೆತುಬಿಟ್ಟಿದ್ದಾವೆ ಕಣೆ. ಇತ್ತೀಚೆಗೆ ನಮ್ಮೂರಲ್ಲಿ ಗೋಧೂಳಿ ಕಿರಣಗಳಂತೂ ಸುಡುವಷ್ಟು ಜ್ವಲಿಸುತ್ತಿವೆ. ಹೊತ್ತುಕರಗುವ ಮುನ್ನ ನಾವೂ ಅಪ್ಪಿಕೊಂಡಾಗ ಹೊಮ್ಮುತ್ತಿದ್ದ ನಿನ್ನ ಮೈಬೆವರ ಕಮಟು ಗಂಧವನ್ನ ಹುಡುಕುತ್ತಿರುತ್ತೇನೆ. “ಹಾಗಾದ್ರೆ ಮರೆತುಬಿಟ್ಟಿದ್ದೀಯಾ” ಎನ್ನಬೇಡ. ಏನುಮಾಡಲಿ, ಈ ಚರಂಡಿ ಹೊಲಸು ಊರನ್ನೇ ಆವರಿಸಿಕೊಂಡುಬಿಟ್ಟಿದೆ. ಯಾಕೋ ತುಂಬಾ ನೆನಪಾಗ್ತಿಯ ಕಣೆ. ರಾತ್ರಿಯ ನಿರವತೆ ಕಿವಿಕಚ್ಚುತಿರುತ್ತೆ. ಅಲ್ಲೆಲ್ಲೊ ನಿನ್ನ ನಗು, ಆ ಕಾಲ್ಗೆಜ್ಜೆ ಸದ್ದು ಸದ್ದಡಗಿ ಹೋಯ್ತೆನೋ ಅನ್ನಿಸುತ್ತಿರುತ್ತೆ. ಇನ್ನೂ ಕಾಯಲಾರೆ, ನಿನ್ನ ಸೇರಲೆಬೇಕೆಸಿದೆ. ಯಾವ ಕಟ್ಟುಕಟ್ಟಳೆಗಳಿಲ್ಲದ, ಅಂತಸ್ತಿನ ಅತಿ-ಮಿತಿ, ಜಾತಿಗಳ ಆಳ-ಅಡಿಗಳೂ, ಕನಿಷ್ಟ ಸರಿ-ತಪ್ಪುಗಳ ಭಯದಿಂದ ಹೊರತಾದ ಲೋಕವೊಂದಿದೆಯಂತೆ, ಅಲ್ಲಿ ಸೇರೋಣ. ನಿನ್ನ ರೆಕ್ಕೆಗಳೆಲ್ಲಿ ಸುಟ್ಟಾವೋ ಎಂಬ ಭಯಕೆ ನನ್ನ ಚೈತನ್ಯ ನಂದಿಹೋಗಿದೆ. ಕ್ಷಮಿಸೇ ಪತಂಗ. ನಿಟ್ಟುಸಿರು ಸದ್ದಡಗಿದೆ. ಕಣ್ಣಾಲಿಗಳು ತುಂಬಿ ಎಲ್ಲಾ ಮಾಸಲು ಮಾಸಲು. ನಿಲ್ಲಿಸಿಬಿಡುತ್ತೇನೆ. ಹ್ಹಾ.. ಮರೆತಿದ್ದೆ. ಎಲ್ಲರನ್ನು ಕೇಳಿದೆ ಅಂತ ಹೇಳು.

ನಿನ್ನ ಗಂಡನನ್ನೂ…

ಇಷ್ಟೆಲ್ಲಾ ಹೇಳಿದ ಮೇಲೂ ಪತ್ರವನ್ನ ಪೋಸ್ಟ್ ಮಾಡುವುದನ್ನು ಬೇಕೆಂದೆ ಮರೆತಿರುತ್ತೇನೆ. ಎಂದಿನಂತೆ ಶಪಿಸಿಕೊ.

