ಶನಿವಾರ, ಏಪ್ರಿಲ್ 13, 2013

ಹೂಗಂಧವಿನ್ನೂ ಉಳಿದೇ ಇದೆ ಕೈ ಬೆರಳುಗಳಲ್ಲಿ

ನನ್ನ ಮುದ್ದಿನ ಚಿಟ್ಟೆ…

ಏನೂ, ದುಪ್ಪಟ್ಟ ಕೊಡವಿ ನೋಡಿಕೊಳ್ಳುತ್ತಿರುವೆಯಾ? ಸಾಕ್ ಸಾಕು ಸುಮ್ನೆ ಅಟ್ಟ ಹತ್ತಿಸಿದೆ. ಆದರೂ ಪತಂಗಕ್ಕೂ ನಿಂಗೂ ತುಂಬಾನೇ ಸ್ವಾಮ್ಯ ಕಣೆ. ನಿನ್ನ ಚೆಲ್ಲುಚೆಲ್ಲಾಟ, ತರಳೆಗಳು ಪತಂಗದ ಬಣ್ಣಗಳಿಗಿಂತಲೂ ಹೆಚ್ಚು ಕಣ್ಣು ಚುಚ್ಚುತ್ತೆ. ಬಿಡು ನೀನೋ ಚಿಟ್ಟೆನ ಮೀರಿಸೋವಷ್ಟ್ ಸುಂದರಿ, ಉಬ್ಬಿಹೋಗಬೇಡ, ಅದು ನನ್ನ ಕಣ್ಣಿಗೆ ಮಾತ್ರ. ಯಾಕಂದ್ರೆ ನನ್ನ ಸ್ನೇಹಿತ ಹೇಳ್ತಿದ್ದ “ಅವಳೇನು ಚನ್ನಾಗಿದಾಳೆ ಅಂತ ಲವ್ ಮಾಡ್ತಿದಿಯೋ” ಅಂತ (ಹ್ಹಿ ಹ್ಹಿ ಹ್ಹಿ…).
ಹುಂ.., ಇರಲಿ. ಹ್ಯಾಪಿ ವೆಲೆಂಟೈನ್ಸ್ ಡೇ ಬೀ ಮೈ ವೆಲೆಂಟೈನ್. ಇದು ನಮ್ಮ 7ನೇ ವರ್ಷದ ಪ್ರೇಮಿಗಳ ದಿನ. ನಂಗೊತ್ತು ನಿನಗೆ ಕೋಪ ಬೇಜಾರು ಎರಡು ಇದೆ ಅಂತ. ಆದ್ರೇನ್ ಮಾಡ್ಲಿ. ನನ್ನ ಪರಿಸ್ಥಿತಿ ಫೋನ್ ಕೂಡ ಮಾಡೋಕಾಗದಂತ ಬೇಲಿ ಹಾಕಿದೆ. ಅಲ್ಲದೇ ಕೋಪದಲ್ಲಿ ಹೊರಡೋ ನಿನ್ನ ಧ್ವನಿಯನ್ನ ಎದುರಿಸೋಕಾಗದೆ ಪತ್ರ ಬರಿತಿದಿನಿ. ಖುಷಿವಿಷಯ ಏನಂದ್ರೆ ನಂಗೆ ಹೊಸ ಕೆಲಸ ಸಿಕ್ಕಿದೆ, ಒಳ್ಳೆ ಸಂಬಳ. ಆದ್ರೇ ನನ್ನ ಜೊಂಪೆ ಕೂದಲಿಗೆ ಕತ್ತರಿ ಬಿತ್ತು, ದಿನ ಶೇವಿಂಗ್ ಮಾಡಿಸಿಕೊಂಡೇ ಕೆಲಸಕ್ಕೆ ಹೋಗಬೇಕು. ಬಹುಶಃ ನೀನೆ ಈ ಕಂಪನಿಯವರಿಗೆ ಹೇಳಿ ಈ ರೂಲ್ಸ್ ಮಾಡ್ಸಿದಿಯೇನೋ ಅನ್ನಿಸುತ್ತೆ. “ಹಂಗೇ ಆಗಬೇಕು ನಿಂಗೆ” ಅಂತಿದೀಯ.

ರಾಸ್ಕಲ್!

