ಭಾನುವಾರ, ಜೂನ್ 16, 2013

ಒಂದು ಪೋರ್ಟ್ ಮಾಟಂ'ನ ಸುತ್ತ..


ಅದ್ಯಾವ ಸಿಂಡ್ರೆಲಾ ಬಿಟ್ಟು ಹೋದ ಚಪ್ಪಲಿಯೋ
ಒಂಟಿಯಾಗಿ ನೇತಾಡುತ್ತಿದೆ ಚಮ್ಮಾರನರಮನೆಯಲ್ಲಿ
ಅದರ ಬೆನ್ನಿಗೆ ಬೆನ್ನು ಕೊಟ್ಟು ಕುಳಿತು
ಕಾಲ್ಬೆರಳರಲಿ ಎದೆಮೆಟ್ಟಿ ಜುಟ್ಟುಹಿಡಿದು
ಸ್ವಾಟೆ ಸಿಗಿಳಿ ಹೊಲಿಗೆಹಾಕುತ್ತಿದ್ದಾನವನು
ಕಣಿ ಹೊಡೆಯಲು ಬಂದು
ಬೀಡಿ ಊಪುತ್ತಿದ್ದ ಮುದುಕನ ಕನ್ನಡಕದ ಮೇಲಿನ ಧೂಳು
ರಸ್ತೆಗೆ ದೃಷ್ಟಿನೆಟ್ಟು ಸಾಂದ್ರತೆಯ ಸೋಗಿನಲ್ಲಿದೆ
ಒಳಗಿದ್ದ ಮಂದಗಣ್ಣು ಅದರರಿವಿಲ್ಲದೇ
ಮಗಳ ಭವಿಷ್ಯತ್ತನ್ನು ತಡಕಾಡುತ್ತಿವೆ
ಮುತ್ತಿಡುವ ಪೈಪೋಟಿಯಲ್ಲಿ ಕಚ್ಚಾಡುವ ನೊಣಗಳ
ಕಂಡು ನಾಚಿ ಕೆಂಪೇರುತ್ತಿದೆ ಟೀ ಲೋಟ
ತನ್ನೊಳಗಿರುವುದು ಮಧುರಸವೆಂದೆ ಅದರ ಭ್ರಮೆ
ಬೀಡಿ ಹೊಗೆಬಿಟ್ಟ ಬಾಯಿಗೆ
ಬಿಸಿಯಾರಿದ ಟೀ ಮೇಲಿನ ತಾತ್ಸಾರದಿಂದ ತುಟಿ ಒಣಗಿದೆ
ಮೈಸುಟ್ಟುಕೊಂಡು ಮಜಕೊಡುವ ಬೀಡಿ ಕಿಟ್ಟವಾಗಿ ಉದುರಿದಾಗ
ಮೈ ಹೊಲಿಸಿಕೊಂಡು ಹೊರಬಿದ್ದ ಮೆಟ್ಟಿಗೆ ಬಿಡುಗಡೆಯ ಭಾಗ್ಯ
; ಐವತ್ತು ರೂಪಾಯಿ ಜಾಮೀನಿನ ಹೊರೆ
ಮುಸಿ ಮುಸಿ ನಗುತ್ತಿದ್ದ ಗಾಂಧಿಯನ್ನೊಪ್ಪಿಸಿ
ಮೆಟ್ಟಿನ್ಹೆಣ ಬಿಡಿಸಿಕೊಂಡು ಮನೆಗೆ ಹೊರಟೆ.

ಶರತ್ ಚಕ್ರವರ್ತಿ.