ಕಯ್ಯಾರೆ ಕುಯ್ದು ತಂದು
ಮಾಲೆ ಕಟ್ಟಿದ ಹೂ
ಮತ್ಯಾರದೋ ಮುಡಿಯೇರಿದೆ
ಹೂಗಂಧವಿನ್ನೂ ಉಳಿದೇಯಿದೆ
ಕೈ ಬೆರಳುಗಳಲ್ಲಿ.

-ಶರತ್ ಚಕ್ರವರ್ತಿ
14-02-13

ಅಸಹಾಯ ಕೈಗಳು.

ಶಸ್ತ್ರವನ್ನು ಕೈಚೆಲ್ಲಿ ಹೊರಟವನು ಅವನು
ದೇಶ-ಕೋಶ ತ್ಯಜಿಸಿದವನಿಗೆ
ದಾರಿ ನಿರಾಳ ; ರಸ್ತೆ ಸವೆಯುವವರೆಗೆ
ನೆಟ್ಟ ದೃಷ್ಟಿಗಳಾವುವು ಅವನ ಬೆನ್ನಹತ್ತಲಿಲ್ಲ
ನಡೆದೇ ನಡೆದ
ಅನಂತ ದೃಷ್ಟಿಯಲಿ ಎದುರಿದ್ದುದ ಮರೆತ
ಕೆಂಪು ಕಂಗಳ ಹಸಿರು ನರಗಳು
ಕ್ಷೀಣತೊಡಗಿದವು

ಅತ್ತ ಅವನ ಕೋಟೆ ಉರುಳಿತ್ತು
ಮತ್ತೊಬ್ಬ ದೊರೆಗಲ್ಲಿ ಭೋಪರಾಕು
ಇವನಿಲ್ಲಿ ನಡೆಯುತ್ತಲೇ ಇದ್ದಾನೆ
ಕಾಲನೊಬ್ಬನೇ ಅವನ ಸಂಗಾತಿ
ನಿತ್ಯ ಅವರಿಗೆ ಅಡಿ ಮೂಡಿಸುವ ಆಟ
ಒಮ್ಮೆ ಅವ ಮುಂದೆ ಮತ್ತೊಮ್ಮೆ ಇವ
ಅಂತೂ ಕಾಲನ ಕಯ್ಯೇ ಮೇಲಾಯಿತು
ಮುಪ್ಪಿನಪ್ಪುಗೆ ಮುತ್ತಿಡುತ್ತಿತ್ತು
ಕುಸಿದು ಬಿದ್ದವನ ಕಣ್ಣಿಗೆ ಕಾಡಿದೇ
ಅವನದೇ ಭೂತ ; ಮರೆವನ್ನರಸಿ
ದಾರಿ ಸವೆಸಿದವನ ಮುಂದೆ ನೆನಪುಗಳ ಜಾತ್ರೆ

ನಾರುತ್ತಿದೆ ಮುಳ್ಳುಚುಚ್ಚಿ ಕೊಳೆತ ಹುಣ್ಣು
ಮುಡಿಯ ತುಂಬಾ ಜಡೆಯ ಜಡ್ಡು
ಕಾಲನಿಗೆ ಸಡ್ಡು ಹೊಡೆದ ಕ್ರೂರ ಕಣ್ಗಳು
ನಿರ್ವೀರ್ಯ ಪರಿತ್ಯಾಗಿಯ ಕಂಡು ಗೊರವಗಳು ನಕ್ಕಿವೆ
ಬಿದ್ದವನ ಹೊತ್ತು ನಡೆಯಲು ಕಾಲನೇನೋ ಕಾತರ
ಅನ್ವೇಷಕನ ಕಣ್ಗಳ ಕಲ್ಪಿಸುತ್ತಾ ಕುಳಿತ
ಕವಿ ಬೆವರುತ್ತಾನೆ
ಅಸಹಾಯಕ ಕೈಗಳು ಬರೆಯತೊಡುಗುತ್ತವೆ.