ಅಂತೂ ನಿನಂದುಕೊಂಡಂಗೆ ಆಯಿತು, ಖುಷಿಪಡು. ಅಲ್ಲೆಲ್ಲೊ ಮರೆಯಲ್ಲಿ ನಿಂತು ನಿನ್ನ ದಾರಿ ಕಾದು ಬೇಕೆಂದೆ ಎದುರು ಸಿಗುವಾಗ ಅದೆನೋ ಒತ್ತಡ. ನೀನು ಸನಿಹವಾದಷ್ಟು ಹೆಜ್ಜೆಗಳು ನಡುಗುತ್ತಾ ಎದೆ ನಗಾರಿ ಬಡಿದಂತೆ ಆಗುತ್ತಿತ್ತು, ಉಸಿರಾಡಲೂ ಕೂಡ ಅದ್ಯಾಕೋ ಕಷ್ಟವಾಗುತ್ತಿದೆ ಎನ್ನಿಸುವಂತೆ. ಆಗೆಲ್ಲ ನಾನಂದುಕೊಳ್ಳುತ್ತಿದ್ದೆ. ನೀನೆನಾದರು ಆಗ ಮಾತನಾಡಿಸಿಬಿಟ್ಟರೆ ಗುಂಡಿಗೆ ನಿಂತೆಬಿಡುತ್ತದೆ ಎಂದು. ಆದರೆ ಇದೆಲ್ಲ ಹೇಗೆ ಆಯಿತೊ ನಿಜವಾಗಿಯೂ ಗೊತ್ತಾಗುತ್ತಿಲ್ಲ. ಒಮ್ಮೊಮ್ಮೆ ನನ್ನ ಮೇಲೆಯೇ ನನಗೆ ಅನುಮಾನ, ಭ್ರಮಾನಿರತನಾಗಿಬಿಟ್ಟನೇ ಎಂದು, ನಿಜವಾಗಿಯೂ ನನ್ನ ಪಕ್ಕ ಕುಳಿತಿರುತ್ತಿದ್ದುದು ನೀನು ಎಂಬುದು ಇಂದಿಗೂ ಕಾತರಿ ಇಲ್ಲ. ಮಾತಾಡಲು ಹಂಜಿಕೆಪಡುತ್ತಿದ್ದವನು ಅದೇಗೆ ನಿನ್ನ ಜೊತೆ ಕಿತ್ತಾಡುತ್ತ, ಬೈಸಿಕೊಂಡು, ಪರಚಿಸಿಕೊಂಡು ನೆಮ್ಮದಿಪಡುತ್ತಿದ್ದೆ ಎಂಬುದು ಇವೋತ್ತಿಗು ಅನುಮಾನವೇ ಕಣೆ, ಯಪ್ಪಾ ಬಜಾರಿ, ನೀನು ಮುನಿಸಿಕೊಂಡಾಗಲಂತು ತಪಸ್ಸು ಮಾಡಿದ್ದೇನೆ ಕಣೆ. ಆಡಬಾರದ ನಾಟಕಗಳನ್ನ ಆಡಿ ನಗಿಸಲು ಯತ್ನಿಸಿ ಸೋತಿದ್ದೇನೆ. ಎಷ್ಟು ಕಾಡಿಸಿದ್ದೆ ಕಣ್ಣಿರು ಹಾಕಿಸಿದ್ದೆ ನೀನು. ಸೇಡಿ ತೀರಿಸಿಕೊಳ್ಳಲು ನನ್ನೆಲ್ಲಾ ಶಕ್ತಿಯನ್ನ ಒಟ್ಟುಗೂಡಿಸಿಕೊಳ್ಳುತ್ತಿದ್ದೇನೆ. ಇವೆಲ್ಲ ಯಾಕೆ ಹೇಳುತ್ತಿದ್ದೇನೋ ಕಾಣೆ. ಇಂತ ತಿಕ್ಕಲು ಭಾವಗಳು ಪ್ರೀತಿಯಲ್ಲಿ ಮಾತ್ರವೇ ಯಾಕೆ ಇರುತ್ತದೆಯೋ ಗೊತ್ತಿಲ್ಲ ಕಣೆ.

