ಶುದ್ದ ಆಷಾಡದ ಪೌರ್ಣಮಿಯ ರಾತ್ರಿಯೊಳು
ಕನಸಿನಿಂದೆಚ್ಚೆತ್ತು ನಿದ್ರಾಹೀನನಾಗಿ
ಚಳಿಯಲ್ಲಿ ಮೈದಡವುತ್ತಾ ಹೊರನಡೆದಾಗ
ಕಂಡೆ....
ಹಾಲುಕೊಡ ಚೆಲ್ಲಿದಂತಿದ್ದ ಮುಗಿಲ ಬಯಲು
ಅದು ಬೆಳದಿಂಗಳು.
ರವಿಕಾಂತಿಯಿಂದ ಕದ್ದ ಶಶಿಕಾಂತೀಯಾ
ತೇಜಸ್ಸು ಸಕಲ ಜಡ-ಚೇತನಗಳ
ಮೇಲು ತನ್ನ ಬೆಳ್ಳಿ ರೇಖೆ ಮೂಡಿಸಿತ್ತು
ಆದರೆ....
ಅದರೊಳ್ ಅಲ್ಲಾವುದೋ ಪರಿಚಯದ ಮೊಗ
ಅವಳು ಬೆಳದಿಂಗಳ..?
ನಕ್ಕಾಗ ಹೊಮ್ಮುವ ಕಂಗಳ ಕಾಂತಿ,
ಬಳಿ ಸುಳಿದಾಗ ಸೆಳೆಯುವ ತಂಗಾಳಿ
ಸ್ಪರ್ಶ, ಚಕಿತಗೊಂಡರೂ ಅರಿತೆ
ಎನ್ನ...
ತಿಳಿಮನದ ಬೆಳ್ಮುಗಿಲ ಬನಕೆ
ಅವಳೇ ಬೆಳದಿಂಗಳು.
ಮುನಿದಾಗ ಕೋಪದಿ ಮೋಡದ ಮರೆಗೆ
ಸಾಗಿ, ಒಲಿದಾಗ ಚಂದದ ಬಿಂಕದಲಿ
ಬೀಗಿ, ನಲುಮೆಯಲಿ ನಕ್ಕು ಮೃದುವಾಗಿ
ನಾ...
"ಚಿನ್ನಾ" ಎಂದಾಗ ಕೈಗೆ ಸಿಗದೇ ಕಾಡಿದ
ಅವಳು ಬೆಳದಿಂಗಳೆ..?
ಮಳೆಯಲಿ ನೆಂದು ನಾಚಿ ನೀರಾದ ಹಾದಿಯ
ಬಿಂಬದೊಳು ಎನ್ನನೆ ಹಿಂಬಾಲಿಸಿ, ನಾ
ನಿಂತೆಡೆ ತಾನು ನಿಂತು ನಕ್ಕಿತು ಚಂದ್ರಬಿಂಬ
ಅಂತೆಯೇ....
ನನ್ನೊಡನೆ ಜೊತೆಯಾಗಲು ಅಣಿಯಾದ
ಅವಳು ಬೆಳದಿಂಗಳು.
ದಿನಕಳೆದಂತೆ ಎದೆಯಲಿ ಬೆಳ್ಳಿ ಬೆಳಕು
ಕ್ಷೀಣಿಸುತ್ತಾ, ಒಲವ ಹಾಲ್ತೊರೆಯು
ಬತ್ತಿರಲು, ಎನ್ನೊಲವನೇ ಕಡೆಗಾಣಿಸಿ
ಕೊನೆಗೆ...
ಅಮಾವಾಸ್ಯೆಯ ಕಾರ್ಗತ್ತಲಲಿ ಕೈ ಚೆಲ್ಲಿದ
ಅವಳು ಬೆಳದಿಂಗಳೇ..?
ಜಗದ್ಯಾವ ಮೂಲೆಯೊಳು ನಿಂತು ಕಾದರೂ,
ನೋಡಲು ಪರಿತಪಿಸಿದರೂ ಕಾಣದು
ಶಶಿಯ ಹಿಂದಿನ ಮತ್ತೊಂದು ಮೊಗ
ಅಂತೆಯೇ...
ಸನಿಹವಿದ್ದರೂ ಕಾಣದಾದೇ ಆಕೆಯ ಅಂರ್ತಮನ
ಹೌದು... ನಿಜ,
ಅವಳು ಬೆಳದಿಂಗಳೇ......!
ಶರತ್ ಚಕ್ರವರ್ತಿ.
ಆಗಸ್ಟ್ 6, 2011
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