-ಶರತ್ ಚಕ್ರವರ್ತಿ.
02-04-13

ಸೋಮವಾರ, ಡಿಸೆಂಬರ್ 10, 2012

ಹಡೆದವಳು

ಅಬ್ಬರಿಸಿ ಗೀಳಿಡುವ ಕಡಲಲಿ 
ಹುಟ್ಟಿಲ್ಲದ ದೋಣಿಗೆ ಅಂಬಿಗಳು
ಅಂಬೆಗಾಲಿಗೆ ನೆಲ ಗೀರದಂತೆ
ಅಂಗಳವ ಕಾದಳು
ರಕ್ತಬಸಿದು ಅಮೃತ ಎರೆದಳು 
ಗುಳಿ ಕೆನ್ನೆ ಕಂಡು
ಕಣ್ಣೀರ ಮರೆತವಳು
ಹಡೆದವಳು
; ಹೊತ್ತು ನಡೆದ ತೇರವಳು.

ಬರಬಂದು ಬಿರುಬಿಟ್ಟ ನೆಲದಲಿ 
ಚೇತನ ತುಂಬಿದ ಮಳೆಯವಳು
ಮೂಲೆ ಮೊಡಕುಗಳ ನೀವಿ 
ಅಂದಕೊಟ್ಟಳು
ಹೊತ್ತಿನ ಕೂಳು ಅರಿಕೆ
ಆದಿತೆಂದು ವ್ರತವೆಂದಳು
ದೃಷ್ಟರ ದೃಷ್ಟಿಗೆ ಬೆಂಕಿಯಿಟ್ಟು
ಲಟಿಕೆ ಮುರಿದವಳು
ನೆಲೆ ಅವಳು 
;ನನ್ನ ತಲೆ ಮೇಲಣ ಸೂರವಳು.

ಕೇಳಿದೆಲ್ಲವ ನೀಡುತಾ
ಮಾಡಿದೆಲ್ಲವ ಸಹನೆಯಲಿ ಸಹಿಸುವ 
ಧರೆಯವಳು
ನಗುವ ನನ್ನ ಮುಖವಾಡವ ಕಂಡು 
ನೆಮ್ಮದಿಯ ನಿಟ್ಟುಸಿರಾದವಳು
ನಾ ಸೋತುನಿಂತ ಪಂದ್ಯವೇ ತಪ್ಪೆಂದು 
ಹೀಗಳೆದವಳು
ಉತ್ಸಾಹದಲ್ಲಿ ನಾ ಕೆಮ್ಮಿದನ್ನೂ
ಚೆಂದದ ಕವಿತೆ ಎಂದವಳು
ಮರೆಯಲೇ ಹನಿಗಣ್ಣ ತೀಡಿ
ನಗುವವಳು 
ತನ್ನ ಬೊಗಸೆಯಲೇ ಈ ಬದುಕ ತುಂಬಿಕೊಟ್ಟ 
ತಾಯವಳು ; ನನ್ನ ತಾಯವಳು.



-ಶರತ್ ಚಕ್ರವರ್ತಿ.

ಯುಗಾದಿ

ಹೂದೋಟ ; ನೂರಾರು ಹೂ ಗಿಡಗಳ ನಡುವೆ
ಬಣ್ಣ-ಆಕಾರ ಕನಿಷ್ಟ ಸುಗಂಧವೂ ಇಲ್ಲದ
ಹೂವು ಅದು ; ಹೆಸರಿಗೆ ಮಾತ್ರ
ಚಂದದ ಹಸಿರು ಬಳೆಯ ಕೈಗಳು ಮುರಿದವು
ಓರಗೆ ಹೂಗಳ ಕುತ್ತಿಗೆಯ ; ಕಟ್ಟಿದರು ಮಾಲೆಯ
ಅವಲಕ್ಷಣವೇ ಮೈತಳೆದ ಹೂ
ತಾಕಲಿಲ್ಲ ಯಾರ ಕಣ್ಣಿಗು ; ಯಾರ ಕೈಗು
ಉಸ್ಸೆಂದು ಉಸಿರು ಬಿಟ್ಟಿತು
ನಿರಾಳ ; ಮರುಕ್ಷಣ ತಲ್ಲಣ
ನನ್ನೇಕೆ ಮುರಿಯಲಿಲ್ಲ ; ಕಟ್ಟಲಿಲ್ಲ.