ನೀನು ಇಲ್ಲಿಂದ ನಿಮ್ಮೂರಿಗೆ ಹೋದಮೇಲೆ ನಾವು ಅಡ್ಡಾಡಿದ ಜಾಗಗಳು ತುಂಬಾನೇ ಕಾಡಿಸೋಕೆ ಶುರು ಮಾಡಿವೆ. ಮಾಸ್ತಮ್ಮನ ಗುಡಿಯ ಹಿಂದೆ ಮೊದಲ ಬಾರಿ ನಿನ್ನ ತುಟಿಗಳನ್ನ ಕಚ್ಚಿದ ದಿನ ಕೆತ್ತಿದ್ದ ನಮ್ಮ ಹೆಸರುಗಳನ್ನ ಅಳಿಸಿಹಾಕಿದ್ದಾರೆ, ಅದೆನೋ ದೇವಸ್ಥಾನದ ಜೀರ್ಣೋದ್ಧಾರವಂತೆ. ನೀನಿದ್ದ ಮನೆಯ ಹತ್ತಿರನೂ ಹೋಗಿದ್ದೆ. ಆ ಬೀದಿ ತುಂಬೆಲ್ಲಾ ಜಾತಿ-ಜನಿವಾರಗಳ ಕೊಳಕು ಚರಂಡಿ ತುಂಬೆಲ್ಲಾ ಹರಿಯುತ್ತಿತ್ತು. ಅಕ್ಕ-ಪಕ್ಕದ ಬೇಲಿ ಹೂಗಳು ಸಹ ಸುಗಂಧ ಮರೆತುಬಿಟ್ಟಿದ್ದಾವೆ ಕಣೆ. ಇತ್ತೀಚೆಗೆ ನಮ್ಮೂರಲ್ಲಿ ಗೋಧೂಳಿ ಕಿರಣಗಳಂತೂ ಸುಡುವಷ್ಟು ಜ್ವಲಿಸುತ್ತಿವೆ. ಹೊತ್ತುಕರಗುವ ಮುನ್ನ ನಾವೂ ಅಪ್ಪಿಕೊಂಡಾಗ ಹೊಮ್ಮುತ್ತಿದ್ದ ನಿನ್ನ ಮೈಬೆವರ ಕಮಟು ಗಂಧವನ್ನ ಹುಡುಕುತ್ತಿರುತ್ತೇನೆ. “ಹಾಗಾದ್ರೆ ಮರೆತುಬಿಟ್ಟಿದ್ದೀಯಾ” ಎನ್ನಬೇಡ. ಏನುಮಾಡಲಿ, ಈ ಚರಂಡಿ ಹೊಲಸು ಊರನ್ನೇ ಆವರಿಸಿಕೊಂಡುಬಿಟ್ಟಿದೆ. ಯಾಕೋ ತುಂಬಾ ನೆನಪಾಗ್ತಿಯ ಕಣೆ. ರಾತ್ರಿಯ ನಿರವತೆ ಕಿವಿಕಚ್ಚುತಿರುತ್ತೆ. ಅಲ್ಲೆಲ್ಲೊ ನಿನ್ನ ನಗು, ಆ ಕಾಲ್ಗೆಜ್ಜೆ ಸದ್ದು ಸದ್ದಡಗಿ ಹೋಯ್ತೆನೋ ಅನ್ನಿಸುತ್ತಿರುತ್ತೆ. ಇನ್ನೂ ಕಾಯಲಾರೆ, ನಿನ್ನ ಸೇರಲೆಬೇಕೆಸಿದೆ. ಯಾವ ಕಟ್ಟುಕಟ್ಟಳೆಗಳಿಲ್ಲದ, ಅಂತಸ್ತಿನ ಅತಿ-ಮಿತಿ, ಜಾತಿಗಳ ಆಳ-ಅಡಿಗಳೂ, ಕನಿಷ್ಟ ಸರಿ-ತಪ್ಪುಗಳ ಭಯದಿಂದ ಹೊರತಾದ ಲೋಕವೊಂದಿದೆಯಂತೆ, ಅಲ್ಲಿ ಸೇರೋಣ. ನಿನ್ನ ರೆಕ್ಕೆಗಳೆಲ್ಲಿ ಸುಟ್ಟಾವೋ ಎಂಬ ಭಯಕೆ ನನ್ನ ಚೈತನ್ಯ ನಂದಿಹೋಗಿದೆ. ಕ್ಷಮಿಸೇ ಪತಂಗ. ನಿಟ್ಟುಸಿರು ಸದ್ದಡಗಿದೆ. ಕಣ್ಣಾಲಿಗಳು ತುಂಬಿ ಎಲ್ಲಾ ಮಾಸಲು ಮಾಸಲು. ನಿಲ್ಲಿಸಿಬಿಡುತ್ತೇನೆ. ಹ್ಹಾ.. ಮರೆತಿದ್ದೆ. ಎಲ್ಲರನ್ನು ಕೇಳಿದೆ ಅಂತ ಹೇಳು.

ನಿನ್ನ ಗಂಡನನ್ನೂ…

ಇಷ್ಟೆಲ್ಲಾ ಹೇಳಿದ ಮೇಲೂ ಪತ್ರವನ್ನ ಪೋಸ್ಟ್ ಮಾಡುವುದನ್ನು ಬೇಕೆಂದೆ ಮರೆತಿರುತ್ತೇನೆ. ಎಂದಿನಂತೆ ಶಪಿಸಿಕೊ.

ಕಯ್ಯಾರೆ ಕುಯ್ದು ತಂದು
ಮಾಲೆ ಕಟ್ಟಿದ ಹೂ
ಮತ್ಯಾರದೋ ಮುಡಿಯೇರಿದೆ
ಹೂಗಂಧವಿನ್ನೂ ಉಳಿದೇಯಿದೆ
ಕೈ ಬೆರಳುಗಳಲ್ಲಿ.

-ಶರತ್ ಚಕ್ರವರ್ತಿ
14-02-13

2 ಕಾಮೆಂಟ್‌ಗಳು:

  1. ನನ್ನನ್ನು ಕಾಲದ ಯಂತ್ರದಲ್ಲಿ ಕೂಡಿಸಿ ಗುಲ್ಮೊಹಾರದ ಅಡಿಯ ಕಲ್ಲು ಬೇಂಚಿಗೆ ಕಳುಹಿಸಿದ ನಿಮ್ಮ ಬರಹ ನನ್ನನ್ನು ವಿಹ್ವಲ ಮಾಡಿಟ್ಟಿತು. ಯಾವುದೋ ನೆನಪು... ಎಲ್ಲಿಯದೋ ಎಳೆ... ಹೇಳಿಕೊಳ್ಳಲಾರದ ಪುಳಕ... ಮತ್ತೆ ಬಿಕ್ಕಳಿಕೆ....
    http://www.badari-poems.blogspot.in/

    ಪ್ರತ್ಯುತ್ತರಅಳಿಸಿ