ಸೋಮವಾರ, ಡಿಸೆಂಬರ್ 10, 2012

ಹಡೆದವಳು

ಅಬ್ಬರಿಸಿ ಗೀಳಿಡುವ ಕಡಲಲಿ 
ಹುಟ್ಟಿಲ್ಲದ ದೋಣಿಗೆ ಅಂಬಿಗಳು
ಅಂಬೆಗಾಲಿಗೆ ನೆಲ ಗೀರದಂತೆ
ಅಂಗಳವ ಕಾದಳು
ರಕ್ತಬಸಿದು ಅಮೃತ ಎರೆದಳು 
ಗುಳಿ ಕೆನ್ನೆ ಕಂಡು
ಕಣ್ಣೀರ ಮರೆತವಳು
ಹಡೆದವಳು
; ಹೊತ್ತು ನಡೆದ ತೇರವಳು.

ಬರಬಂದು ಬಿರುಬಿಟ್ಟ ನೆಲದಲಿ 
ಚೇತನ ತುಂಬಿದ ಮಳೆಯವಳು
ಮೂಲೆ ಮೊಡಕುಗಳ ನೀವಿ 
ಅಂದಕೊಟ್ಟಳು
ಹೊತ್ತಿನ ಕೂಳು ಅರಿಕೆ
ಆದಿತೆಂದು ವ್ರತವೆಂದಳು
ದೃಷ್ಟರ ದೃಷ್ಟಿಗೆ ಬೆಂಕಿಯಿಟ್ಟು
ಲಟಿಕೆ ಮುರಿದವಳು
ನೆಲೆ ಅವಳು 
;ನನ್ನ ತಲೆ ಮೇಲಣ ಸೂರವಳು.

ಕೇಳಿದೆಲ್ಲವ ನೀಡುತಾ
ಮಾಡಿದೆಲ್ಲವ ಸಹನೆಯಲಿ ಸಹಿಸುವ 
ಧರೆಯವಳು
ನಗುವ ನನ್ನ ಮುಖವಾಡವ ಕಂಡು 
ನೆಮ್ಮದಿಯ ನಿಟ್ಟುಸಿರಾದವಳು
ನಾ ಸೋತುನಿಂತ ಪಂದ್ಯವೇ ತಪ್ಪೆಂದು 
ಹೀಗಳೆದವಳು
ಉತ್ಸಾಹದಲ್ಲಿ ನಾ ಕೆಮ್ಮಿದನ್ನೂ
ಚೆಂದದ ಕವಿತೆ ಎಂದವಳು
ಮರೆಯಲೇ ಹನಿಗಣ್ಣ ತೀಡಿ
ನಗುವವಳು 
ತನ್ನ ಬೊಗಸೆಯಲೇ ಈ ಬದುಕ ತುಂಬಿಕೊಟ್ಟ 
ತಾಯವಳು ; ನನ್ನ ತಾಯವಳು.



-ಶರತ್ ಚಕ್ರವರ್ತಿ.

6 ಕಾಮೆಂಟ್‌ಗಳು:

  1. ಅಮ್ಮಾ ಎಂದರೆನೇ ಪುಳಕ ಒಂದು ರೀತಿ.. ಶರತ್ ನಿಮ್ಮ ಅಮ್ಮನ ಪ್ರೀತಿ, ಅವರ ಮೇಲಿನ ಭಾವನೆಗಳ ಸಾಲುಗಳು ಸುಂದರವಾಗಿವೆ. ನಿಮ್ಮ ಅಮ್ಮನವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿ. ನಿಮ್ಮ ಮನೆಯಲ್ಲಿ ("ಹೊತ್ತು ನಡೆದ ತೇರವಳು") ತೇರು ಪಲ್ಲಕ್ಕಿಗಳ ಹಬ್ಬ ಆಚರಣೆ ಜೋರಗಲಿ.
    -ಸುಗುಣ ಮಹೇಶ್

    ಪ್ರತ್ಯುತ್ತರಅಳಿಸಿ
  2. ಅತಿ ಸುಂದರ ಅಭಿವ್ಯಕ್ತಿ ಹಾಗೂ ತಾಯಿಗೆ ನಮನ ಸಲ್ಲಿಸುವ ಪರಿ ಅತ್ಯದ್ಭುತ, ಅಮೋಘ !!! ಹೀಗೆ ಬೆಳೆಯುತ್ತಿರಲಿ ನಿನ್ನ ಕವಿತಾ ಹಂದರ !!!

    ಪ್ರತ್ಯುತ್ತರಅಳಿಸಿ
  3. ಅತಿ ಸುಂದರ ಅಭಿವ್ಯಕ್ತಿ ಹಾಗೂ ತಾಯಿಗೆ ನಮನ ಸಲ್ಲಿಸುವ ಪರಿ ಅತ್ಯದ್ಭುತ, ಅಮೋಘ !!! ಹೀಗೆ ಬೆಳೆಯುತ್ತಿರಲಿ ನಿನ್ನ ಕವಿತಾ ಹಂದರ !!!

    ಪ್ರತ್ಯುತ್ತರಅಳಿಸಿ