ಓರಗೆಯವರೊಬ್ಬರೂ ಉಳಿದಿಲ್ಲ
ಅರಳುಗಣ್ಣುಗಳ ಅರಳಿಸುತ್ತಿರೋ ಹಸುಗೂಸುಗಳನ್ನೂ
ಬಿಡಲಿಲ್ಲ ; ನನ್ನೇಕೆ ಮುಟ್ಟಲಿಲ್ಲ
ಸುತ್ತ ಹಾಡಿ ನಗುತ್ತಿದ್ದ ಗಂಧವೆಲ್ಲಾ ಮಾಲೆಯಾಗಿ
ಸೇರಿದವು ದೇವರ ಗುಡಿಗೊ
ಮತ್ಯಾರದ ಮುಡಿಗೊ ; ಸತ್ತವರೆಡೆಗೊ
ಇಲ್ಲಿ ಮತ್ತದೇ ಪ್ರಶ್ನೆ ; ನನ್ನೇಕೆ ಮುಟ್ಟಲಿಲ್ಲ

ಕುತ್ತಿಗೆ ಮುರಿಸಿಕೊಂಡು ಮಾಲೆಯಾಗಿ ಮೆರೆದು
ಕಸವಾಗಿ ಮುದುಡಿ ಕೊಳೆತು ಗಂಧ ಕಳೆದು
ದುರ್ಗಂಧವೂ ಮುಗಿಯಿತು ; ನನ್ನೇಕೆ ಮುಟ್ಟಲಿಲ್ಲ
ಪಾಲ್ಗುಣನು ಬಂದಾಗ ತಲೆಕೊಡವಿ ನಿಂತ
ಮರಗಳೆಲ್ಲ ಬೋಳು ; ಉದುರಿದೆ ನಿರ್ಗಂಧ
ಹಪಹಪಿಸಿದೆ ; ಪರಿಪರಿ ಬೇಡಿದೆ
ದಾರಿಹೋಕನೇ ಇನ್ನಾದರೂ ತುಳಿದು ಹೋಗು
ದೊರಕಲಿ ಜೀವನ್ಮುಕ್ತಿ
ಮೂಡಲ ಗಾಳಿ ಬೀಸಿದೆ
ಮತ್ತೆಲ್ಲೋ ಹಾರಿದೆ ; ಇನ್ನೂ ಯಾರು ತುಳಿದಿಲ್ಲ.

ಪಾಳಿ ನೆನೆದು ದಢಬಡಿಸಿ ಬಂದ ಚೈತ್ರನಿಗೆ
ಮೈಯೆಲ್ಲಾ ಹಸುರು ; ಇಬ್ಬನಿಯ ಬೆವರಬಿಂದು
ಗೂಡುಬಿಟ್ಟು ದಾರಿ ಮರೆತಿದ್ದ ಬಳಗವೆಲ್ಲಾ
ಹಿಂದಿರುಗಿ ಚಿಯ್-ಚುಯ್ ಗುಡುತ್ತಿವೆ
ಬರಬೇಗೆ ಕಳೆದು ಚಿಗುರೆಲೆಗೂ ಸ್ವಾಗತ
ಮತ್ತದೇ ಹೂದೋಟ ; ಮತ್ತವೇ ಹೂ ಗಿಡಗಳ ನಡುವೆ…
ಹುಡುಕಲಾರದೇ ಕೈಚೆಲ್ಲಿದ್ದೇನೆ ; ಅರ್ಥದ ವ್ಯರ್ಥವನ್ನರಿತು.