ಚಡ್ಡಿಯ ಪೋಸ್ಟಾಪೀಸು ಮುಚ್ಚಿದಾಗ

ಮೆಟ್ಟಿ ಊರಿ ಮತ್ತೆ ಕಿತ್ತು ಮುಂದೆ ಇಟ್ಟು
ನಡೆದು ಬಂದ ಹೆಜ್ಜೆಗುರುತುಗಳು
ಮುಚ್ಚಿಹೋದವುಗಳೆಷ್ಟೋ
ಕೊಚ್ಚಿಹೋದವುಗಳೆಷ್ಟೋ
ಮೆಚ್ಚಿ ಹಚ್ಚಳಿಯದೇ ಉಳಿದುಬಿಟ್ಟವುಗಳೆಷ್ಟೋ
ಮತ್ತವೆ ಗುರುತುಗಳ ತಲೆತುಳಿದು ನಡೆದು
ಪಾದದಳತೆ ಅಳೆದು ಹೆಜ್ಜೆಗಳ ಲೆಕ್ಕ ಇಡಬೇಕಿದೆ

ಹೊಟ್ಟೆಯ ಹಿಡಿದಿಟ್ಟುಕೊಳ್ಳಲಾಗದ ಬನೀಯನ್ನಿನ
ಬೆನ್ನ ಹಿಂದೆ ಖನ್ನ ಹಾಕಿ ಪೇರಿಕಿತ್ತು
ಜಿಲೇಬಿರಸದ ಬೆರಳು ನೆಕ್ಕಿ
ಬುಡುಬುಡುಕೆಯೊಳಗಿನ ಬುರುಡೆ ಮಾತುಗಳ ಬೆನ್ನುಹತ್ತಿ
ಗಟ್ಟು ಹೊಡೆದು ಅಣಕವಾಡಿ
ಹರಿದ ಚಡ್ಡಿಯ ಬಾಯ ದಬ್ಬಳ ದಳೆದು
ಪೋಸ್ಟಾಪಿಸು ಬಾಗಿಲೆಳೆದುಕೊಂಡಿತು

ಸಗಣಿ ಬಳಿದ ಹಸುರಾಕಾಶದಲಿ ತಾರೆಗಳನ್ನಿಟ್ಟು
ಹಟ್ಟಿ ಎದೆಗೆ ರಂಗೋಲಿ ಹರಡಿದವಳ
ಹಿಣುಕಿದ ತುಂಬುತನದ ಮುಂದೆ
ಅಲುಗದೇ ಅಂಟು ನಿಂತ ಹೆಜ್ಜೆಗುರುತು ಮಾಸಲಾಗಿದೆ
ಕಣ್ಣ ಪೊರೆ ಬಲಿತಿರಬೇಕು

ಪಡಿಮೂಡದವಳ ಹಚ್ಚನ್ನರಸಿ
ಅಲೆದು ಸವೆದ ಪಾದತಳ
ಹೊಸೆದುಕೊಂಡು ಹರಿದುಕೊಂಡು
ನಿಶೆಯೇರಿ ತೂರಾಡಿಕೊಂಡು
ಬೇಲಿ ಹಾರಲು ಹೋಗಿ ಮಂಡಿ ತರಚಿಕೊಂಡು
ತಿರುಗಿ ಮರುಗಿಕೊಂಡ ಹೆಜ್ಜೆಗಳು

ಎರಗಿ ಬಂದಂತೆ ಮಾಡಿ
ತೋಯ್ದು ನಿಂತುಕೊಂಡ ನಿರ್ಲಿಪ್ತ
; ನಿರುತ್ತರ ಹೆಜ್ಜೆಗಳು
ತಿರುಗಿ ನಿಂತು ಹಾದಿ ಮರೆತ ಹೆಜ್ಜೆಗಳು
ಗುರುತುಗಳ ಗೋಜ ಬಿಟ್ಟು
ನೆಟ್ಟು ನಡೆಯುತ್ತಲೇ ಇರುವ ಹೆಜ್ಜೆಗಳು
ಇನ್ನೆಲ್ಲಿಯ ಗುರುತುಗಳು.


ಶರತ್ ಚಕ್ರವರ್ತಿ.