-ಶರತ್ ಚಕ್ರವರ್ತಿ.

ಶುಕ್ರವಾರ, ಡಿಸೆಂಬರ್ 7, 2012

ತ್ರಿಶಂಕು

ಮೇಘನು ಒಮ್ಮೊಮ್ಮೆ ನಗುತ್ತಾನೆ ; ಮಳೆ ಸುರಿಸಿ
ಕೆಲವೊಮ್ಮೆ ಬಿಕ್ಕಳಿಸುತ್ತಾನೆ
ಮಳೆ ಸುರಿಸುತ್ತಲೆ
ಮತ್ತೂ ಒಮ್ಮೆ ಮಂಕಾಗುತ್ತಾನೆ
ಮರುಳನಾಗುತ್ತಾನೆ
ತಲೆ ಕೆದರಿ ಹುಚ್ಚನಾಗುತ್ತಾನೆ

ಮರುಭೂಮಿಯಲಿ ಅತ್ತು
ಮಲ್ಲಿಗೆ ನಗು ಅರಳಿಸುತ್ತಾನೆ
ದಾರಿಗಳಿಲ್ಲದೆಡೆ ತೂರಿಕೊಳ್ಳುತ್ತಾನೆ
ದಿಗಂಬರನಾಗುತ್ತಾನೆ
ಒಮ್ಮೆ ಬೀಗುತ್ತಾ ಒಮ್ಮೆ ಭಾಗುತ್ತಾ
ಮತ್ತೊಮ್ಮೆ ಬೇಗೆಯಲಿ ಬಳಲುತ್ತಾನೆ

ನೆನೆ-ನೆನೆದು ತಣಿಯುತ್ತಾನೆ
ತೆರೆದುಕೊಂಡು ಮುಕ್ತನಾಗುತ್ತಾನೆ
ಅರಳದೇ ನರಳಿ ಮರಳುತ್ತಾನೆ
ಕಿಚ್ಚಾಗುತ್ತಾನೆ-ಪೆಚ್ಚಾಗುತ್ತಾನೆ
ಸ್ವಚ್ಚನಾಗಲು ಹೋಗಿ ಸ್ವೇಚ್ಚನಾಗುತ್ತಾನೆ
ಅತ್ತ ಅರಳದೇ ಇತ್ತ ಉರುಳದೆ
ನಡುವಲ್ಲೇ ನಡುವಾಗಿ ನೋಯುತ್ತಾನೆ

ದಣಿಯುತ್ತಾನೆ ತೀರದಲಿ ಚಿಪ್ಪಾಗುತ್ತಾನೆ
ಕೆರಳೋ ಅಲೆಗಳಲಿ ಕುಣಿಯುತ್ತಾನೆ
ಬೆಂಕಿ ಕೆಂಡ-ಕೊಂಡಗಳಲಿ ಉರಿಯುತ್ತಾನೆ
ಅಸ್ಥಿ ಅಸ್ಥಿತ್ವಗಳ ಸುಟ್ಟುಕೊಂಡರೂ
ಕೊನೆಯಾಗದೇ ಉಳಿಯುತ್ತಾನೆ.

-ಶರತ್ ಚಕ್ರವರ್ತಿ.

15-04-2012

ಬುಧವಾರ, ಡಿಸೆಂಬರ್ 5, 2012

ಕತ್ತಲು

ಇಲ್ಲೆಲ್ಲಾ ಕತ್ತಲುಮಳೆ ನಿಂತು ಮಣ್ಗವಲು
ಚಿಟ್ರಿಡಿಸೋ ಚೀರುಳಗಳ ಗುನುಗು

ಅಲ್ಲಲ್ಲಿ ಇಣುಕಿದೆ
ಬೆಳಕಿನುಳಗಳು ಸುತ್ತಲು
ಕಾಣದಿದೆ ಕತ್ತಲಲಿ
ಬರಿ ಮೈಯ್ಯ ಬೆತ್ತಲು
ಬೆಳಕಿನೂರ ದಾರಿ ಕಳೆದು
ಅತ್ತ ಇತ್ತ ಸುತ್ತ
ಎತ್ತೆತ್ತಲೂ ಕತ್ತಲು

ಕತ್ತಲ ಕಲಕಲಕಿ
ಮೂಡಿದೆ ಕತ್ತಲಾಕೃತಿ
ತೆರೆಮರೆಗಳು ಬೇಕಿಲ್ಲ
ಬೆಳಕಿನ ಬಣ್ಣಗಳರಿವಿಲ್ಲ
ಸರಳಸುಂದರವೀ ಕತ್ತಲು
ಕತ್ತಲ ದಾರಿ ಕತ್ತಲ ಪಯಣ
ಕತ್ತಲಿನೂರ ದೊರೆಯೇ ಕತ್ತಲು
ಸಭ್ಯ ಸೊಬಗಿನ ನವ್ಯ ಬಗೆಗಿನ
ಸೊಗಡೇ ಕತ್ತಲು
ದಿವ್ಯ ಜ್ಞಾನದ ಹೊಳಹೇ ಕತ್ತಲು

ಅಂಧರನರಿತು ಮರುಗಿ ಅಂಧಾಗಿದೆ
ಮೂಗನೆದೆಯ ರಾಗಗತ್ತಲು
ಕಿವುಡನಾಳದ ಮೌನಗತ್ತಲು
ನನ್ನೆದೆಯ ಮರುಳಗತ್ತಲು
ಕತ್ತಲಿಗೆ ಕತ್ತಲೇ ಸುತ್ತಲು
ಕತ್ತಲಿಗೆ ಕತ್ತಲೇ ಎತ್ತೆತಲು

-ಶರತ್ ಚಕ್ರವರ್ತಿ.
20-06-12

ಮಂಗಳವಾರ, ಡಿಸೆಂಬರ್ 4, 2012

ಕವಿತೆಯೆಂದರೆ..

ಕವಿತೆಯೆಂದರೆ ಮಾತು; ಚಂದದ ಮಾತು
ಮಾತಿಗಿಂತ ಮೌನ ಚಂದ
ಹಾಗಾದರೇ ಮೌನವೊಂದು ಕವಿತೆಯೇ!?

ಸ್ವರ ಕರಗಿ ಶೃತಿ ಮರೆತು

ಲಯ ಕಾಣದೇ ಹರಿದರೂ
ಮೌನವು ಚಂದವೇ
ಎಲ್ಲಿಯೂ ಉಕ್ಕದೇ
ಕೆಲವೆಡೆಯಲ್ಲೂ ಬಿಕ್ಕದೇ
ಕ್ಷಿತಿಜದ ಹೊಳಹು ಹೊಳೆಯದ
ಮೌನವೂ ಕೂಡ ಚಂದವೇ
; ಚಂದದ ಕವಿತೆಯೇ!?

ಮುತ್ತಾಗಿಸೋ ಮಾತು ಹರಿದು

ಕೂಡಿ ಕವಿತೆಯಾಗುವ ಸಲುವೆ
ಮೌನದ ಕುತ್ತಿಗೆ ಹಿಸುಕಿರೇ
ಉದುರಿವೆ ಮಾತುಗಳು
ಮುತ್ತುಗಳು; ಚಂದದ ಕವಿತೆಗಳು

ಹರಡಿ ತಿವಿದು ಹುಡುಕದಿರಿ

ಶೃತಿ - ಲಯ - ತಾಳ
ಬೆತ್ತಲ ಸಿರಿಯೇ ಅಂದ
ಸಿಂಗಾರದ ಸೊಬಗಿಗಿಂತ.


-ಶರತ್ ಚಕ್ರವರ್ತಿ.
16-06-12